ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ‌: ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟ

Published 11 ಏಪ್ರಿಲ್ 2024, 16:20 IST
Last Updated 11 ಏಪ್ರಿಲ್ 2024, 16:20 IST
ಅಕ್ಷರ ಗಾತ್ರ

ಕೋಲಾರ‌/ಬಂಗಾರಪೇಟೆ: ಲೋಕಸಭೆ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟ ಕೋಲಾರ ಕ್ಷೇತ್ರದಲ್ಲಿ ಪ್ರಚಾರ ಭರಾಟೆಯಲ್ಲಿ ತೊಡಗಿರುವ ಮಧ್ಯೆಯೇ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ.

ಕೋಲಾರ ಹೊರವಲಯದ ನಾರಾಯಣಿ ಕನ್ವೆನ್ಷನ್ ಸಭಾಂಗಣದಲ್ಲಿ ಗುರುವಾರ ನಡೆದ ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶಕ್ಕೆ ತಮಗೆ ಆಹ್ವಾನ ನೀಡಿಲ್ಲವೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಬಂಗಾರಪೇಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಮಹೇಶ್‌, ‘ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ನಡೆದ ಸಮಾವೇಶಕ್ಕೆ ನನಗೆ, ತಂದೆ ಹಾಗೂ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಕೆಜಿಎಫ್‌ ಮಾಜಿ ಶಾಸಕ ವೈ.ಸಂಪಂಗಿ ಅವರಿಗೆ ಆಹ್ವಾನ ನೀಡಿಲ್ಲ. ನಾನೂ ದಲಿತ ಸಮಾಜಕ್ಕೆ ಸೇರಿದ ಮುಖಂಡ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಮುಂದಿನ ಅಭ್ಯರ್ಥಿ ತಾವೇ ಎಂದು ಮುನಿಸ್ವಾಮಿ ಹೇಳುತ್ತಿದ್ದಾರೆ. ಬಂಗಾರಪೇಟೆ ವಿಧಾನಸಭೆ ಕ್ಷೇತ್ರವನ್ನು ಬೇರೊಬ್ಬರಿಗೆ ಬಿಟ್ಟು ಕೊಡುವ ಮಾತೇ ಇಲ್ಲ. ಪಕ್ಷ ಸಂಘಟನೆ ಮಾಡಿದ್ದೇನೆ. ನಾನು ಸ್ಥಳೀಯ ಹಾಗೂ ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ನಾನೇ ಆಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ಹೇಳಿದರು.

ಮುನಿಸ್ವಾಮಿ ಬೆಂಬಲಿಗರು ಹಾಗೂ ಬಿ.ಪಿ.ವೆಂಕಟಮುನಿಯಪ್ಪ ಬೆಂಬಲಿಗರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ನೇತೃತ್ವದಲ್ಲಿ ಮನವೊಲಿಸುವ ಯತ್ನ ನಡೆಯಿತಾದರೂ ಅವರ ನಿರ್ಗಮನದ ಬಳಿಕ ವಾಗ್ವಾದ ಶುರುವಾಗಿದೆ.

ಮೈತ್ರಿ ಧರ್ಮಪಾಲನೆಗಾಗಿ ಬಿಜೆಪಿ ಈ ಬಾರಿ ಕೋಲಾರ ಮೀಸಲು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್‌ಗೆ ತ್ಯಾಗ ಮಾಡಿದೆ. ಹೀಗಾಗಿ, ಹಾಲಿ ಕ್ಷೇತ್ರವನ್ನು ಸಂಸದ ಮುನಿಸ್ವಾಮಿ ಕಳೆದುಕೊಂಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರು ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಈಗಲೇ ಚರ್ಚೆಗಳು ನಡೆಯುತ್ತಿವೆ.

ಆದರೆ, ಬಿ.ವಿ.ಮಹೇಶ್‌ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಂಗಾರಪೇಟೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮುನಿರತ್ನ ಸಂಧಾನದ ಬಳಿಕ ಎಂ.ನಾರಾಯಣಸ್ವಾಮಿ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಅವರು ಪರಾಭವಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT