ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೂರು: ಕೂಲಿಕಾರ್ಮಿಕರ ವಾರ್ಡಿನಲ್ಲಿ ಮೂಲಸೌಕರ್ಯದ ಕೊರತೆ

Published 27 ಮೇ 2024, 5:44 IST
Last Updated 27 ಮೇ 2024, 5:44 IST
ಅಕ್ಷರ ಗಾತ್ರ

ಮಾಲೂರು: ಸ್ವಚ್ಛತೆ ಸೇರಿದಂತೆ ಯಾವುದೇ ರೀತಿಯ ಮೂಲಸೌಕರ್ಯಗಳ ಕೊರತೆಯಿಂದ ನಲುಗಿರುವ ಪಟ್ಟಣದ 19ನೇ ವಾರ್ಡ್‌ನ ಜನತೆ ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಪಟ್ಟಣದ 19ನೇ ವಾರ್ಡ್‌ನಲ್ಲಿ 1,137 ಮತದಾರರು ಇದ್ದು, ಸುಮಾರು 420 ಕುಟುಂಬಗಳು ವಾಸವಾಗಿದ್ದಾರೆ. ಬಹತೇಕ ರೈತ, ಕೂಲಿ ಕಾರ್ಮಿಕರು ವಾಸ ಮಾಡುತ್ತಿರುವ ಈ ವಾರ್ಡ್‌ನ ಜನತೆಗೆ ಮೂಲ ಸೌಕರ್ಯಗಳಾದ ವಿದ್ಯುತ್ ದೀಪ, ರಸ್ತೆ , ಮತ್ತು ಸ್ವಚ್ಚತೆ ಇಲ್ಲದೇ ಹೈರಾಣಾಗಿದ್ದಾರೆ.

ಬೀದಿದೀಪ ಕೊರತೆ: ವಾರ್ಡಿನ ಪ್ರಮುಖ ಬೀದಿಗಳಲ್ಲಿ ರಸ್ತೆ ದೀಪಗಳು ಅಳವಡಿಸದೇ ಇರುವುದರಿಂದ ರಾತ್ರಿಯಾಗುತ್ತಿದ್ದಂತೆ ಮಹಿಳೆಯರು ಮತ್ತು ಮಕ್ಕಳು ಮನೆಗಳಿಂದ ಹೊರ ಬರುವುದು ಅಸಾಧ್ಯದ ಸಂಗತಿಯಾಗಿದೆ. ಜೊತೆಗೆ ನಾಯಿಗಳ ಕಾಟ ಹೆಚ್ಚಾಗಿದ್ದು, ಯಾವ ಸಂದರ್ಭದಲ್ಲಿ ಯಾರ ಮೇಲೆ ಏರುಗುತ್ತದೆ ಎಂಬ ಆತಂಕ ಈ ವಾರ್ಡಿನ ಜನರಲ್ಲಿದೆ. ಇನ್ನು ಕೇಲವು ಬೀದಿಗಳಲ್ಲಿ ಅಳವಡಿಸಿರುವ ಬೀದಿ ದೀಪಗಳು ಉರಿಯುವುದೇ ಇಲ್ಲ.

ಸ್ವಚ್ಛತೆ ಮರೀಚಿಕೆ: ವಾರ್ಡಿನಲ್ಲಿ ಎಲ್ಲಿ ನೋಡಿದರೂ ತಿಪ್ಪೆಗಳು ಎದ್ದು ಕಾಣುತ್ತವೆ. ಮನೆಗಳ ಮುಂದೆ ತಿಪ್ಪೆಗಳ ರಾಶಿಯೇ ಇದೆ.  ಚರಂಡಿಗಳು ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿವೆ. ಪಟ್ಟಣದ ಹಲಾವರು ವಾರ್ಡ್‌ಗಳಲ್ಲಿ ಬೀಳುವ ಕಸವನ್ನು ಪುರಸಭೆ ಸಿಬ್ಬಂದಿ ಆಟೋಗಳಲ್ಲಿ ತಂದು ಇಲ್ಲೇ ಸುರಿಯುತ್ತಾರೆ. ವಾರಗಳು ಕಳೆದರೂ ಕಸವನ್ನು ತೆಗೆಯುವುದಿಲ್ಲ.

ಇದರಿಂದ ನಾಗರಿಕರು ರಸ್ತೆಗಳಲ್ಲಿ ಮುಗು ಮುಚ್ಚಿ ಹೋಡಾಡುವ ಪರಸ್ಥಿತಿ ನಿರ್ಮಾಣವಾಗಿದೆ.  ಇಲ್ಲಿನ ರಸ್ತೆಗಳಿಗೆ ಡಾಂಬರೀಕರಣ ನಡೆಸಿ ವರ್ಷಗಳೇ ಕಳೆದಿವೇ. ಹಳ್ಳಕೊಳ್ಳಗಳಿಂದ ಕೂಡಿರುವ ರಸ್ತೆಗಳಲ್ಲಿ ದ್ವಿಚಕ್ರವಾಹನ ಸವಾರರು ಬಿದ್ದು, ಕೈ ಕಾಲು ಮುರಿದುಕೊಳ್ಳುವುದು ಸಾಮಾನ್ಯದ ಸಂಗತಿಯಾಗಿದೆ.

ಹದಗೆಟ್ಟ ರಸ್ತೆಗಳು:

19 ವಾರ್ಡಿನ ಗಾಂಧಿ ಸರ್ಕಲ್ ನಿಂದ ಪಟಾಲಮ್ಮ ದೇವಾಲಯದ ಬಳಿಯ ಕೆರೆ ಕಟ್ಟೆಯ ರಸ್ತೆಯ ಮೂಲಕ ಸುಮಾರು 16 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ವಾಹನ ಸವಾರರಿಗೆ ಸಂಚಾರ ಮಾಡಲು ಬಹಳ ತೊಂದರೆಯಾಗಿದೆ. ಗ್ರಾಮೀಣ ಭಾಗದ ಜನತೆ ತಮಗೆ ಅಗತ್ಯವಿರುವ ದಿನ ನಿತ್ಯದ ವಸ್ತುಗಳನ್ನು ಖರೀದಿಸಲು ಪಟ್ಟಣಕ್ಕೆ ಈ ರಸ್ತೆಯಲ್ಲೇ ದ್ವಿಚಕ್ರವಾಹನಗಳ ಮೂಲಕ ಬಂದು ಹೋಗುತ್ತಾರೆ. ರಸ್ತೆಯನ್ನು ದುರಸ್ತಿ ಮಾಡದೇ ಇರುವುದರಿಂದ ಬಹಳ ತೊಂದರೆ ಪಡುವಂತಾಗಿದೆ.

ಸ್ವಚ್ಛತೆ ಇಲ್ಲದ ಮುಖ್ಯ ಕಾಲುವೆ: ಮಳೆ ನೀರು ಕೆರೆಗೆ ಹರಿಯುವ ಮುಖ್ಯ ಕಾಲುವೆ ಸ್ವಚ್ಛತೆ ಇಲ್ಲದೆ ಕೊಳಚೆ ನೀರು ಮನೆಗಳಿಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ. 19ನೇ ವಾರ್ಡಿನಲ್ಲಿ ಕೆರೆಗೆ ಹಾದು ಹೋಗಿರುವ ಸುಮಾರು ಅರ್ಧ ಕಿ.ಮೀ. ಉದ್ದದ ಕಾಲುವೆಯಲ್ಲಿ ಒಳಚರಂಡಿ ಮಂಡಳಿ ವತಿಯಿಂದ ಕೊಳಚೆ ನೀರು ಹರಿಯುವ ಛೇಂಬರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಮಳೆ ಹೆಚ್ಚಾದಾಗ ನೀರು ಕಾಲುವೆಯಲ್ಲಿ ಹರಿಯಲು ಅವಕಾಶ ಇಲ್ಲದೇ ಕಾಳುವೆ ಅಂಚಿನ ಮೆಗಳಿಗೆ ನುಗ್ಗುತ್ತದೆ. ಈ ಕಾಲುವೆಯ ಪಕ್ಕದ ಮನೆಗಳಲ್ಲಿ ವಾಸ ಮಾಡುವ ಕುಟುಂಬಗಳು ಮಳೆ ಶಬ್ದ ಕೇಳಿದರೇ ಬೆಚ್ಚಿ ಬೀಳುತ್ತಾರೆ.

‌ಉಪಯೋಗಕ್ಕೆ ಬಾರದ ಶೌಚಾಲಯ: ಪುರಸಭೆ ವತಿಯಿಂದ 19ನೇವಾರ್ಡಿನ ಪಟಾಲಮ್ಮ ದೇವಾಲಯದ ಮುಂಭಾಗದಲ್ಲಿ ನಿರ್ಮಾಣ ಮಾಡಿರುವ ಶೌಚಾಲಯಕ್ಕೆ ಬೀಗ ಜಡಿದು ಒಂದು ವರ್ಷ ಕಳೆದಿದೆ. ಇಲ್ಲಿಯವರೆಗೂ ಶೌಚಾಲಯದ ಬಾಗಿಲು ತೆಗೆಸುವ ಗೋಜಿಗೆ ಪುರಸಭೆ ಅಧಿಕಾರಿಗಳು ಹೋಗಿಲ್ಲ.

ಇದರಿಂದ ಶೌಚಾಲಯ ಪಕ್ಕದಲ್ಲಿರುವ ಸ್ಥಳವನ್ನು ಜನರು ಶೌಚಾಲಯವನ್ನಾಗಿ ಮಾಡಿಕೊಂಡಿರುವುದರಿಂದ ಈ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಹೋಗಬೇಕು. ಶೌಚಾಲಯ ಮುಚ್ಚಿರುವುದರಿಂದ ಗಂಡಸರು ರಸ್ತೆಯ ಬಳಿಯಲ್ಲೇ ತಮ್ಮ ಅವಸರವನ್ನು ನೀಗಿಸಿಕೊಳ್ಳುತ್ತಾರೆ.

ವಾರ್ಡಿನಲ್ಲಿ 1,137 ಜನಸಂಖ್ಯೆ ಇದ್ದರೂ, ಇಲ್ಲಿನ ಮಕ್ಕಳಿಗೆ ಅಂಗನವಾಡಿ ಕೇಂದ್ರದ ಸೌಲಭ್ಯ ಇಲ್ಲ. 19ನೇ ವಾರ್ಡಿನಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಈ ಕುಟುಂಬಗಳ ಮಕ್ಕಳಿಗೆ ಅಂಗನವಾಡಿ ಶಾಲೆ ಇಲ್ಲ. ಈ ಮೊದಲು ಇದ್ದಂತ ಅಂಗನವಾಡಿ ಶಾಲೆಯನ್ನು ಕಟ್ಟಡ ಕೊರತೆಯಿಂದ ನಿಲ್ಲಿಸಲಾಗಿದೆ. ಇದರಿಂದ ಇಲ್ಲಿನ ಪುಟ್ಟ ಮಕ್ಕಳಿಗೆ ಬಹಳ ತೊಂದರೆಯಾಗಿದೆ.

ಪುರಸಭೆ ಅಧಿಕಾರಿಗಳು ಈ ಕೂಡಲೇ ವಾರ್ಡಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.

ಮಾಲೂರಿನ 19ನೇ ವಾರ್ಡಿನ ವ್ಯಾಪ್ತಿಯಲ್ಲಿ ಕಸದ ರಾಶಿಗಳು
ಮಾಲೂರಿನ 19ನೇ ವಾರ್ಡಿನ ವ್ಯಾಪ್ತಿಯಲ್ಲಿ ಕಸದ ರಾಶಿಗಳು
ಮಾಲೂರಿನ 19ನೇ ವಾರ್ಡಿನ ವ್ಯಾಪ್ತಿಯ ಗಾಂಧಿ ಸರ್ಕಲ್ ಬಳಿ ಇರುವ ಪುರಸಭೆಯ ಶೌಚಾಲಯಕ್ಕೆ ಬೀಗ ಜಡಿದಿರುವುದು
ಮಾಲೂರಿನ 19ನೇ ವಾರ್ಡಿನ ವ್ಯಾಪ್ತಿಯ ಗಾಂಧಿ ಸರ್ಕಲ್ ಬಳಿ ಇರುವ ಪುರಸಭೆಯ ಶೌಚಾಲಯಕ್ಕೆ ಬೀಗ ಜಡಿದಿರುವುದು
ಮಾಲೂರು ಪಟ್ಟಣದ 19 ನೇ ವಾರ್ಡಿನ ವ್ಯಾಪ್ತಿಯ ಕೆರೆಗೆ ಹರಿಯುವ ಕಾಲುವೆ ಸ್ವಚ್ಚತೆ ಇಲ್ಲದೆ ಗಿಡ ಗೆಂಟೆಗಳು ಹಾಗೂ ಚೆಂಬರ್‍ ನಿರ್ಮಾನ ಮಾಡಿರುವುದು
ಮಾಲೂರು ಪಟ್ಟಣದ 19 ನೇ ವಾರ್ಡಿನ ವ್ಯಾಪ್ತಿಯ ಕೆರೆಗೆ ಹರಿಯುವ ಕಾಲುವೆ ಸ್ವಚ್ಚತೆ ಇಲ್ಲದೆ ಗಿಡ ಗೆಂಟೆಗಳು ಹಾಗೂ ಚೆಂಬರ್‍ ನಿರ್ಮಾನ ಮಾಡಿರುವುದು
ಮಾಲೂರಿನ 19ನೇ ವಾರ್ಡಿನ ವ್ಯಾಪ್ತಿಯಲ್ಲಿ ಕಸದ ರಾಶಿಗಳು
ಮಾಲೂರಿನ 19ನೇ ವಾರ್ಡಿನ ವ್ಯಾಪ್ತಿಯಲ್ಲಿ ಕಸದ ರಾಶಿಗಳು
9ನೇ ವಾರ್ಡಿನ ಜನತೆಗ ಮೂಲಸೌಕರ್ಯಗಳಾದ ರಸ್ತೆ  ಬೀದಿ ದೀಪ ಇಲ್ಲ. ವಾರ್ಡ್‌ನ ಪಟಾಲಮ್ಮ ದೇವಾಲಯದ ಬಯಲಿನಲ್ಲಿ ಪುರಸಭೆ ಆಟೋಗಳಿಂದ ಪಟ್ಟಣದ ಕಸವನ್ನು ತಂದು ಸುರಿಯುತ್ತಿದ್ದಾರೆ. ಇದರಿಂದ ಇಲ್ಲನ ಜನತೆಗೆ ಬಹಳ ತೊಂದರೆಯಾಗಿದೆ. ಹಲವಾರು ಬಾರಿ ಪುರಸಭೆ ಅಧಿಕಾರಿಗಳ ಬಳಿ ಸ್ವಚ್ಛಗೊಳಿಸುವಂತೆ ಒತ್ತಡ ಹಾಕಿದರೂ ಪ್ರಯೋಜನವಾಗಿಲ್ಲ. ಪುರಸಭಾ ಸದಸ್ಯರ ಸಭೆಗಳಲ್ಲಿ ವಾರ್ಡ್ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಬಳಿ ಎಷ್ಟು ಬಾರಿ ಹೇಳಿದರೂ ಕಿವಿಗೆ ಬೀಳುವುದಿಲ್ಲ. ನೋಡೋಣ ಮಾಡೋಣ ಅಂತ ಸಬೂಬೂ ನೀಡುತ್ತಾರೆ.
ಮಂಜುಳಾ 19ನೇ ವಾರ್ಡ್‌ನ ಪುರಸಭಾ ಸದಸ್ಯೆ
ಪಟ್ಟಣದ 19ನೇ ವಾರ್ಡ್‌ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ಮಾಡಲಾಗುತ್ತಿದೆ. ಪಟ್ಟಣದ ಇತರೆ ವಾರ್ಡ್‌ಗಳ ನಾಗರಿಕರು ಕಸವನ್ನು ತಂದು ಪಟಾಲಮ್ಮ ದೇವಾಲಯದ ಬಳಿಯ ಖಾಲಿ ಜಾಗದಲ್ಲಿ ಸುರಿದು ಹೋಗುತ್ತಾರೆ. ಪುರಸಭೆ ವತಿಯಿಂದ ಅದಷ್ಟು ಬೇಗ ಟ್ರ್ಯಾಕ್ಟರ್‌ಗಳ ಮೂಲಕ ಕಸ ನಿರ್ವಹಣೆ ಮಾಡಲಾಗುತ್ತಿದೆ. ಪೌರ ಕಾರ್ಮಿಕರು ಪ್ರತಿ ದಿನ ಸ್ವಚ್ಛತೆ ನಡೆಸುತ್ತಿದ್ದಾರೆ. 19ನೇವಾರ್ಡಿನಲ್ಲಿ ಪ್ರತಿ ದಿನ ಬೆಳಿಗ್ಗೆ ಕಸ ಸಂಗ್ರಹಕ್ಕಾಗಿ ಅಟೋ ಬರುತ್ತಿದೆ. ನಾಗರಿಕರು ಕಸವನ್ನು ಆಟೋಗೆ ಹಾಕಬೇಕು.
ಶ್ರೀನಿವಾಸ್  ಹಿರಿಯ ಆರೋಗ್ಯಾಧಿಕಾರಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT