ಮಂಗಳವಾರ, ಜೂನ್ 28, 2022
26 °C

ಗ್ರಾ.ಪಂ: ₹ 10 ಲಕ್ಷ ಅನುದಾನಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಗ್ರಾಮೀಣ ಭಾಗದಲ್ಲಿ ಕೋವಿಡ್‌ 2ನೇ ಅಲೆ ಆರ್ಭಟ ಹೆಚ್ಚಿದ್ದು, ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗೆ ₹ 10 ಲಕ್ಷ ಅನುದಾನ ಬಿಡುಗಡೆ ಮಾಡಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ ಅವರಿಗೆ ಮನವಿ ಸಲ್ಲಿಸಿದರು.

‘ಕೋವಿಡ್‌ ನಿರ್ವಹಣೆಗಾಗಿ ಸರ್ಕಾರ ಸದ್ಯ ಪ್ರತಿ ಗ್ರಾ.ಪಂಗೆ ₹ 50 ಸಾವಿರ ಅನುದಾನ ಘೋಷಿಸಿದೆ. ಆದರೆ, ಈ ಹಣ ಯಾವುದಕ್ಕೂ ಸಾಲುವುದಿಲ್ಲ. ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಬೇಕು. ನರೇಗಾದಲ್ಲಿ ಕಾಮಗಾರಿಗಳಲ್ಲಿ ಜೆಸಿಬಿ ಬಳಕಗೆ ಕಡಿವಾಣ ಹಾಕಬೇಕು’ ಎಂದು ಕೋರಿದರು.

‘ಕೋವಿಡ್ 2ನೇ ಅಲೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ತೀವ್ರವಾಗಿದೆ. ಹಳ್ಳಿಗಳಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಹಲವು ಕಾರ್ಯಕ್ರಮ ಹಮ್ಮಿಕೊಂಡು ವಿಶೇಷ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಪ್ರತಿ ಗ್ರಾ.ಪಂಗೆ ₹ 50 ಸಾವಿರ ನೀಡಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಕಷ್ಟು ಹಳ್ಳಿಗಳಿವೆ. ಸರ್ಕಾರ ನೀಡಿರುವ ಅನುದಾನ ಹಂಚಿಕೆ ಮಾಡಿದರೆ ಪ್ರತಿ ಹಳ್ಳಿಗೆ ಕನಿಷ್ಠ ₹ 8 ಸಾವಿರವೂ ಬರುವುದಿಲ್ಲ’ ಎಂದು ಹೇಳಿದರು.

ಅನುದಾನ ಸದ್ಬಳಕೆ: ‘ಈಗ ಘೋಷಣೆ ಮಾಡಿರುವ ಹಣದಿಂದ ಪರಿಣಾಮಕಾರಿಯಾಗಿ ಕೋವಿಡ್‌ ನಿಯಂತ್ರಿಸುವುದು ಸಾಧ್ಯವಿಲ್ಲ. ಈ ಸಂಗತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತಂದು ಪ್ರತಿ ಗ್ರಾ.ಪಂಗೆ ಕನಿಷ್ಠ ₹ 10 ಲಕ್ಷ ಅನುದಾನ ಮಂಜೂರು ಮಾಡಿಸಬೇಕು’ ಎಂದು ಸಂಘಟನೆ ಸದಸ್ಯರು ಮನವಿ ಮಾಡಿದರು.

‘ಲಾಕ್‌ಡೌನ್‌ ಕಾರಣಕ್ಕೆ ನಗರ ಪ್ರದೇಶದಿಂದ ಹಳ್ಳಿಗಳಿಗೆ ಬಂದಿರುವ ಬಡ ಜನರಿಗೆ ನರೇಗಾದಲ್ಲಿ ಉದ್ಯೋಗ ನೀಡಬೇಕು. ನರೇಗಾದಲ್ಲಿ ನಿಯಮಬಾಹಿರವಾಗಿ ಜೆಸಿಬಿ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ನರೇಗಾ ಅನುದಾನ ಸದ್ಬಳಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ವಿ.ಮಂಜುನಾಥ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು