ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಟೊಮೆಟೊ ಬೆಳೆ ನಷ್ಟ: ಕಳಪೆ ಸಸಿ ಮಾರಾಟ ಆರೋಪ

Published 26 ಮೇ 2024, 14:03 IST
Last Updated 26 ಮೇ 2024, 14:03 IST
ಅಕ್ಷರ ಗಾತ್ರ

ಕೋಲಾರ: ಬರಗಾಲದಿಂದ ತೊಂದರೆಗೆ ಒಳಗಾಗಿದ್ದ ಜಿಲ್ಲೆಯ ಕೆಲ ರೈತರೀಗ ಕಳಪೆ ಟೊಮೆಟೊ ಸಸಿ ನಾಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಟೊಮೆಟೊ ಹಣ್ಣು ಕಳಪೆ ದರ್ಜೆಯಿಂದ ಕೂಡಿರುವುದರಿಂದ ತಾಲ್ಲೂಕಿನ ಹೊದಲವಾಡಿ ರೈತ ಮಾಣಿಕ್ಯ ರಾಯ್‌ ಲಕ್ಷಾಂತರ ನಷ್ಟ ಅನುಭವಿಸಿರುವುದಾಗಿ ಹೇಳಿದ್ದು ಪರಿಹಾರಕ್ಕೆ ಆಗ್ರಹಿಸಿದ್ದಾರೆ.

‘ಬರಗಾಲದ ನಡುವೆಯೂ ಕೊಳವೆ ಬಾವಿ ನೀರು ಹರಿಸಿ ಎರಡು ಎಕರೆ ಪ್ರದೇಶದಲ್ಲಿ ಕಷ್ಟಪಟ್ಟು ಟೊಮೆಟೊ ಬೆಳೆದಿದ್ದವು. ಆದರೆ, ಸಸಿಗಳು ಕಳಪೆ ಆಗಿದ್ದರಿಂದ ಬೆಳೆ ಕೈಕೊಟ್ಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೊಮೆಟೊ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಆದರೆ, ಗಿಡಗಳಲ್ಲಿ ಟೊಮೆಟೊ ಹಣ್ಣು ಬಹಳ ಚಿಕ್ಕದಾಗಿ ಕಳಪೆಯಿಂದ ಕೂಡಿದ್ದು ಮಾರಾಟವಾಗದ ಸ್ಥಿತಿಯಲ್ಲಿದೆ. ‌ಗೋಡಂಬಿ ಹಣ್ಣಿನಂತೆ ಕಾಣಿಸುತ್ತಿದೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗದೆ ತೋಟದಲ್ಲೂ ಬಿಡಲಾರದ ಪರಿಸ್ಥಿತಿಗೆ ತಲುಪಿದ್ದಾರೆ.

‘ನರ್ಸರಿಯೊಂದರಿಂದ 9 ಸಾವಿರ ಟೊಮೆಟೊ ಸಸಿ (ನಾರು) ತಂದು ಶಿವರಾತ್ರಿ ಮಾರನೇ ದಿನ ನಾಟಿ ಮಾಡಿದ್ದೆವು. ‌ನಂತರದಲ್ಲಿ ಎರಡು ತಿಂಗಳು ಉತ್ತಮವಾಗಿ ಆರೈಕೆ ಮಾಡಿ ಬೆಳೆಸಿದ್ದೆವು. ಹೂವು, ಪಿಂದೆ ಚೆನ್ನಾಗಿ ಬಂದಿತ್ತು. ನಂತರ ಹಣ್ಣು ಕಳಪೆಯಾಗಿದೆ. ನರ್ಸರಿಯವರ ಗಮನಕ್ಕೂ ಈ ವಿಚಾರ ತಂದಿದ್ದೇನೆ. ಸಸಿ ಕಳಪೆಯಾಗಿರುವ ಪರಿಣಾಮ ಗೋಡಂಬಿ ಹಣ್ಣಿನ ರೀತಿಯಲ್ಲಿ ಟೊಮೆಟೊ ಕಾಣಿಸುತ್ತಿವೆ. ಕಳಪೆ ಸಸಿಯೇ ಇದಕ್ಕೆ ಕಾರಣ. ಎರಡು ಎಕರೆ ಟೊಮೆಟೊ ಬೆಳೆ ಬೆಳೆಯಲು ಸುಮಾರು ₹ 4 ಲಕ್ಷ ಖರ್ಚು ಮಾಡಲಾಗಿದೆ. ಈಗ ಸ್ವಲ್ಪವೂ ಆದಾಯ ಇಲ್ಲದೆ ಸಂಪೂರ್ಣ ನಷ್ಟ ಉಂಟಾಗಿದೆ’ ಎಂದು ರೈತ ವೇಣು ಬೇಸರ ವ್ಯಕ್ತಪಡಿಸಿದ್ದಾರೆ.

‘ಜಿಲ್ಲಾಧಿಕಾರಿ, ತೋಟಗಾರಿಕೆ ಇಲಾಖೆ ಹಾಗೂ ಗ್ರಾಮಾಂತರ ಠಾಣೆಗೆ ದೂರು ನೀಡಲಿದ್ದೇವೆ’ ಎಂದಿದ್ದಾರೆ.

ತೋಟಕ್ಕೆ ರೈತ ಸಂಘಟನೆಗಳ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಷ್ಟಕ್ಕೆ ಒಳಗಾಗಿರುವ ರೈತನಿಗೆ ಪರಿಹಾರ ನೀಡಬೇಕು. ಜೊತೆಗೆ ಕಳಪೆ ಬಿತ್ತನೆ ಬೀಜ, ಸಸಿ ವಿತರಿಸುವ ಕಂಪನಿಗಳಿಗೆ ಕಡಿವಾಣ ಹಾಕಬೇಕು’ ಎಂದು ರೈತ ಮುಖಂಡ ಅಬ್ಬಣಿ ಶಿವಪ್ಪ ಆಗ್ರಹಿಸಿದ್ದಾರೆ.

ಕಳಪೆ ದರ್ಜೆಯ ಟೊಮೆಟೊ
ಕಳಪೆ ದರ್ಜೆಯ ಟೊಮೆಟೊ
ಕಳಪೆ ದರ್ಜೆಯ ಟೊಮೆಟೊ
ಕಳಪೆ ದರ್ಜೆಯ ಟೊಮೆಟೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT