ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ಕೆತ್ತನೆ ಕಲ್ಲುಗಳ ಪರಿಶೀಲನೆ ನಡೆಸಿದ್ದು ಕೆಜಿಎಫ್‌ ವಿಜ್ಞಾನಿಗಳು

Published 19 ಜನವರಿ 2024, 19:40 IST
Last Updated 19 ಜನವರಿ 2024, 19:40 IST
ಅಕ್ಷರ ಗಾತ್ರ

ಕೋಲಾರ (ಕೆಜಿಎಫ್‌): ಅಯೋಧ್ಯೆ ರಾಮ ಮಂದಿರಕ್ಕೆ ಅಡಿಪಾಯ ಹಾಕುವುದರಿಂದ ಮೊದಲ್ಗೊಂಡು ಕೆತ್ತನೆವರೆಗೂ ಎಲ್ಲ ಕಲ್ಲುಗಳ ಪರೀಕ್ಷೆಯನ್ನು ಕೆಜಿಎಫ್‌ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ (ಎನ್‌ಐಆರ್‌ಎಂ) ನಡೆಸಿದೆ.

ರಾಮ ಜನ್ಮಭೂಮಿ ಟ್ರಸ್ಟ್ ನೀಡಿದ ಗುತ್ತಿಗೆ ಅನ್ವಯ ದೇವಾಲಯಕ್ಕೆ ಬಳಸಲಾಗಿರುವ ವಿವಿಧ ರೀತಿಯ ಕಲ್ಲುಗಳ ಗುಣಮಟ್ಟದ ತಪಾಸಣೆಯ ಸವಾಲಿನ ಕೆಲಸವನ್ನು ಕೇಂದ್ರ ಸರ್ಕಾರದ ಗಣಿ ಖಾತೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್‌ಐಆರ್‌ಎಂ ಸಮರ್ಪಕವಾಗಿ ನಿರ್ವಹಿಸಿದೆ.

ದೇವಾಲಯವನ್ನು ಸಂಪೂರ್ಣವಾಗಿ ಕಲ್ಲುಗಳಿಂದ ರಚಿಸಲಾಗಿದೆ. ಎಲ್ಲಿಯೂ ಕಬ್ಬಿಣ ಬಳಸಿಲ್ಲ. ಅಡಿಪಾಯಕ್ಕೆ ಏಳು ಹಂತದಲ್ಲಿ ಸುಮಾರು 83 ಸಾವಿರ ಟನ್‌ ಗ್ರಾನೈಟ್ ಬಳಕೆ ಆಗಿದೆ. ಚಿಕ್ಕಬಳ್ಳಾಪುರ, ದೇವನಹಳ್ಳಿ, ಸಾದರಹಳ್ಳಿಯಲ್ಲಿ ಸಿಗುವ ಗ್ರಾನೈಟ್ ಅನ್ನೇ ಬಹುತೇಕ ಬಳಸಲಾಗಿದೆ. ಕೊರತೆಯಾದ ಸಂದರ್ಭದಲ್ಲಿ ತೆಲಂಗಾಣ ರಾಜ್ಯದ ಕರೀಂನಗರ, ವರಂಗಲ್‌ಗಳಲ್ಲಿ ಸಿಕ್ಕ ಕಲ್ಲುಗಳನ್ನು ಬಳಸಲಾಗಿದೆ.

ರಾಮಲಲ್ಲಾ ವಿಗ್ರಹಕ್ಕೆ ಕೊನೆಯದಾಗಿ ಮೂರು ವಿಗ್ರಹಗಳನ್ನು ತಯಾರು ಮಾಡಲಾಗಿತ್ತು. ಈಗ ಪ್ರತಿಷ್ಠಾಪನೆಯಾಗುತ್ತಿರುವ ಹೆಗ್ಗಡದೇವನಕೋಟೆಯಲ್ಲಿ ಸಿಕ್ಕ ಶಿಲೆಯನ್ನು ಮೂರ್ತಿಯಾಗಿ ರೂಪಿಸಿದ ಯೋಗರಾಜ್ ಅವರ ಮೂರ್ತಿಗೆ ಎನ್‌ಐಆರ್‌ಎಂ ಶಿಫಾರಸು ಮಾಡಿದೆ ಎಂದು ಸಂಸ್ಥೆ ವಿಜ್ಞಾನಿ ಡಾ.ರಾಜನ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

2022ರಲ್ಲಿ ಅಡಿಪಾಯ ಹಾಕುವ ಸಂದರ್ಭ ಬಂದಿತು. ಅಡಿಪಾಯಕ್ಕೆ ಒಂದು ರೀತಿ ಶಿಲೆಯಾದರೆ, ಕಂಬಗಳು, ಕಲಂಗಳಿಗೆ ಮತ್ತೊಂದು ರೀತಿ ಕಲ್ಲು ಬಳಸಲಾಗಿದೆ. ಎನ್‌ಐಆರ್‌ಎಂ ಕಾರ್ಯವೈಖರಿಗೆ ರಾಮ ಜನ್ಮಭೂಮಿ ಟ್ರಸ್ಟ್‌ ತೃಪ್ತಿ ವ್ಯಕ್ತಪಡಿಸಿದೆ ಎಂದರು.

ಕಲ್ಲಿನ ಎಲ್ಲ ಗುಣಗಳನ್ನು ಅರಿಯಲು ದೇಶದಾದ್ಯಂತ ಹಲವು ಕ್ವಾರಿಗಳಿಗೆ ಭೇಟಿ ನೀಡಲಾಗಿತ್ತು. ಅಡಿಪಾಯಕ್ಕೆ ಗ್ರಾನೈಟ್ ಸೂಕ್ತ ಎಂಬ ಅಭಿಪ್ರಾಯ ಬಂದಿತು. ಸೂಪರ್ ಸ್ಟ್ರಕ್ಚರ್‌ಗೆ ಸ್ಟ್ಯಾಂಡ್‌ ಸ್ಟೋನ್‌ ಬಳಸಲಾಗಿದೆ. ಆಲಂಕಾರಿಕ ಶಿಲೆಗಾಗಿ ಮಕ್ರಾನ್‌ ಅಮೃತ ಶಿಲೆ ಬಳಸಲು ಶಿಫಾರಸು ಮಾಡಲಾಗಿತ್ತು. ಅದೇ ರೀತಿ ದೇವಾಲಯ ನಿರ್ಮಾಣವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸುಮಾರು ಒಂದು ಲಕ್ಷ ಶಿಲೆಗಳನ್ನು ಏಳೆಂಟು ತಿಂಗಳ ಕಾಲ ಪರೀಕ್ಷೆ ನಡೆಸಲಾಗಿದೆ. ಇಂದಿಗೂ ದೇವಾಲಯದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ಸಂಸ್ಥೆ ವಿಜ್ಞಾನಿಗಳು ತಿಳಿಸಿದರು.

ಕೆಜಿಎಫ್‌ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ
ಕೆಜಿಎಫ್‌ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT