ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ವರ್ಷದಲ್ಲಿ 24 ಬಾಲಕಾರ್ಮಿಕರ ರಕ್ಷಣೆ

Published 12 ಜೂನ್ 2024, 5:10 IST
Last Updated 12 ಜೂನ್ 2024, 5:10 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ವಿವಿಧೆಡೆ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 24 ಮಕ್ಕಳನ್ನು ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ.

2023ರ ಏಪ್ರಿಲ್‌ 1ರಿಂದ ಈ ವರ್ಷದ ಮಾರ್ಚ್‌ 31ರವರೆಗೆ ಕೈಗೊಂಡ ಕಾರ್ಯಾಚರಣೆಯಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕ ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ 1986ರಲ್ಲಿಯೇ ಬಾಲ ಕಾರ್ಮಿಕ ಪದ್ಧತಿ ನಿಷೇಧಿಸಿ ಕಾಯ್ದೆ ಜಾರಿ ಮಾಡಿದ್ದರೂ ಈ ಪಿಡುಗು ಕಾಡುತ್ತಿದ್ದು, ಗ್ಯಾರೇಜ್‌, ಹೋಟೆಲ್‌, ಬಾರ್‌ಗಳು, ಡಾಬಾ, ಅಂಗಡಿ, ಮಳಿಗೆಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವುದು ಪತ್ತೆಯಾಗಿದೆ.

‘24 ಮಕ್ಕಳನ್ನು ರಕ್ಷಿಸಿ ಪಾಲನೆ ಹಾಗೂ ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ ಪುನರ್ವಸತಿ ಕೇಂದ್ರಗಳಿಗೆ ತಲುಪಿಸಲಾಗಿದೆ. ಮುಖ್ಯವಾಹಿನಿಗೆ ತರಲು ಶಾಲೆಗೆ ದಾಖಲಿಸಲಾಗಿದೆ. ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದ ಸಂಬಂಧಪಟ್ಟ ಮಾಲೀಕರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದೇವೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶಬನಾ ಅಜ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆಯಿಂದ ಜೆಲ್ಲೆಯಾದ್ಯಂತ ನೂರಾರು ಜಾಗೃತಿ ಕಾರ್ಯಕ್ರಮ, ಜಾಥಾ, ಬೀದಿ ನಾಟಕಗಳನ್ನು ಆಯೋಜಿಸಿದ್ದರೂ ಈ ಅನಿಷ್ಠ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲು ಸಾಧ್ಯವಾಗುತ್ತಿಲ್ಲ. 2023–24ರಲ್ಲಿ ಜಿಲ್ಲೆಯ ನೂರಾರು ಕಡೆಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ನಡೆಯುತ್ತಿರುವ ಗುಮಾನಿ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ.

ಜಿಲ್ಲೆಯಲ್ಲಿ ಕಂಡುಬಂದ ಪ್ರಕರಣಗಳಲ್ಲಿ ಕೋಲಾರ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದು, 8 ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ.

ಕೆಜಿಎಫ್‌ ಹಾಗೂ ಬಂಗಾರಪೇಟೆ ತಾಲ್ಲೂಕಿನಲ್ಲಿ ತಲಾ ನಾಲ್ವರು ಬಾಲಕಾರ್ಮಿಕರು ಪತ್ತೆಯಾಗಿದ್ದಾರೆ. ಶ್ರೀನಿವಾಸಪುರ ಹಾಗೂ ಮಾಲೂರು ತಾಲ್ಲೂಕಿನಲ್ಲಿ ತಲಾ ಮೂವರು ಬಾಲಕರನ್ನು ಕಾರ್ಮಿಕರು ದುಡಿಮೆಯಲ್ಲಿ ತೊಡಗಿರುವುದು ಗೊತ್ತಾಗಿ ರಕ್ಷಿಸಲಾಗಿದೆ. ಮುಳಬಾಗಿಲು ತಾಲ್ಲೂಕಿನಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.

ದುಡಿಮೆಗಾಗಿ ವಿವಿಧೆಡೆಯಿಂದ ನಗರಕ್ಕೆ ವಲಸೆ ಬಂದ ಕುಟುಂಬಗಳ ಮಕ್ಕಳು ನಗರದಲ್ಲಿಯೇ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇಂಥವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಪ್ರಯತ್ನ ನಡೆಯುತ್ತಿದೆ. ಕಾರ್ಮಿಕ ಇಲಾಖೆ ಸಮೀಕ್ಷೆ ಕೂಡ ನಡೆಸಿತ್ತು.

ಬಾಲಕಾರ್ಮಿಕ ಪದ್ಧತಿ ವಿರುದ್ಧದ ದಿನವನ್ನು 2002ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಪರಿಚಯಿಸಿತು. ಈ ದಿನವೂ ಮಕ್ಕಳು ಬೆಳೆಯಲು, ಗೌರವಯುತ ಜೀವನ ನಡೆಸಲು ಮತ್ತು ಪ್ರಪಂಚದಾದ್ಯಂತ ಬಾಲಕಾರ್ಮಿಕ ಪದ್ಧತಿ ವಿರುದ್ಧ ಹೋರಾಡುವ ಅಗತ್ಯವನ್ನು ಒತ್ತಾಯಿಸುತ್ತದೆ.

2024ರ ಆಚರಣೆಯು, ‘ನಮ್ಮ ಬದ್ಧತೆಗಳ ಮೇಲೆ ಕಾರ್ಯನಿರ್ವಹಿಸೋಣ: ಬಾಲಕಾರ್ಮಿಕ ಪದ್ಧತಿ ಕೊನೆಗೊಳಿಸೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT