ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಪಿಎಲ್‌ಡಿ ಬ್ಯಾಂಕ್‌ ಸಾಲ ಮನ್ನಾ ಮಾಡಲಿ: ಸೊಣ್ಣೇಗೌಡ

ರಾಜ್ಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕ ಒತ್ತಾಯ
Last Updated 31 ಆಗಸ್ಟ್ 2018, 13:00 IST
ಅಕ್ಷರ ಗಾತ್ರ

ಕೋಲಾರ: ‘ಪಿಎಲ್‌ಡಿ ಮತ್ತು ಪಿ–ಕಾರ್ಡ್‌ ಬ್ಯಾಂಕ್‌ಗಳು ರೈತರಿಗೆ ನೀಡಿರುವ ಮಧ್ಯಮ ಮತ್ತು ದೀರ್ಘಾವಧಿ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ಇಲ್ಲವೇ, ಸಾಲ ವಸೂಲಾತಿಗೆ ಅನುಮತಿ ನೀಡಬೇಕು’ ಎಂದು ರಾಜ್ಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕ ಸೊಣ್ಣೇಗೌಡ ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರೇಷ್ಮೆ, ಮಾವು, ತೋಟಗಾರಿಕೆ, ಹೈನುಗಾರಿಕೆ, ಕುರಿ ಮತ್ತು ಕೋಳಿ ಸಾಕಾಣಿಕೆ, ಗುಲಾಬಿ ಬೆಳೆಗಾಗಿ ಬ್ಯಾಂಕ್‌ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ನೀಡಿದೆ. ಆದರೆ, ಸರ್ಕಾರ ಸಾಲ ಮನ್ನಾ ಸೌಲಭ್ಯವನ್ನು ಅಲ್ಪಾವಧಿ ಸಾಲಕ್ಕೆ ಮಾತ್ರ ಸೀಮಿತಗೊಳಿಸಿರುವುದರಿಂದ ನಮ್ಮ ಬ್ಯಾಂಕ್‌ಗೆ ತೊಂದರೆಯಾಗಿದೆ’ ಎಂದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸಾಕಷ್ಟು ರೈತರಿಗೆ ಬ್ಯಾಂಕ್ ಸಾಲ ನೀಡಿದೆ. ಈ ಪೈಕಿ ಹೆಚ್ಚಿನ ಮಂದಿ ಸುಸ್ತಿ ಮೊತ್ತ ಉಳಿಸಿಕೊಂಡಿದ್ದಾರೆ. ಸುಸ್ತಿದಾರರಾಗಿ ಸರ್ಕಾರದ ಸಹಾಯಧನಕ್ಕೆ ಒಳಪಡದೆ ಶೇ 16ರಷ್ಟು ಬಡ್ಡಿ ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವಿವರಿಸಿದರು.

ಸಂಕಷ್ಟಕ್ಕೆ ಸಿಲುಕಿವೆ: ‘ಸರ್ಕಾರದ ಆದೇಶದಿಂದಾಗಿ ಪಿಎಲ್‌ಡಿ ಮತ್ತು ಪಿ–ಕಾರ್ಡ್‌ ಬ್ಯಾಂಕ್‌ಗಳು ದೀರ್ಘಾವಧಿ ಸಾಲ ವಸೂಲಿ ಮಾಡದಂತಾಗಿದೆ. ರಾಜ್ಯದಲ್ಲಿ ಈ ಬ್ಯಾಂಕ್‌ಗಳಿಂದ 1,85,933 ರೈತರಿಗೆ ₹ 1,542 ಕೋಟಿ ಸಾಲ ನೀಡಲಾಗಿದೆ. ಸರ್ಕಾರ ಸಾಲ ಮನ್ನಾ ಘೋಷಿಸಿದ ನಂತರ ಸಾಲಗಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡದ ಕಾರಣ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ಹೇಳಿದರು.

‘ಬಲವಂತವಾಗಿ ಸಾಲ ವಸೂಲಿ ಮಾಡದಂತೆ ಸರ್ಕಾರ ಆದೇಶ ಹೊರಡಿಸಿರುವುದರಿಂದ ಸಾಲ ವಸೂಲಾತಿ ಮಾಡುವಂತಿಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಬ್ಯಾಂಕ್‌ನ ರಾಜ್ಯ ಮಟ್ಟದ ಸಭೆಗಳಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಸೂಲಿಗೆ ಅವಕಾಶ: ‘ಸರ್ಕಾರವು ಪಿಎಲ್‌ಡಿ ಮತ್ತು ಪಿ–ಕಾರ್ಡ್ ಬ್ಯಾಂಕ್‌ಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡಬೇಕು. ಇಲ್ಲವೇ, ಸಾಲ ಮನ್ನಾ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿ ವಸೂಲಿಗೆ ಅವಕಾಶ ನೀಡಬೇಕು. ಸಾಲ ಮನ್ನಾ ಆಗುವುದಿಲ್ಲ ಎಂಬ ಸ್ಪಷ್ಟ ಆದೇಶ ಹೊರಬಿದ್ದರೆ ರೈತರು ಸಾಲ ಮರುಪಾವತಿಸುತ್ತಾರೆ. ಇಲ್ಲದಿದ್ದರೆ ಬಡ್ಡಿ ಹೊರೆ ಹೆಚ್ಚಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪಿಎಲ್‌ಡಿ ಬ್ಯಾಂಕ್‌ಗಳು ನಬಾರ್ಡ್‌ನಿಂದ ಸಾಲ ಸೌಲಭ್ಯ ಪಡೆಯಬೇಕು. ಸಾಲ ವಸೂಲಾತಿ ಪ್ರಮಾಣ ಶೇ 70ರಷ್ಟಿದ್ದರೆ ಮಾತ್ರ ನಬಾರ್ಡ್‌ನಿಂದ ಸಾಲ ಸೌಲಭ್ಯ ಸಿಗುತ್ತದೆ. ಸರ್ಕಾರದ ಸಾಲ ಮನ್ನಾ ನೀತಿಯಿಂದ ಕೋಲಾರ ಜಿಲ್ಲೆಯಲ್ಲಿ ಸಾಲ ವಸೂಲಾತಿ ಪ್ರಮಾಣ ಶೇ 45ಕ್ಕೆ ಕುಸಿದಿದೆ. ರೈತರು ಸಾಲ ಮರುಪಾವತಿಸದೆ ಸಾಲ ಮನ್ನಾ ಅವಕಾಶಕ್ಕಾಗಿ ಕಾಯುತ್ತಿರುವುದು ಬ್ಯಾಂಕ್‌ ಆರ್ಥಿಕ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ’ ಎಂದರು.

ಜಿಲ್ಲೆಯ ವಿವಿಧ ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರಾದ ವೆಂಕಟೇಶ್, ಮುನೇಗೌಡ, ಪಿ.ಆರ್.ಕೃಷ್ಣಾರೆಡ್ಡಿ. ರಾಮಚಂದ್ರಪ್ಪ, ಎಚ್.ಎನ್.ನಾರಾಯಣಸ್ವಾಮಿ, ರಂಗಾರೆಡ್ಡಿ, ಶಿವಪ್ರಕಾಶ್ ಹಾಜರಿದ್ದರು.


* 7,331 ಮಂದಿ ಅವಿಭಜಿತ ಕೋಲಾರ ಜಿಲ್ಲೆಯ ರೈತರಿಗೆ ಸಾಲ
* ₹ 109.97 ಕೋಟಿ ಪಿಎಲ್‌ಡಿ ಬ್ಯಾಂಕ್‌ನಿಂದ ಸಾಲ ನೀಡಿಕೆ
* 4,295 ರೈತರು ಸುಸ್ತಿ ಮೊತ್ತ ಉಳಿಸಿಕೊಂಡಿದ್ದಾರೆ
* ₹ 30.69 ಕೋಟಿ ಸುಸ್ತಿ ಬಾಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT