ಶುಕ್ರವಾರ, ನವೆಂಬರ್ 15, 2019
22 °C

ಡಿಸಿಸಿ ಬ್ಯಾಂಕ್‌ನ ಠೇವಣಿ ಹೆಚ್ಚಿಸಿ: ಸಿಜಿಎಂ ಸೂರ್ಯಕುಮಾರ್ ಸಲಹೆ

Published:
Updated:
Prajavani

ಕೋಲಾರ: ‘ಡಿಸಿಸಿ ಬ್ಯಾಂಕ್‌ನ ಠೇವಣಿ ಮೊತ್ತ ಹೆಚ್ಚಿಸಲು ಆಡಳಿತ ಮಂಡಳಿ ಒತ್ತು ನೀಡಬೇಕು’ ಎಂದು ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ವಿ.ಎಸ್.ಸೂರ್ಯಕುಮಾರ್ ಸಲಹೆ ನೀಡಿದರು.

ಇಲ್ಲಿ ಮಂಗಳವಾರ ನಡೆದ ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಬ್ಯಾಂಕ್‌ನಿಂದ ವಿತರಣೆ ಮಾಡಿರುವ ವಿವಿಧ ರೀತಿಯ ಸಾಲದ ಮೊತ್ತಕ್ಕೆ ಹೋಲಿಕೆ ಮಾಡಿದರೆ ಠೇವಣಿ ಮೊತ್ತ ತುಂಬಾ ಕಡಿಮೆಯಿದೆ. ಇದರಿಂದ ಹೊಸದಾಗಿ ಸಾಲ ವಿತರಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ, ‘ರೈತರು ಮತ್ತು ಮಹಿಳೆಯರಿಗೆ ನೀಡಿರುವ ಸಾಲ ಸಮರ್ಪಕವಾಗಿ ಮರುಪಾವತಿಯಾಗುತ್ತಿದೆ. ಬ್ಯಾಂಕ್‌ನಲ್ಲಿ ಸದ್ಯ ₹ 372 ಕೋಟಿ ಠೇವಣಿಯಿದೆ. ಪ್ರತಿ ನಿರ್ದೇಶಕರಿಗೂ ಠೇವಣಿ ಮಾಡಿಸಲು ಗುರಿ ನೀಡಲಾಗಿದೆ’ ಎಂದು ತಿಳಿಸಿದರು.

‘ಹಿಂದಿನ ಹಣಕಾಸು ವರ್ಷದ ಸಾಲ ಮನ್ನಾ ಯೋಜನೆಯಲ್ಲಿ ₹ 320 ಕೋಟಿ ಬೆಳೆ ಸಾಲ ಮನ್ನಾ ಆಗಿದೆ. ಪ್ರತಿ ಸೊಸೈಟಿಯೂ ಆರ್ಥಿಕವಾಗಿ ಲಾಭ ಗಳಿಸಿದ್ದು, ಉತ್ತಮ ಸೊಸೈಟಿಯಿಂದ ಕನಿಷ್ಠ ₹ 1 ಕೋಟಿ ಠೇವಣಿ ಇಡಲು ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ಹೊಸ ಆಡಳಿತ ಮಂಡಳಿ ರಚನೆಯಾಗಿ ನಬಾರ್ಡ್‌ಗೆ ಭೇಟಿ ನೀಡಿದ್ದಾಗ ಅಲ್ಲಿನ ಮಹಿಳಾ ಅಧಿಕಾರಿಯೊಬ್ಬರು ಕೋಲಾರ ಡಿಸಿಸಿ ಬ್ಯಾಂಕ್‌ ಬಗ್ಗೆ ಹಗುರವಾಗಿ ಮಾತನಾಡಿ ಬ್ಯಾಂಕ್ ವಿಲೀನಗೊಳಿಸುವುದಾಗಿ ಹೇಳಿದ್ದರು, 6 ತಿಂಗಳಲ್ಲಿ ಬ್ಯಾಂಕ್‌ ಸುಧಾರಿಸುವುದಾಗಿ ಅವರಿಗೆ ಸವಾಲು ಹಾಕಿದ್ದೆ. ಆ ಮಾತಿನಂತೆಯೇ ನಡೆದುಕೊಂಡಿದ್ದೇನೆ’ ಎಂದರು.

ಸಶಕ್ತಗೊಳಿಸಿ: ‘ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಮತ್ತಷ್ಟು ತರಬೇತಿ ನೀಡಿ ಸಶಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ನಬಾರ್ಡ್ ಅಗತ್ಯ ನೆರವು ನೀಡಲಿದೆ. ಸಂಘಗಳು ಬಲಗೊಂಡರೆ ಬ್ಯಾಂಕ್ ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ಮಹಿಳೆಯರಿಗೆ ಕೊಟ್ಟ ಸಾಲ ಮರುಪಾವತಿ ಆಗುವುದರಿಂದ ಬ್ಯಾಂಕ್ ಉನ್ನತ ಮಟ್ಟಕ್ಕೆ ಹೋಗುತ್ತದೆ’ ಎಂದು ಸೂರ್ಯಕುಮಾರ್ ಅಭಿಪ್ರಾಯಪಟ್ಟರು.

‘ಡಿಸಿಸಿ ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗಿದ್ದು, ಪ್ರಸ್ತುತ ಇರುವ ₹ 275 ಕೋಟಿ ಠೇವಣಿ ಹೆಚ್ಚಿಸಿಕೊಳ್ಳುವ ಮೂಲಕ ಮತ್ತಷ್ಟು ಸದೃಢ ಆಗಬೇಕು. ಸ್ತ್ರೀಶಕ್ತಿ ಸಂಘಗಳ ಸದಸ್ಯರು ಮತ್ತು ರೈತರ ಬಳಿಯಿರುವ ಹೆಚ್ಚುವರಿ ಉಳಿತಾಯದ ಹಣವನ್ನು ಠೇವಣಿಯಾಗಿ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.

ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಅನಿಲ್‌ಕುಮಾರ್, ಕೆ.ವಿ.ದಯಾನಂದ್, ಸೋಮಣ್ಣ, ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್, ಬೈರೇಗೌಡ, ನಾಗೇಶ್, ಖಲೀಮ್‌ ಉಲ್ಲಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)