ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ | ಬಿಸಿಲಿನ ಬೇಗೆ: ಜನರಿಗೆ ತಂಪು ಪಾನೀಯಗಳೇ ಆಸರೆ

ಸಾರ್ವಜನಿಕರ ಸ್ಥಳಗಳಲ್ಲಿ ತಲೆ ಎತ್ತಿರುವ ಕಲ್ಲಂಗಡಿ ಟೆಂಟ್‌ಗಳು
ಮಂಜುನಾಥ ಎಸ್.
Published 5 ಮೇ 2024, 6:04 IST
Last Updated 5 ಮೇ 2024, 6:04 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನಲ್ಲಿ ವಾಡಿಕೆಗಿಂತ ಉಷ್ಣಾಂಶ ಏರಿಕೆಯಾಗಿದ್ದು, ಬಿಸಿಲಿನಿಂದ ಜನ ಹೈರಾಣಾಗಿ ದಾಹ ತೀರಿಸಿಕೊಳ್ಳಲು ಎಳನೀರು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ಎಂದಿಗಿಂತ ಬಿಸಿಲಿನ ತಾಪ ಹೆಚ್ಚಾಗಿದ್ದು, ಇದರಿಂದಾಗಿ ಮಕ್ಕಳು ಮತ್ತು ವೃದ್ಧರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಯನಿಮಿತ್ತ ಮನೆ, ಕಚೇರಿಗಳಿಂದ ಹೊರ ಬರುವ ಜನರು ರಸ್ತೆ ಬದಿ, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಕಲ್ಲಂಗಡಿ, ಎಳನೀರು, ಮಜ್ಜಿಗೆ, ಜ್ಯೂಸ್, ತಾಟಿನಿಂಗು, ಕಬ್ಬಿನ ಹಾಲು ಸೇವಿಸಿ ಬಾಯಾರಿಕೆ ತೀರಿಸಿಕೊಳ್ಳುತ್ತಿದ್ದಾರೆ.

ಒಂದೆಡೆ ನೆತ್ತಿಸುಡುವ ಸೂರ್ಯ, ಮತ್ತೊಂದೆಡೆ ಸೂರ್ಯನ ತಾಪ ತಡೆಯಲಾರದೆ ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದಾರೆ. ಕೆರೆಗಳ ನೀರೆಲ್ಲಾ ಖಾಲಿಯಾಗಿದ್ದು ಭೂಮಿ ಕಾದ ಕೆಂಡದಂತಾಗಿದೆ. ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದರೆ ತಾಲ್ಲೂಕಿನಲ್ಲಿ ಈ ಬಾರಿ ಹೆಚ್ಚು ತಾಪಮಾನ ದಾಖಲಾಗಿದೆ. ಈ ತಾಪಮಾನಕ್ಕೆ ಜನ ತತ್ತರಿಸಿದ್ದಾರೆ. 

ಬಂಗಾರಪೇಟೆ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಕಲ್ಲಂಗಡಿ ಹಣ್ಣಿನ ಟೆಂಟ್‌ಗಳು ಇದ್ದು, ಉತ್ತಮ ವ್ಯಾಪಾರವೂ ಆಗುತ್ತಿದೆ.

ಎಳನೀರಿಗೆ ಬೆಲೆ ಏರಿಕೆ: ಸಕಾಲಕ್ಕೆ ಮಳೆಯಾಗದ ಕಾರಣ ತೆಂಗಿನ ಮರದಲ್ಲಿ ಎಳನೀರು ಇಳುವರಿ ಮತ್ತು ಗುಣಮಟ್ಟ ಕುಂಠಿತಗೊಂಡಿರುವುದರಿಂದ ಬೆಲೆಯೂ ಅಧಿಕವಾಗಿದೆ. ಈ ಹಿಂದೆ ₹ 20 ರಿಂದ ₹30ಕ್ಕೆ ಮಾರಾಟವಾಗುತ್ತಿದ್ದ ಎಳನೀರು, ಈಗ ₹40ಕ್ಕೆ ಮಾರಾಟವಾಗುತ್ತಿದೆ. ಇದರ ನಡುವೆ ಕಬ್ಬಿನ ಹಾಲು ಸಹ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಪ್ರತಿ ಲೋಟ ₹20ಕ್ಕೆ ಮಾರಾಟ ಮಾಡುತ್ತಿದ್ದಾರೆ.

ತಾಟುನಿಂಗುಗೆ ಬೇಡಿಕೆ: ಬಿಸಿಲಿನ ಹವೆ ಹೆಚ್ಚಾಗುತ್ತಿದ್ದಂತೆ ತಾಟಿನಿಂಗುಗೆ ಸಹ ತಾಲ್ಲೂಕಿನಲ್ಲಿ ಬೇಡಿಗೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ಫಲ ಸಿಗುವಂತಹ ತಾಟುನಿಂಗು ದೇಹಕ್ಕೆ ತಂಪು ನೀಡುವ ಕಾಮಧೇನು. ಇದು ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದೆ. 

ಮಜ್ಜಿಗೆಗೆ ಮುಗಿಬಿದ್ದ ಜನ: ಬಾಯಾರಿಕೆ ನೀಗಿಸಿಕೊಳ್ಳಲು ಜನ ಮಜ್ಜಿಗೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದು, ನಂದಿನಿ ಮಳಿಗೆಗಳಲ್ಲಿ ಮಜ್ಜಿಗೆಗೆ ಬಾರಿ ಬೇಡಿಕೆ ಬಂದಿದೆ. ಸಾಮಾನ್ಯ ದಿನಗಳಲ್ಲಿ ಮಾರಾಟವಾಗುತ್ತಿದ್ದ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮಜ್ಜಿಗೆ ಮಾರಾಟವಾಗುತ್ತಿದೆ.

ತಾಟಿನಿಂಗಿನಲ್ಲಿ ಹೆಚ್ಚಿನ ಪೋಷಕಾಂಶಗಳಿದ್ದು, ಬೇಸಿಗೆಯಲ್ಲಿ ದೇಹ ತಂಪು ಮಾಡಿಕೊಳ್ಳಲು ಬೆಲೆ ಅಧಿಕವಿದ್ದರೂ ಜನ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ. ತಮಿಳುನಾಡಿನಿಂದ ಲೋಡ್‌ಗಟ್ಟಲೆ ತಂದು ಮಾರಾಟ ಮಾಡಲಾಗುವುದು ಎಂದು ತಾಟಿನಿಂಗು ಮಾರಾಟಗಾರ ಮುರುಗನ್ ಅವರ ಮಾತಾಗಿದೆ.

ಕಲ್ಲಂಗಡಿ ಹಣ್ಣಿನ ಟೆಂಟ್ 
ಕಲ್ಲಂಗಡಿ ಹಣ್ಣಿನ ಟೆಂಟ್ 
ತಾಟಿನಿಂಗಿನ ಅಂಗಡಿ
ತಾಟಿನಿಂಗಿನ ಅಂಗಡಿ

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT