ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸಂಪನ್ಮೂಲ ಕೊರತೆಯಿಂದ ದೇಶದಲ್ಲಿ ಸಮಸ್ಯೆ

ಜಲಶಕ್ತಿ ಜಾಗೃತಿ ಕಾರ್ಯಕ್ರಮದಲ್ಲಿ ಡಿ.ಸಿ ಮಂಜುನಾಥ್‌ ವಿಷಾದ
Last Updated 22 ಜುಲೈ 2019, 19:33 IST
ಅಕ್ಷರ ಗಾತ್ರ

ಕೋಲಾರ: ‘ಜನಸಂಖ್ಯೆ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು, ಸಂಪನ್ಮೂಲಗಳ ಕೊರತೆಯಿಂದ ದೇಶದಲ್ಲಿ ಸಮಸ್ಯೆ ಎದುರಾಗುತ್ತಿವೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿಷಾದಿಸಿದರು.

ಜಿಲ್ಲಾಡಳಿತವು ಇಲ್ಲಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಜಲಶಕ್ತಿ ಅಭಿಯಾನದಡಿ ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಜಲಶಕ್ತಿ ಅಭಿಯಾನದ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಸಮಸ್ಯೆ ನಿವಾರಿಸಬಹುದು. ಇದಕ್ಕೆ ವಿದ್ಯಾರ್ಥಿಗಳು ದೃಢ ಸಂಕಲ್ಪ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಜಲಶಕ್ತಿ ಅಭಿಯಾನವು ದೇಶದ 256 ಜಿಲ್ಲೆಯ 1,598 ತಾಲ್ಲೂಕುಗಳಲ್ಲಿ ಹಾಗೂ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ನಡೆಯುತ್ತಿದೆ. ಈ ಅಭಿಯಾನದ ಮೂಲಕ ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಸಸಿ ನೆಡುವಿಕೆ ಕುರಿತು ವಿಶೇಷ ಅಭಿಯಾನ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ತಮಿಳುನಾಡಿನ ಚೆನ್ನೈ ಮಹಾನಗರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು ಕಣ್ಣ ಮುಂದಿದೆ. 2025ರ ವೇಳೆಗೆ ಜಾಗತಿಕವಾಗಿ ಭಾರತವು ಒಳಗೊಂಡಂತೆ 41 ನಗರಗಳು ನೀರಿನ ಸಮಸ್ಯೆ ಎದುರಿಸಲಿವೆ ಎಂದು ಅಂದಾಜಿಸಲಾಗಿದೆ. ಇದನ್ನು ತಪ್ಪಿಸಲು ನೀರಿನ ಮಿತ ಬಳಕೆ, ಸಂರಕ್ಷಣೆಗೆ ಮುನ್ನೆಚ್ಚರಿಕೆ ವಹಿಸದಿದ್ದರೆ ಭವಿಷ್ಯದಲ್ಲಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದರು.

‘ಕೇಂದ್ರ ಸರ್ಕಾರವು ಜಲಶಕ್ತಿ ಅಭಿಯಾನದ ಅನುಷ್ಠಾನಕ್ಕೆ ವಿಶೇಷ ಸಚಿವರನ್ನು ನೇಮಿಸಿದೆ. ಮುಂದಿನ ಬಜೆಟ್‌ನಲ್ಲಿ ಜಲ ವರ್ಷವೆಂದು ಘೋಷಿಸುವ ಚಿಂತನೆ ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ 6 ನದಿಗಳು ಉಗಮವಾಗುತ್ತಿದ್ದವು. ಪರಿಸರ ವಿಕೋಪದಿಂದ ಈಗ ಬೆಟ್ಟದಲ್ಲಿ ಯಾವುದೇ ನದಿಗಳು ಉಗಮಿಸುತ್ತಿಲ್ಲ. ಎಲ್ಲಾ ನದಿಗಳು ಕಣ್ಮರೆಯಾಗಿದ್ದು, ಬರಪೀಡಿತ ಜಿಲ್ಲೆಯಾಗಿ ಪರಿವರ್ತನೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಹಿಂದೆ ರಾಜರ ಆಳ್ವಿಕೆ ವೇಳೆ ದೂರದೃಷ್ಟಿಯಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಕೆರೆ ನಿರ್ಮಿಸಿದ್ದರು. ಆದರೆ, ಈಗ ಕೆರೆಗಳ ಪರಿಸ್ಥಿತಿ ಗಮನಿಸಿದರೆ ಬೇಸರವಾಗುತ್ತದೆ. ಕೆರೆಗಳು ಮೂಲ ಸ್ವರೂಪ ಕಳೆದುಕೊಂಡಿವೆ. ಇದಕ್ಕೆ ಕಾರಣ ಯಾರೆಂದು ಗೊತ್ತಿದ್ದರೂ ಜನರಲ್ಲಿ ಪ್ರಶ್ನಿಸುವ ಮನೋಭಾವ ಇಲ್ಲವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ನೀರಿನ ಸಂರಕ್ಷಣೆಗೆ ಆದ್ಯತೆ: ‘ಮಣ್ಣು ಹಾಗೂ ನೀರು ಪ್ರಾಕೃತಿಕ ಸಂಪತ್ತು. ಸಾವಯವ ಮತ್ತು ಜೈವಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಾಪಾಡುವ ಕೆಲಸ ಆಗುತ್ತಿದೆ. ಕೃಷಿ ಚಟುವಟಿಕೆಯಲ್ಲಿ ಇಸ್ರೇಲ್ ತಂತ್ರಜ್ಞಾನ ಅಳವಡಿಸಿಕೊಂಡು ನೀರಿನ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್ ಕಿವಿಮಾತು ಹೇಳಿದರು.

‘ಟಮಕದಲ್ಲಿನ ಮಹಾವಿದ್ಯಾಲಯದಲ್ಲಿರುವ ಹಲಸು ಸಸ್ಯ ಕ್ಷೇತ್ರವು ಏಷ್ಯಾದಲ್ಲೇ ಅತಿ ದೊಡ್ಡ ಹಲಸು ತೋಟವಾಗಿದೆ. ಹಲಸು ಪ್ರವಾಸೋದ್ಯಮಕ್ಕೆ ಸಲ್ಲಿಸಿದ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಿದೆ. ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸುವುದು, ಪ್ರದರ್ಶನ ಮಳಿಗೆ ಇತರೆ ಚಟುವಟಿಕೆಗಳ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸುತ್ತೇವೆ. ಇದಕ್ಕೂ ಅನುಮೋದನೆ ನೀಡಬೇಕು’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಕಾಲೇಜು ವಿದ್ಯಾರ್ಥಿಗಳು ನೀರಿನ ಮಹತ್ವ ಸಾರುವ ನಾಟಕ ಪ್ರದರ್ಶಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಕೆ.ಶಿವಕುಮಾರ್, ಉಪ ನಿರ್ದೇಶಕ ನಯೀಮ್‌ ಪಾಷಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಎಂ.ಗಾಯಿತ್ರಿ, ತೋಟಗಾರಿಕೆ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಟಿ.ಬಿ.ಬಸವರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT