ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆಯಾಚನೆಗೆ ಒಕ್ಕಲಿಗರ ಸಂಘ ಆಗ್ರಹ

ಒಕ್ಕಲಿಗರ ಸಮುದಾಯಕ್ಕೆ ರಮೇಶ್‌ ಕುಮಾರ್‌ ನಿಂದನೆ ಆರೋಪ, ಪ್ರತಿಭಟನೆ ಎಚ್ಚರಿಕೆ
Published 3 ಮೇ 2024, 13:51 IST
Last Updated 3 ಮೇ 2024, 13:51 IST
ಅಕ್ಷರ ಗಾತ್ರ

ಕೋಲಾರ: ‘ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಹತಾಶೆಯಿಂದಾಗಿ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಈಚೆಗೆ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಭಾಷಣದಲ್ಲಿ ರೈತರಾದ ಒಕ್ಕಲಿಗ ಸಮುದಾಯವನ್ನು ನಿಂದಿಸಿರುವುದು ನೋವಿನ ಸಂಗತಿ. ಇದನ್ನು ಜಿಲ್ಲಾ ಒಕ್ಕಲಿಗ ಸಮುದಾಯವು ಖಂಡಿಸುತ್ತದೆ. ಅವರು ಒಕ್ಕಲಿಗ ಸಮುದಾಯದ ಕ್ಷಮೆಯಾಚಿಸಬೇಕು’ ಎಂದು ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ‘ಕೃಷಿಕ ಮತ್ತು ಒಕ್ಕಲಿಗ ಸಮುದಾಯ ಎರಡು ಒಂದೇ. ಯಾವುದೇ ಸಮುದಾಯದವರಾಗಲಿ ವ್ಯವಸಾಯ ಮಾಡುವವರೆಲ್ಲಾ ರೈತರನ್ನು ಒಕ್ಕಲಿಗರೆಂದೇ ಕರೆಯುತ್ತೇವೆ. ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಕ್ಕೂ ಒಕ್ಕಲಿಗರು ಕೊಡುಗೆ ನೀಡಿದ್ದಾರೆ. ಆದರೆ, ತಮ್ಮ ವೈಯಕ್ತಿಕ ವಿಚಾರಕ್ಕೆ ಒಕ್ಕಲಿಗರನ್ನು ಅಪಮಾನಿಸಿ, ನಿಂದಿಸಿರುವುದು ಸಮಂಜಸವಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಮೇಶ್‌ ಕುಮಾರ್‌ ಪ್ರಬುದ್ಧರು, ಚಿಂತಕರು, ಮೇಧಾವಿಗಳು, ಸುಸಂಸ್ಕೃತರು. ಹೀಗಿದ್ದೂ ಸೋಲಿನಿಂದ ಹತಾಶರಾಗಿ ಭಾಷಣದ ಆವೇಶದಲ್ಲಿ ‘ಒಕ್ಕಲಿಗರು ಹೊಟ್ಟೆಗೆ ಏನು ತಿನ್ನುತ್ತೀರಿ’ ಎಂದು ಪ್ರಶ್ನಿಸುವ ಮೂಲಕ ಇಡೀ ಸಮುದಾಯವನ್ನು ನಿಂದಿಸಿರುವುದು ಎಷ್ಟು ‌ಸರಿ? ಅವರು ಏನು ತಿನ್ನುತ್ತಾರೆ ಅದನ್ನೇ ನಾವು ತಿನ್ನುವುದು. ತಿನ್ನುವುದಕ್ಕೂ ನಾವೇ ಬೆಳೆದು ಕೊಡಬೇಕೇ ಹೊರತು ಆಕಾಶದಿಂದ ಉದುರುವುದಿಲ್ಲ. ಅವರಿಗೆ ಯಾರು ವಂಚಿಸಿದ್ದಾರೋ ಮೋಸ ಮಾಡಿದ್ದರೋ ಅವರ ವಿರುದ್ಧ ನೇರವಾಗಿ ಟೀಕಿಸಲಿ, ನಿಂದಿಸಲಿ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಿ. ನಮದೇನು ಅಭ್ಯಂತರವಿಲ್ಲ. ಆದರೆ, ಇಡೀ ಸಮುದಾಯವನ್ನು ನಿಂದಿಸುವಂಥ ನೈತಿಕತೆ ಅವರಿಗಿಲ್ಲ’ ಎಂದು ಹೇಳಿದರು.

‘ಇಡೀ ಸಮುದಾಯವನ್ನು ನಿಂದಿಸಿರುವ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಈ ಮೂಲಕ ತಮ್ಮ ಗೌರವವನ್ನು ಉಳಿಸಿ‌ಕೊಳ್ಳುವಂತಾಗಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡದಂತೆ ಸೌಹಾರ್ದ ಉಳಿಸಿಕೊಂಡು ಮುಂದುವರಿಯಬೇಕು’ ಎಂದರು.

‘ಈ ಹಿಂದೆಯೇ ರಮೇಶ್ ಕುಮಾರ್ ವಿರುದ್ಧ ಪ್ರತಿಕ್ರಿಯಿಸಬೇಕಾಗಿತ್ತು. ಆದರೆ, ಚುನಾವಣೆ ಸಂದರ್ಭವಾಗಿದ್ದ ಹಿನ್ನೆಲೆಯಲ್ಲಿ ಪ್ರಬುದ್ಧರಾಗಿರುವ ನಾವು ಯಾವುದೇ ರೀತಿ ಹೇಳಿಕೆ ನೀಡಲಿಲ್ಲ, ಪ್ರತಿಭಟಿಸಲಿಲ್ಲ. ರಮೇಶ್ ಕುಮಾರ್‌ ಅವರನ್ನು 7 ಬಾರಿ ಕ್ಷೇತ್ರದಲ್ಲಿ ಗೆಲ್ಲಿಸಿದ್ದೇವೆ, ಅವರನ್ನು ಹೆಗಲ ಮೇಲೆ ಹೊತ್ತು ಕ್ಷೇತ್ರದಲ್ಲಿ ಮೆರವಣಿಗೆ ಮಾಡಿ ಜಯಕಾರದ ಘೋಷಣೆ ಕೂಗಿದವರು ಇದೇ ಒಕ್ಕಲಿಗರು ಎಂಬುವುದನ್ನು ನೆನಪಿಸಿಕೊಳ್ಳಲಿ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ವಕೀಲ ಬಿಸಪ್ಪಗೌಡ, ವಕ್ಕಲಿಗ ಸಮುದಾಯದ ಮುಖಂಡರಾದ ಕೃಷ್ಣಾರೆಡ್ಡಿ, ಸಿಎಂ‌ಆರ್‌ ಶ್ರೀನಾಥ್, ಹರೀಶ್ ಗೌಡ, ಪವನ್ ನಾರಾಯಣಸ್ವಾಮಿ, ಡಾ.ರಮೇಶ್, ಹರೀಶ್‍ಗೌಡ, ಶ್ರೀನಿವಾಸಗೌಡ, ಚೌಡರೆಡ್ಡಿ, ಮಾಗೇರಿ ನಾರಾಯಣಸ್ವಾಮಿ, ಕೃಷ್ಣಪ್ಪ ರಾಮಚಂದ್ರೇಗೌಡ, ಜಯಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT