ಕೆ.ಸಿ ವ್ಯಾಲಿ ಯೋಜನೆ: ಅರ್ಜಿ ಸಲ್ಲಿಕೆ ಹಿಂದೆ ಜನಪ್ರತಿನಿಧಿ ಕೈವಾಡ-ರಮೇಶ್‌ಕುಮಾರ್

7
ಮೌನ ಮುರಿದ ವಿಧಾನಸಭಾಧ್ಯಕ್ಷ

ಕೆ.ಸಿ ವ್ಯಾಲಿ ಯೋಜನೆ: ಅರ್ಜಿ ಸಲ್ಲಿಕೆ ಹಿಂದೆ ಜನಪ್ರತಿನಿಧಿ ಕೈವಾಡ-ರಮೇಶ್‌ಕುಮಾರ್

Published:
Updated:
Deccan Herald

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆ ವಿರುದ್ಧ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದರ ಹಿಂದೆ ಜಿಲ್ಲೆಯ ಜನರ ಋಣದಲ್ಲಿರುವ ಜನಪ್ರತಿನಿಧಿಯ ಕೈವಾಡವಿದೆ. ಆ ಗೋಮುಖ ವ್ಯಾಘ್ರದ ನಿಜ ಬಣ್ಣ ಬಯಲಾಗಬೇಕಾದರೆ ತನಿಖೆ ನಡೆಸಬೇಕು’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್‌ ಅಸಮಾಧಾನ ಹೊರ ಹಾಕಿದರು.

ಕೆ.ಸಿ ವ್ಯಾಲಿ ಯೋಜನೆ ನೀರಿನಲ್ಲಿ ನೊರೆ ಕಾಣಿಸಿಕೊಂಡ ಕಾರಣಕ್ಕೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ ಸಂಬಂಧ ರಮೇಶ್‌ಕುಮಾರ್‌ ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಯೋಜನೆ ಬಗ್ಗೆ ಮಾತನಾಡಿರಲಿಲ್ಲ.

ಇಲ್ಲಿ ಶುಕ್ರವಾರ ಮೌನಮುರಿದು ಮೊದಲ ಬಾರಿಗೆ ಯೋಜನೆ ಬಗ್ಗೆ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರೊಂದಿಗೆ ಮಾತನಾಡಿ, ‘ಯೋಜನೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿರುವವರು ಯಾರು? ಅವರು ಏನು ಕೆಲಸ ಮಾಡುತ್ತಿದ್ದಾರೆ. ಕೃಷಿ ಮಾಡುತ್ತಿದ್ದಾರಾ, ಅವರಿಗೆ ಎಷ್ಟು ಎಕರೆ ಭೂಮಿ ಇದೆ ಎಂಬ ಮಾಹಿತಿ ಸಂಗ್ರಹಿಸಬೇಕು’ ಎಂದು ಹೇಳಿದರು.

‘ಇದೇ ಜಿಲ್ಲೆಯವರಾದ ನೀವೆಲ್ಲಾ ಹೋರಾಟಗಾರರಲ್ಲವೆ? ಕೆ.ಸಿ ವ್ಯಾಲಿ ಯೋಜನೆ ನೀರು ಹರಿಸದಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವವರ ಮನವೊಲಿಕೆಗೆ ಜವಾಬ್ದಾರಿ ತೆಗೆದುಕೊಳ್ಳಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹಕಾರದಿಂದ ಅವರ ಮೊಬೈಲ್ ಕರೆಗಳ ಬಗ್ಗೆ ತನಿಖೆ ಮಾಡಿಸಿ, ಅವರು ಯಾರ ಜತೆ ಹೆಚ್ಚಾಗಿ ಮಾತನಾಡಿದ್ದಾರೆ ಎಂಬುದನ್ನು ತಿಳಿಯಿರಿ’ ಎಂದು ಮಾರ್ಮಿಕವಾಗಿ ನುಡಿದರು.

‘ತನಿಖೆ ನಡೆದರೆ ಅರ್ಜಿ ಸಲ್ಲಿಸಿರುವವರ ಹಿಂದೆ ಯಾರಿದ್ದಾರೆ ಎಂಬ ಸತ್ಯ ಗೊತ್ತಾಗುತ್ತದೆ. ಬಳಿಕ ಆ ಗೋಮುಖ ವ್ಯಾಘ್ರದ ನಿಜ ಬಣ್ಣವನ್ನು ಜಿಲ್ಲೆಯ ಜನರಿಗೆ ಪರಿಚಯಿಸಿ’ ಎಂದರು.

ಸರ್ಕಾರ ಬದ್ಧ: ‘ಕೆ.ಸಿ ವ್ಯಾಲಿ ಯೋಜನೆ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಸರ್ಕಾರವು ನ್ಯಾಯಾಲಯಕ್ಕೆ ಯೋಜನೆಯ ಸತ್ಯಾಸತ್ಯತೆ ಮನವರಿಕೆ ಮಾಡಿಕೊಡಬೇಕಿದೆ. ಯೋಜನೆಯಲ್ಲಿ ನ್ಯೂನತೆ ಇದ್ದರೆ ಸರಿಪಡಿಸಿಕೊಳ್ಳುವುದಕ್ಕೆ ಸರ್ಕಾರ ಬದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು.

‘ಯೋಜನೆ ಸಂಬಂಧ ಸಾಕಷ್ಟು ಸಭೆ ನಡೆಸಿ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸರ್ಕಾರ ನಿಯಮಾವಳಿ, ಅಂಕಿ ಅಂಶ ಸೇರಿದಂತೆ ಎಲ್ಲವನ್ನು ನ್ಯಾಯಾಲಯಕ್ಕೆ ನೀಡಿ ಸಮರ್ಥವಾಗಿ ವಾದ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !