ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿ ಹೇಳೋ ವೃತ್ತಿ ಇನ್ನೂ ಜೀವಂತ

ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮುಂದುವರಿದ ಸಂಪ್ರದಾಯ
Last Updated 21 ಡಿಸೆಂಬರ್ 2021, 5:00 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕಣಿ ಕೇಳುವ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಗ್ರಾಮೀಣ ಪ್ರದೇಶದ ಜನರು ಕೆಲವು ಸಮಸ್ಯೆಗಳಿಗೆ ಕಣಿಯಮ್ಮ (ಕೊರವಂಜಿ)ನಿಂದ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ನಡೆಯುವ ಪ್ರತಿ ಸಂತೆಯಲ್ಲೂ ಕಣಿ ಹೇಳುವ ಮಹಿಳೆಯರನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಒಂದು ಸಮುದಾಯಕ್ಕೆ ಸೇರಿದ ಮಧ್ಯ ವಯಸ್ಸಿನ ಮಹಿಳೆಯರು, ಮುಂದೆ ಒಂದು ಬಟ್ಟೆಯ ಮೇಲೆ ಒಂದಷ್ಟು ರಾಗಿ, ಅವರೆ, ಭತ್ತ ಹರಡಿಕೊಂಡು ಕುಳಿತಿರುತ್ತಾರೆ. ಈ ಮಹಿಳೆಯರು ವಂಶಪಾರಂಪರ್ಯವಾಗಿ ಕಣಿ ಹೇಳುವುದನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕಣಿ ಕೇಳುವುದು ಒಂದು ಸಂಪ್ರದಾಯವಾಗಿ ಮುಂದುವರಿದಿದೆ. ಕುಟುಂಬದ ಸದಸ್ಯನಿಗೆ ಕಾಯಿಲೆಯಾದರೆ ಮೊದಲು ಆಸ್ಪತ್ರೆಯಲ್ಲಿ ತೋರಿಸುತ್ತಾರೆ. ವಾಸಿಯಾಗುವುದು ನಿಧಾನವಾದರೆ ಅಥವಾ ವಾಸಿಯಾಗದಿದ್ದರೆ, ಮನೆಯ ಹಿರಿಯ ಮಹಿಳೆ ಸಮೀಪದ ಸಂತೆಗೆ ಹೋಗಿ ಕಣಿ ಕೇಳಿ ಕಣಿಯಮ್ಮ ಹೇಳಿದಂತೆ ನಡೆದುಕೊಳ್ಳುತ್ತಾಳೆ. ಮಕ್ಕಳಿಗೆ ಹೆಸರಿಟ್ಟನಂತರ ಅಳುತ್ತಿದ್ದರೆ, ಕಣಿ ಕೇಳಿ ಪುನರ್ ನಾಮಕರಣ ಮಾಡುವುಂದುಂಟು.

ಹಿಂದೆ ಕಣಿ ಕೇಳುವವರು ಒಂದಿಷ್ಟು ರಾಗಿಯೊಂದಿಗೆ, ತಾಂಬೂಲದಲ್ಲಿ ಒಂದೆರಡು ರೂಪಾಯಿ ಇಟ್ಟು ಕೊಟ್ಟರೆ ಸಾಕು ಕಣಿ ಹೇಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಣಿ ಹೇಳುವ ಮಹಿಳೆಯರು ₹50ರಿಂದ ₹100 ಪಡೆದು ಕಣಿ ಹೇಳುತ್ತಾರೆ. ಕಣಿಯಮ್ಮ ಕಣಿ ಹೇಳುವ ಮೊದಲು ಹಲವು ಗ್ರಾಮ ದೇವತೆಗಳ ಹೆಸರನ್ನು ಹಾಡಿನ ರೂಪದಲ್ಲಿ ಹೇಳುತ್ತಾಳೆ. ಅನಂತರ ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಸಂಭವಿಸಬಹುದಾದ ಐದಾರು ವಿಷಯಗಳನ್ನು ಹೇಳಿ, ಕಣಿ ಕೇಳುವವರ ವಿಶ್ವಾಸ ಗಳಿಸುತ್ತಾಳೆ.

ಸಾಮಾನ್ಯವಾಗಿ ಎಲ್ಲ ಕಣಿಯಮ್ಮಗಳು ನೀಡುವ ಪರಿಹಾರ ಪಚ್ಚೆ. ಕಳ್ಳೆಪುರಿ, ಬಳೆ, ವಿಭೂತಿ, ತಾಳೆಗರಿ, ಊದುಬತ್ತಿ, ಅರಶಿನ, ಕುಂಕುಮ, ತೆಂಗಿನ ಕಾಯಿ ಹಾಗೂ ಕರ್ಪೂರವನ್ನು ಪಚ್ಚೆ ಸಾಮಗ್ರಿ ಎಂದು ಕರೆಯಲಾಗುತ್ತದೆ. ಅಂಗಡಿಗಳಲ್ಲಿ ಈ ಎಲ್ಲ ಸಾಮಗ್ರಿಗಳನ್ನು ಒಂದು ಪೊಟ್ಟಣ ಕಟ್ಟಿ ಇಟ್ಟಿರುತ್ತಾರೆ. ಅಗತ್ಯ ಇರುವವರು ನಿಗದಿತ ಹಣ ನೀಡಿ ಪಡೆದುಕೊಳ್ಳುತ್ತಾರೆ.

ಮಕ್ಕಳಿಗೆ ಹೆಸರಿಟ್ಟಮೇಲೆ ಅಳುತ್ತಿದ್ದರೆ, ಕಣಿಯಮ್ಮ ಮನೆ ದೇವರ, ಅಥವಾ ಮನೆಯಲ್ಲಿ ಕಾಲವಾದ ಹಿರಿಯರ ಹೆಸರಿಡುವಂತೆ ಸಲಹೆ ಮಾಡುತ್ತಾಳೆ. ಕಾಯಿಲೆ ಬಿದ್ದವರಿಗೆ ನೀರಿನ ಪಕ್ಕದಲ್ಲಿ ಪಚ್ಚೆ ಇಡಲು ಸಲಹೆ ಮಾಡುತ್ತಾಳೆ. ಪಚ್ಚೆಗಳಲ್ಲಿ ಎರಡು ವಿಧ. ಕೋಳಿ ಬಲಿ ಕೊಡುವುದು ಒಂದು ವಿಧಾನವಾದರೆ, ತೆಂಗಿನ ಕಾಯಿ ಒಡೆಯುವುದು ಇನ್ನೊಂದು ವಿಧಾನ. ಇದನ್ನು ಚೊಕ್ಕಟ ಪಚ್ಚೆ ಎಂದು ಕರೆಯುತ್ತಾರೆ.

ಕಾಯಿಲೆ ಇರುವ ವ್ಯಕ್ತಿಯನ್ನು ಸಮೀಪದ ಕೆರೆ ಅಥವಾ ಕುಂಟೆ ಸಮೀಪ ಕರೆದೊಯ್ದು, ಅಲ್ಲೇ ಅನ್ನ ಬೇಯಿಸಿ, ಲಕ್ಕಿ ಗಿಡದ ಸೊಪ್ಪು ಬಳಸಿ ಗುಡಿ ನಿರ್ಮಿಸುತ್ತಾರೆ. ಏಳು ಚಿಕ್ಕ ಕಲ್ಲುಗಳನ್ನು ಆರಿಸಿಕೊಂಡು ತೊಳೆದು ಗುಡಿಯಲ್ಲಿ ನಿಲ್ಲಿಸುತ್ತಾರೆ. ತಣಿವು ಮುದ್ದೆ ಇಟ್ಟು, ಪೂಜೆ ಸಲ್ಲಿಸಿ, ಕೋಳಿ ಕೊಯ್ದು ಕೈ ಮುಗಿಯುತ್ತಾರೆ. ಕೋಳಿ ಸಾರಿನೊಂದಿಗೆ ಊಟ ಸವಿಯುತ್ತಾರೆ. ಅಲ್ಲಿಗೆ ಪಚ್ಚೆ ಇಡುವ ಶಾಸ್ತ್ರ ಮುಗಿಯುತ್ತದೆ. ಕಾಯಿಲೆ ವಾಸಿಯಾದರೆ ರೋಗಿಯ ಅದೃಷ್ಟ. ಇಲ್ಲವಾದರೆ ಆಸ್ಪತ್ರೆ ದಾರಿ ಹಿಡಿಯಬೇಕಾಗುತ್ತದೆ.

‘ಪಚ್ಚೆ ಇಡುವುದು ಒಂದು ಜಾನಪದ ಆಚರಣೆ. ಪಚ್ಚೆ ಇಡುವುದರಿಂದ ಕೆಲವೊಮ್ಮೆ ಕೆಲವು ಮಾನಸಿಕ ಕಾಯಿಲೆಗಳು ವಾಸಿಯಾಗುವುದುಂಟು. ಕಾಯಿಲೆಯಿಂದ ಸುಸ್ತಾಗಿರುವ ವ್ಯಕ್ತಿ ಕೋಳಿ ಸಾರಿನ ರುಚಿಗೆ ಮಾರುಹೋಗಿ ಹೊಟ್ಟೆತುಂಬ ಊಟ ಮಾಡುವುದರಿಂದ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ಇದೊಂದು ನಂಬಿಕೆಗೆ ಸಂಬಂಧಿಸಿದ ವಿಚಾರ’ ಎಂಬುದು ಡಾ. ವೈ.ವಿ.ವೆಂಕಟಾಚಲ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT