ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜಿಲ್ಲೆಯಲ್ಲಿ ಬಿಜೆಪಿಗೆ ಯಾರು ದಿಕ್ಕು?

ಕೋಲಾರ ಕ್ಷೇತ್ರದಲ್ಲಿ ಕಾರ್ಯಕರ್ತರ ಸಂಕಟ– ಲೋಕಸಭೆ ಟಿಕೆಟ್‌ ಇಲ್ಲ, ಶಾಸಕರೂ ಇಲ್ಲ!
Published 27 ಮಾರ್ಚ್ 2024, 6:38 IST
Last Updated 27 ಮಾರ್ಚ್ 2024, 6:38 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆಯ ಇತಿಹಾಸದಲ್ಲಿ 2019ರಲ್ಲಿ ಮೊಟ್ಟಮೊದಲ ಬಾರಿ ಕೋಲಾರ ಮೀಸಲು ಕ್ಷೇತ್ರ ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿ ಟಿಕೆಟ್‌ ಕೈತಪ್ಪಿರುವುದು ಕ್ಷೇತ್ರದ ಕಾರ್ಯಕರ್ತರಲ್ಲಿ ಅನಾಥ ಭಾವನೆ ಮೂಡಿಸಿದಂತಿದೆ.

ಇನ್ನು 2028ರ ವಿಧಾನಸಭೆ ಚುನಾವಣೆ ನಡೆಯುವವರೆಗೆ ಜಿಲ್ಲೆಯಲ್ಲಿ ಕಮಲ ಪಕ್ಷದಿಂದ ಒಬ್ಬ ಶಾಸಕನೂ ಇಲ್ಲ, ಸಂಸದರೂ ಇರಲ್ಲ. ಪಕ್ಷ ಸಂಘಟನೆ ಹೇಗೆ, ಮುಂದಾಳತ್ವ ವಹಿಸುವವರು ಯಾರು, ಕಾರ್ಯಕರ್ತರ ನೋವು ಕೇಳುವವರಾರು ಎಂಬ ಆತಂಕ ಕಾರ್ಯಕರ್ತರಲ್ಲಿ ಮನೆ ಮಾಡಿದೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಗಿನ ಮೈತ್ರಿಧರ್ಮ ಪಾಲನೆ ನಿಟ್ಟಿನಲ್ಲಿ ಕ್ಷೇತ್ರದ ಟಿಕೆಟ್‌ ಅನ್ನು ಬಿಜೆಪಿ ವರಿಷ್ಠರು ಆ ಪಕ್ಷಕ್ಕೆ ತ್ಯಾಗ ಮಾಡಿದ್ದಾರೆ. ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬಹಳ ಹಿಂದಿನಿಂದಲೂ ಕೋಲಾರ ಕ್ಷೇತ್ರದ ಬಗ್ಗೆ ಕಾಳಜಿ ಹೆಚ್ಚು. ಹೀಗಾಗಿ, ಹಟ ಮಾಡಿ ಈ ಕ್ಷೇತ್ರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗೆದ್ದ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಬಿಜೆಪಿ ವರಿಷ್ಠರು, ಹಾಲಿ ಸಂಸದ ಎಸ್‌.ಮುನಿಸ್ವಾಮಿ ಹಾಗೂ ಕೋಲಾರದ ಮುಖಂಡರು ಬಹಳಷ್ಟು ಕಸರತ್ತು ನಡೆಸಿದರು. ಆ ನಿಟ್ಟಿನಲ್ಲಿ ಯಶಸ್ಸು ಸಿಗಲಿಲ್ಲ. ಈಗ ಸಂಘಟನೆ ವಿಚಾರದಲ್ಲಿ ಮುಖಂಡರು, ಕಾರ್ಯಕರ್ತರು ತಲೆಕೆಡಿಸಿಕೊಂಡಿದ್ದಾರೆ. ದಿಕ್ಕಿಲ್ಲದ ಪರಿಸ್ಥಿತಿ ಎದುರಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ (ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಹಾಗೂ ಚಿಂತಾಮಣಿ ಕ್ಷೇತ್ರ ಸೇರಿ) ಒಬ್ಬ ಬಿಜೆಪಿ ಶಾಸಕರೂ ಇಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿತ್ತು. ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಎದುರು ಕೇವಲ 257 ಮತಗಳಿಂದ ಮಂಜುನಾಥಗೌಡ ಸೋಲು ಕಂಡಿದ್ದರು. ಕೆಜಿಎಫ್‌ ಹಾಗೂ ಕೋಲಾರದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು.

2019ರ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಮೊದಲ ಬಾರಿ ಲಭಿಸಿದ ಗೆಲುವು ಬಿಜೆಪಿ ಕಾರ್ಯಕರ್ತರ ವಿಶ್ವಾಸ ಹೆಚ್ಚಿಸಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ ಅವರ ಸತತ ಏಳು ಬಾರಿಯ ಗೆಲುವಿನ ನಾಗಾಲೋಟವನ್ನು ಎಸ್‌.ಮುನಿಸ್ವಾಮಿ ಮೊದಲ ಯತ್ನದಲ್ಲೇ ತಡೆದಿದ್ದರು. ಅವರು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಮುನಿಯಪ್ಪ ವಿರುದ್ಧ ಭರ್ಜರಿ ಜಯ ಗಳಿಸಿದ್ದರು. ಅವರು 7.08 ಲಕ್ಷ ಮತ ಪಡೆದಿದ್ದರೆ, ಮುನಿಯಪ್ಪ 4.98 ಲಕ್ಷ ಮತ ಗಳಿಸಿದ್ದರು. ಅಲ್ಲದೇ, ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಜೊತೆಗೆ ಹಲವು ವಿವಾದಗಳಿಂದ ಸದ್ದು ಮಾಡಿದ್ದರು. ವೇದಿಕೆ ಮೇಲೆ ಹಾಗೂ ಹೊರಗೆ ಕಾಂಗ್ರೆಸ್‌ ಶಾಸಕರೊಂದಿಗೆ ಸಂಘರ್ಷಕ್ಕೆ ಇಳಿದಿದ್ದು ದೊಡ್ಡ ಸುದ್ದಿಯೂ ಆಗಿತ್ತು. ಹಾಗೆಯೇ ಅಂತರಗಂಗೆ ಬೆಟ್ಟದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಯೋಜನೆ, ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ಬೃಹತ್‌ ತ್ರಿವರ್ಣ ಧ್ವಜ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದರು. ಆದರೆ, ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದರು ಎಂದು ಪಕ್ಷದ ಕಾರ್ಯಕರ್ತರೇ ಹೇಳುತ್ತಾರೆ. 

2018ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಶೂನ್ಯ ಸಾಧನೆ ಮಾಡಿತ್ತು. ಕಾಂಗ್ರೆಸ್‌, ಜೆಡಿಎಸ್‌ನ ಭದ್ರಕೋಟೆ ಎನಿಸಿರುವ ಜಿಲ್ಲೆಯ ಕೋಲಾರ, ಮುಳಬಾಗಿಲು ಹಾಗೂ ಶ್ರೀನಿವಾಸಪುರ ಕ್ಷೇತ್ರದಲ್ಲಿ ಒಮ್ಮೆಯೂ ‘ಕಮಲ’ ಅರಳಿಲ್ಲ. ಮಾಲೂರಿನಲ್ಲಿ ಎರಡು ಬಾರಿ, ಕೆಜಿಎಫ್‌ನಲ್ಲಿ ಎರಡು ಬಾರಿ ಹಾಗೂ ಬಂಗಾರಪೇಟೆಯಲ್ಲಿ ಉಪಚುನಾವಣೆ ಸೇರಿದಂತೆ ಎರಡು ಬಾರಿ ಜಯ ಗಳಿಸಿದೆ. ಕೋಲಾರ ಕ್ಷೇತ್ರದಲ್ಲಿ 2008 ಹಾಗೂ 2013ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ವರ್ತೂರು ಪ್ರಕಾಶ್‌ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈಗ ಅವರೂ ಬೆಂಗಳೂರು ಸೇರಿಕೊಂಡಿದ್ದಾರೆ.

ಈ ಬಾರಿ ಅನಿವಾರ್ಯವಾಗಿ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದು, ಪಕ್ಷದ ಹಿತದೃಷ್ಟಿಯಿಂದ ಆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದ ಸ್ಥಿತಿ ಬಂದಿದೆ. ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಹೇಗೆ ಹೊಂದಾಣಿಕೆ ಆಗಲಿದೆ ಎಂಬುದೇ ಮುಂದಿನ ಕುತೂಹಲ.

ಕೆಂಬೋಡಿ ನಾರಾಯಣಸ್ವಾಮಿ
ಕೆಂಬೋಡಿ ನಾರಾಯಣಸ್ವಾಮಿ
ಓಂಶಕ್ತಿ ಚಲಪತಿ
ಓಂಶಕ್ತಿ ಚಲಪತಿ

ಬಿಜೆಪಿ ಕಾರ್ಯಕರ್ತರಲ್ಲಿ ನಿರಾಸೆ, ಬೇಸರ 2019ರಲ್ಲಿ ಮೊದಲ ಬಾರಿ ಕೋಲಾರ ಕ್ಷೇತ್ರ ಗೆದ್ದಿದ್ದ ಬಿಜೆಪಿ ಮೈತ್ರಿಧರ್ಮ ಪಾಲನೆಗಾಗಿ ಈ ಬಾರಿ ಜೆಡಿಎಸ್‌ಗೆ ಟಿಕೆಟ್‌

Quote - ಕೋಲಾರದಲ್ಲಿ ಟಿಕೆಟ್‌ ಕಳೆದುಕೊಂಡ ನೋವಿದೆ. ಮೋದಿ ಪ್ರಧಾನಿ ಮಾಡಲು ಎಲ್ಲಾ ನೋವು ಸಹಿಸಿಕೊಂಡು ಪಕ್ಷ ಕಟ್ಟುತ್ತೇವೆ. ಮೈತ್ರಿಧರ್ಮ ಪಾಲಿಸಿ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸುತ್ತೇವೆ ಓಂಶಕ್ತಿ ಚಲಪತಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಲಾರ

Cut-off box - ಕೋಲಾರ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಹೆಸರು; ಕ್ಷೇತ್ರ; ವರ್ಷ ಕೃಷ್ಣಯ್ಯ ಶೆಟ್ಟಿ; ಮಾಲೂರು; 2004 ಕೃಷ್ಣಯ್ಯ ಶೆಟ್ಟಿ; ಮಾಲೂರು; 2008 ಬಿ.ಪಿ.ವೆಂಕಟಮುನಿಯಪ್ಪ; ಬಂಗಾರಪೇಟೆ; 2004 ಎಂ.ನಾರಾಯಣಸ್ವಾಮಿ; ಬಂಗಾರಪೇಟೆ; 2011* ವೈ.ಸಂಪಂಗಿ; ಕೆಜಿಎಫ್‌; 2008 ವೈ.ರಾಮಕ್ಕ; ಕೆಜಿಎಫ್‌; 2013 * 2011ರಲ್ಲಿ ಉಪಚುನಾವಣೆ

Cut-off box - ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದವರು ಹೆಸರು; ಕ್ಷೇತ್ರ; ವರ್ಷ ಎಸ್‌.ಮುನಿಸ್ವಾಮಿ; ಕೋಲಾರ; 2019

Cut-off box - ನನಗೆ ವಯಸ್ಸಿದೆ ಪಕ್ಷ ನನ್ನ ಕೈಬಿಡಲ್ಲ: ಮುನಿಸ್ವಾಮಿ ಬಿಬಿಎಂಪಿ ಕಾರ್ಪೊರೇಟ್‌ ಆಗಿದ್ದ ನನ್ನನ್ನು ಪಕ್ಷ ಕರೆದುಕೊಂಡು ಹೋಗಿ 2019ರಲ್ಲಿ ಕೋಲಾರ ಟಿಕೆಟ್‌ ನೀಡಿತ್ತು. 7 ಲಕ್ಷ ಮತ ಹಾಕಿ ಕ್ಷೇತ್ರದ ಜನರು ಗೆಲ್ಲಿಸಿದ್ದರು. ನನಗೆ ವಯಸ್ಸಿದೆ. ಜನರು ಪಕ್ಷ ಕೈಬಿಡಲ್ಲ. ಕೋಲಾರ ನನ್ನ ಕರ್ಮಭೂಮಿ. ಕೋಲಾರ ಟಿಕೆಟ್‌ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗೃಹ ಸಚಿವ ಅಮಿತ್‌ ಶಾ ಜೊತೆಗೂ ಮಾತನಾಡಿದ್ದೇನೆ. ಈಗಾಗಲೇ ಸಮೀಕ್ಷೆ ನಡೆಸಿದ್ದು ಟಿಕೆಟ್‌ ಸಿಕ್ಕಿದ್ದರೆ ಕಳೆದ ಬಾರಿಗಿಂತ ಹೆಚ್ಚು ಮತಗಳಲ್ಲಿ ಗೆಲ್ಲುತ್ತಿದ್ದೆ. ಆದರೆ ಮೈತ್ರಿಧರ್ಮ ಪಾಲನೆ ವಿಚಾರದಲ್ಲಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಯಿತು. ಸೂಕ್ತ ಸ್ಥಾನಮಾನ ಕೊಡುವುದಾಗಿ ಪಕ್ಷ ಭರವಸೆ ನೀಡಿದೆ –ಎಸ್‌.ಮುನಿಸ್ವಾಮಿ ಹಾಲಿ ಸಂಸದ

Cut-off box - ‘ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದೇ ಈ ದುಸ್ಥಿತಿಗೆ ಕಾರಣ’ ನಾಯಕರನ್ನು ಬೆಳೆಸುವುದು ಪಕ್ಷ ಬೆಳೆಸುವುದು ತಳಮಟ್ಟದ ಕಾರ್ಯಕರ್ತರು. ಜಿಲ್ಲೆಯಲ್ಲಿ ಕಾರ್ಯಕರ್ತರ ಶಕ್ತಿ ಚೆನ್ನಾಗಿದೆ. ಬಂಟಿಂಗ್ಸ್‌ ಕಟ್ಟಲು ನಾಯಕರು ಬರಲ್ಲ. ಬೇಸರವೆಂದರೆ ಕಾರ್ಯಕರ್ತರನ್ನು ನಾಯಕರು ಸರಿಯಾಗಿ ಬಳಸಿಕೊಂಡಿಲ್ಲ. ಯಾರೇ ಇರಲಿ ಬಿಡಲಿ ಸಂಘಟನೆ ಮುಂದುವರಿಯುತ್ತದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಿ ಮೋದಿ ಕೈ ಬಲಪಡಿಸುತ್ತೇವೆ. ದುರದೃಷ್ಟಕರವೆಂದರೆ ಚುನಾವಣೆಯಲ್ಲಿ ಮಾತ್ರ ನಾಯಕರಿಗೆ ಕಾರ್ಯಕರ್ತರು ಬೇಕು. ಗೆದ್ದ ಮೇಲೆ ಹಿಂಬಾಲಿಕರಿಗೆ ಅವಕಾಶ ಕೊಡುತ್ತಾರೆ. ಕಾರ್ಯಕರ್ತರಿಗೆ ಒಂದು ಕಾಮಗಾರಿಯನ್ನೂ ಕೊಡಲ್ಲ. ಕ್ಷೇತ್ರದಲ್ಲಿ ಈಗಿನ ದುಸ್ಥಿತಿಗೆ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದೇ ಕಾರಣ. ಬೇರೆ ಪಕ್ಷಕ್ಕೆ ಟಿಕೆಟ್‌ ಹೋಗಲು ಕಾರ್ಯಕರ್ತರ ಶಾಪವೇ ಕಾರಣ. ಕಾರ್ಯಕರ್ತರ ಕಷ್ಟ ಸುಖವನ್ನು ಯಾರೂ ಆಲಿಸಲೇ ಇಲ್ಲ. ಕಾರ್ಯಕರ್ತರಲ್ಲಿ ತುಂಬಾ ನೋವಿದೆ. ಚೆನ್ನಾಗಿ ಬೆಳೆಸಿದ್ದರೆ ಟಿಕೆಟ್‌ಗಾಗಿ ಧ್ವನಿ ಎತ್ತುತ್ತಿದ್ದರು –ಕೆಂಬೋಡಿ ನಾರಾಯಣಸ್ವಾಮಿ ಬಿಜೆಪಿ ಹಿರಿಯ ಕಾರ್ಯಕರ್ತ ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT