ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಡಿಎಸ್‌ ಮುಖಂಡರ ಕಡೆಗಣನೆ: ಅಸಮಾಧಾನ

Published 4 ಏಪ್ರಿಲ್ 2024, 15:54 IST
Last Updated 4 ಏಪ್ರಿಲ್ 2024, 15:54 IST
ಅಕ್ಷರ ಗಾತ್ರ

ಕೆಜಿಎಫ್‌: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಸಂಬಂಧ ಜೆಡಿಎಸ್‌ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದರೂ, ಜೆಡಿಎಸ್‌ ಮುಖಂಡರು ಇದುವರೆವಿಗೂ ಕೆಜಿಎಫ್‌ ವಿಧಾನಸಭಾ ಕ್ಷೇತ್ರದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಜೆಡಿಎಸ್‌ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಕೆ.ರಾಜೇಂದ್ರನ್‌, ಜೆಡಿಎಸ್ ಅಭ್ಯರ್ಥಿ ಮಲ್ಲೇಶಬಾಬು ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಅವರನ್ನು ಪಕ್ಷವು ಆಯ್ಕೆ ಮಾಡಿರುವುದರಿಂದ ನಾವು ಸಹಜವಾಗಿ ಅವರಿಗೆ ಬೆಂಬಲ ನೀಡುತ್ತೇವೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಿದ್ಧಾಂತದಲ್ಲಿ ನಾವಿದ್ದೇವೆ. ಚುನಾವಣೆಯಲ್ಲಿ ನಮ್ಮನ್ನು ಕಡೆಗಣಿಸಿದರೂ ಸಹ ನಾವು ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇವೆ. ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ. ಜೆಡಿಎಸ್‌ ಪಕ್ಷವನ್ನು ದಶಕಗಳಿಂದ ಸಂಘಟನೆ ಮಾಡಿಕೊಂಡು ಬರುತ್ತಿದ್ದೇವೆ. ಹಲವಾರು ಚುನಾವಣೆಗಳಲ್ಲಿ ನಮ್ಮ ಪಕ್ಷವು ಹೆಚ್ಚಿನ ಮತ ಗಳಿಸಲು ಸಾಧ್ಯವಾಗಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಊರಿಗೆ ಸಂಬಂಧ ಇರದ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಆದರೂ ಕಾರ್ಯಕರ್ತರು ಅವರ ಪರವಾಗಿ ಕೆಲಸ ಮಾಡಲು ಸಿದ್ಧರಿದ್ದರು. ಆದರೆ, ಅಭ್ಯರ್ಥಿಯೇ ಪತ್ತೆ ಇರಲಿಲ್ಲ. ಅಭ್ಯರ್ಥಿ ನಮ್ಮ ಪಕ್ಷದಲ್ಲಿಯೇ ಒಡಕು ಉಂಟು ಮಾಡಿದರು. ಇವೆಲ್ಲವೂ ಕಾರ್ಯಕರ್ತರಲ್ಲಿ ನೋವುಂಟು ಮಾಡಿದೆ. ಈಗಿನ ಲೋಕಸಭಾ ಅಭ್ಯರ್ಥಿ ಕೂಡ ಇದುವರೆವಿಗೂ ನಮ್ಮನ್ನು ಮಾತನಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ಚಂಗೇಗೌಡ ಮಾತನಾಡಿ, ಕ್ಷೇತ್ರದ ಪ್ರಬಲ ಮುಖಂಡ ಮೋಹನಕೃಷ್ಣ ಅವರೊಂದಿಗೆ ನಾವು ಮಾತನಾಡಿದ್ದೇವೆ. ಈ ಚುನಾವಣೆಯಲ್ಲಿ ಅವರ ಬೆಂಬಲವನ್ನು ಕೇಳಿದ್ದೇವೆ. ಅವರು ಕೂಡ ಸಹಾಯ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದರು.

ಮುಖಂಡರಾದ ಗಜೇಂದ್ರ, ರಾಜಶೇಖರ್‌, ಸಾದಿಕ್‌, ಸೌಂದರರಾಜನ್‌, ಉದಯ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT