ಭಾನುವಾರ, ಮಾರ್ಚ್ 29, 2020
19 °C
ಪ್ರಧಾನಿ ಕರೆಗೆ ಸಕಾರಾತ್ಮಕ ಸ್ಪಂದನೆ: ಮನೆಯಲ್ಲೇ ಉಳಿದ ಜನ

‘ಜನತಾ ಕರ್ಫ್ಯೂ’ಗೆ ಪಕ್ಷಾತೀತ ಬೆಂಬಲ: ಕೋಲಾರ ಜಿಲ್ಲೆ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ‘ಜನತಾ ಕರ್ಫ್ಯೂ’ ಕರೆಗೆ ಜಿಲ್ಲೆಯಲ್ಲಿ ಪಕ್ಷಾತೀತ ಬೆಂಬಲ ವ್ಯಕ್ತವಾಗಿದ್ದು, ಭಾನುವಾರ ಇಡೀ ಜಿಲ್ಲೆ ಸ್ತಬ್ಧವಾಯಿತು.

ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಸ್ವಯಂಪ್ರೇರಿತರಾಗಿ ಮನೆಗಳಲ್ಲೇ ಉಳಿದು ‘ಜನತಾ ಕರ್ಫ್ಯೂ’ಗೆ ಬೆಂಬಲ ಸೂಚಿಸಿದರು. ವರ್ತಕರು ಸ್ವಇಚ್ಛೆಯಿಂದ ಅಂಗಡಿಗಳನ್ನು ಮುಚ್ಚಿ ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ಜಿಲ್ಲೆಯಾದ್ಯಂತ ವಾಣಿಜ್ಯ ವಹಿವಾಟು, ಬಸ್‌ ಸೇವೆ ಸಂಪೂರ್ಣ ಸ್ಥಗಿತಗೊಂಡಿತು. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಡಿಪೊದಲ್ಲೇ ನಿಲ್ಲಿಸಲಾಗಿತ್ತು. ಖಾಸಗಿ ಬಸ್‌ಗಳು, ಆಟೊಗಳು, ಸರಕು ಸಾಗಣೆ ವಾಹನಗಳು ರಸ್ತೆಗೆ ಇಳಿಯಲೇ ಇಲ್ಲ. ಸದಾ ಜನಜಂಗುಳಿ ಹಾಗೂ ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳು ಹಾಗೂ ರಸ್ತೆಗಳು ಭಣಗುಡುತ್ತಿದ್ದವು.

ರೈಲು ನಿಲ್ದಾಣಗಳು, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ತುರ್ತು ಕಾರ್ಯದ ನಿಮಿತ್ತ ಹೊರ ಊರುಗಳಿಗೆ ಹೋಗಲು ನಿಲ್ದಾಣಕ್ಕೆ ಬಂದಿದ್ದ ಸಾರ್ವಜನಿಕರು ಪ್ರಯಾಣ ಮೊಟಕುಗೊಳಿಸಿ ಮನೆಗೆ ಹಿಂದಿರುಗಿದರು.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮುಂಚಿತವಾಗಿ ಶನಿವಾರವೇ ತರಕಾರಿ, ದಿನಸಿ ಸೇರಿದಂತೆ ದಿನಬಳಕೆ ವಸ್ತುಗಳನ್ನು ಖರೀದಿಸಿದ್ದ ಸಾರ್ವಜನಿಕರು ಅಂಗಡಿ, ಮಾರುಕಟ್ಟೆಗಳತ್ತ ಮುಖ ಮಾಡಲಿಲ್ಲ. ಬಾರ್‌, ರೆಸ್ಟೋರೆಂಟ್‌, ಹೋಟೆಲ್‌, ಚಿತ್ರಮಂದಿರಗಳು, ಬೇಕರಿಗಳು, ತಂಪು ಪಾನೀಯ ಅಂಗಡಿಗಳು, ಐಸ್‌ಕ್ರೀಮ್‌ ಮಾರಾಟ ಮಳಿಗೆಗಳು ಇಡೀ ದಿನ ಮುಚ್ಚಿದ್ದವು.

ಹಾಲಿಗೆ ಕಾದ ಜನ: ಹಾಲಿನ ಬೂತ್‌ಗಳು ಹಾಗೂ ಔಷಧ ಮಾರಾಟ ಮಳಿಗೆಗಳು ಎಂದಿನಂತೆ ತೆರೆದಿದ್ದವು. ಕೆಲ ಪೆಟ್ರೋಲ್‌ ಬಂಕ್‌ಗಳು ಸೇವೆ ಒದಗಿಸಿದವು. ಆದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಗ್ರಾಹಕರ ಸಂಖ್ಯೆ ತುಂಬಾ ಕಡಿಮೆಯಿತ್ತು.

ಕರ್ಫ್ಯೂ ಕಾರಣಕ್ಕೆ ವಹಿವಾಟು ಕುಸಿಯುವ ಆತಂಕದಲ್ಲಿ ಹಾಲಿನ ಬೂತ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಲು ಮತ್ತು ಮೊಸರು ತರಿಸಲಾಗಿತ್ತು. ಆದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳು ಕ್ಷಣ ಮಾತ್ರದಲ್ಲಿ ಮಾರಾಟವಾದವು. ಹೀಗಾಗಿ ಸಾರ್ವಜನಿಕರು ಹಾಲು ಖರೀದಿಗೆ ಬೂತ್‌ಗಳ ಬಳಿ ಗಂಟೆಗಟ್ಟಲೇ ಕಾದು ನಿಂತಿದ್ದ ದೃಶ್ಯ ಕಂಡುಬಂತು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಪ್ರತಿನಿತ್ಯದಂತೆ ಸೇವೆ ಒದಗಿಸಿದವು. ಆದರೆ, ಹೊರ ರೋಗಿಗಳ ವಿಭಾಗವನ್ನು ಬಂದ್‌ ಮಾಡಲಾಗಿತ್ತು. ಆಸ್ಪತ್ರೆಗಳಲ್ಲಿ ತುರ್ತು ವೈದ್ಯಕೀಯ ಸೇವೆ ಮಾತ್ರ ನೀಡಲಾಯಿತು. ಬಹುತೇಕ ಆಸ್‍ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಿತ್ತು.

ಪೊಲೀಸ್‌ ಗಸ್ತು: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲೆಡೆ ಪೊಲೀಸ್ ಗಸ್ತು ಹೆಚ್ಚಿಸಲಾಗಿತ್ತು. ಆಯಕಟ್ಟಿನ ಸ್ಥಳಗಳು, ವಾಣಿಜ್ಯ ಪ್ರದೇಶಗಳು, ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು.

ಕರ್ಫ್ಯೂ ಅವಧಿ ಮುಗಿಯುತ್ತಿದ್ದಂತೆ ಸಾರ್ವಜನಿಕರು ಮನೆಯಿಂದ ಹೊರ ಬಂದು ಹಾಗೂ ಮಹಡಿ, ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆ ತಟ್ಟಿ ಜಾಗಟೆ ಬಾರಿಸಿದರು. ಮತ್ತೆ ಕೆಲವರು ಶಿಳ್ಳೆ ಹಾಕಿ ಊಟದ ತಟ್ಟೆ ಹಾಗೂ ಲೋಟಗಳನ್ನು ಬಡಿದು ಕೋವಿಡ್‌–19 ತಡೆಗೆ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು ಹಾಗೂ ಪೌರ ಕಾರ್ಮಿಕರಿಗೆ ಗೌರವ ಸಮರ್ಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)