ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಕಳಿಸಿದ ಗತ ವೈಭವ: ಮುದುವಾಡಿ ಕೆರೆಯಲ್ಲಿ ಸೂರ್ಯಾ‌ಸ್ತದ ಸೊಬಗು

Last Updated 27 ಮಾರ್ಚ್ 2022, 4:17 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಮುದುವಾಡಿ ಗ್ರಾಮದ ಕೆರೆ ಮೊದಲಿನಿಂದಲೂ ಸೂರ್ಯಾಸ್ತದ ಸೊಬಗಿಗೆ ಪ್ರಸಿದ್ಧಿಯಾಗಿದೆ. ಕೆರೆ ತುಂಬಿದಾಗ, ಸಂಜೆಯ ಹೊತ್ತು ಜನರು ಕೆರೆಯ ಪೂರ್ವಕ್ಕೆ ನಿರ್ಮಿಸಿರುವ ಕಟ್ಟೆಯ ಮೇಲೆ ನಿಂತು, ಈ ಸೊಬಗನ್ನು ಕಣ್ತುಂಬಿಸಿಕೊಳ್ಳುತ್ತಾರೆ.

ಕೆರೆಯಲ್ಲಿ ಹೂಳು ತುಂಬಿದ ಪರಿಣಾಮ ಹಾಗೂ ಮಳೆ ಕೊರತೆಯಿಂದ ಕೆರೆ ಕೋಡಿ ಬಿದ್ದು ಮೂರು ದಶಕಗಳೇ ಕಳೆದಿದ್ದವು. ಈ ಬಾರಿ ಕೆ.ಸಿ ವ್ಯಾಲಿ ನೀರನ್ನು ಕೆರೆಗೆ ಹರಿಸಿದ ಹಾಗೂ ಭಾರಿ ಮಳೆ ಸುರಿದ ಪರಿಣಾಮ ಕೆರೆ ಕೋಡಿ ಹರಿದಿದ್ದು, ಗತ ವೈಭವ
ಮರುಕಳಿಸಿದೆ.

ಮುದುವಾಡಿ ಕೆರೆ ಕೋಲಾರ ಜಿಲ್ಲೆಯ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮಾಂಬುದಿ ಅಗ್ರಹಾರ ಗ್ರಾಮದ ಕೆರೆ ಮೊದಲ ಸ್ಥಾನದಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಿಂದ ಪಾಲಾರ್ ನದಿ ಹರಿಯುತ್ತದೆ.

ಮಳೆಗಾಲದಲ್ಲಿ ಮಾತ್ರ ಹರಿಯುವ ಈ ನದಿಯ ಜಾಡಿನಲ್ಲಿ ಸೋಮಾಂಬುದಿ ಅಗ್ರಹಾರದ ಕೆರೆ ಸಿಗುತ್ತದೆ. ಅದು ಕೋಡಿ ಬಿದ್ದಾಗ ಹೊರ ಹೋಗುವ ನೀರು ಮುಂದೆ ಸಾಗಿ ಜನ್ನಘಟ್ಟ ಗ್ರಾಮದ ಕೆರೆಯನ್ನು ಸೇರುತ್ತದೆ. ಅಲ್ಲಿಂದ ಮುದುವಾಡಿ ಕೆರೆಗೆ ಸಾಗುತ್ತದೆ.

ವಿಶಾಲವಾದ ಕೆರೆಯ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಸಾಗುವ ಅಲೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಗಾಳಿ ಜೋರಾಗಿ ಬಿಸಿದರಂತೂ ಅಲೆಗಳ ಆರ್ಭಟ ಹೆಚ್ಚುತ್ತದೆ. ಸಂಜೆ ಹೊತ್ತು ಕೆರೆಯ ಪೂರ್ವದ ಕಟ್ಟೆಯ ಮೇಲೆ ನಿಂತು ನೋಡಿದರೆ, ಆಕಾಶದ ಕೆಂಬಣ್ಣ ಕಣ್ಣಿಗೆ ರಾಚುತ್ತದೆ. ಅದರ ಪ್ರತಿಬಿಂಬ ಕೆರೆಯನ್ನು ಆವರಿಸುತ್ತದೆ. ಪಶ್ಚಿಮದಲ್ಲಿ ದಿಗಂತದಂತೆ ಕಾಣುವ ಕೆರೆ ಅಂಚಿನಲ್ಲಿ ಸೂರ್ಯ ಕೆಳಗೆ ಜಾರುವುದನ್ನು ನೋಡಿಯೇ ಆನಂದಿಸಬೇಕು.

ಹಿಂದೆ ಈ ಕೆರೆಯಲ್ಲಿ ಸೂರ್ಯಾಸ್ತದ ಸವಿ ಸವಿಯಲು ಜನರ ದಂಡು ನೆರೆಯುತ್ತಿತ್ತು. ಈಗಲೂ ಈ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸೂರ್ಯಾಸ್ತದ ಸೊಬಗಿಗೆ ಮನಸೋತು ವಾಹನಗಳನ್ನು ನಿಲ್ಲಿಸಿ ಬೆರಗುಗಣ್ಣಿನಿಂದ ನೋಡುವುದುಂಟು.

ಶ್ರೀನಿವಾಸಪುರ–ಕೋಲಾರ ರಸ್ತೆಯಲ್ಲಿನ ಈ ವಿಶಾಲವಾದ ಕೆರೆ ಸೂರ್ಯಾಸ್ತಕ್ಕೆ ಮಾತ್ರವಲ್ಲದೆ ನಾಟಿ ಮೀನಿಗೂ ಪ್ರಸಿದ್ಧಿ ಪಡೆದಿದೆ. ಜಲ್ಲೆ, ಮಾರವ, ಕೊಡದನ, ಚೇಳು, ಪಕ್ಕೆ, ಉಣಸೆ ಮತ್ತಿತರ ಜಾತಿಯ ನಾಟಿ ಮೀನುಗಳು ಮೀನು ಪ್ರಿಯರ ಬಾಯಲ್ಲಿ ನೀರೂರಿಸುತ್ತವೆ. ನೀರು ಕಡಿಮೆಯಾದರೆ ಕೆರೆ ವ್ಯಾಪ್ತಿಗೆ ಸೇರಿದ ಗ್ರಾಮಗಳ ಗ್ರಾಮಸ್ಥರು ಸಾಂಘಿಕವಾಗಿ ಮೀನು ಹಿಡಿದು ಹಂಚಿಕೊಳ್ಳುತ್ತಿದ್ದರು. ಹಾಗೆ ದೊರೆತ ಮೀನನ್ನು ತಾವು ಮಾತ್ರ ತಿನ್ನದೆ, ನೆಂಟರಿಷ್ಟರಿಗೆ ಕಳುಹಿಸುತ್ತಿದ್ದರು.

ಕೆರೆಯಲ್ಲಿ ನೀರು ಹಿಂದೆ ಸರಿದಂತೆ ಏಡಿ ಹಿಡಿಯುವ ಕಾರ್ಯ ಶುರುವಾಗುತ್ತಿತ್ತು. ಸನಿಕೆ, ಗಡಿಗೆ ಹಿಡಿದ ಜನರು ಕೆರೆ ಅಂಚಲ್ಲಿ ಸುತ್ತಾಡಿ ಬೊಕ್ಕೆ ಅಗೆದು ಏಡಿ ಹಿಡಿದು ಸಂಭ್ರಮಿಸುತ್ತಿದ್ದರು. ಕೆರೆ ಸಿಗಡಿ ಕೆರೆಯ ಇನ್ನೊಂದು ಉತ್ಪನ್ನ. ಇದನ್ನು ಹಿಡಿದು ಫ್ರೈ ಮಾಡಿ ಸವಿಯುತ್ತಿದ್ದರು. ಒಣಗಿಸಿ ಮಸಾಲೆ ಪುಡಿ ತಯಾರಿಸಿ ಅನ್ನದೊಂದಿಗೆ ತಿನ್ನುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಕೆರೆಯನ್ನು ಹರಾಜು ಮಾಡಿ ದೈತ್ಯ ಮೀನು ಸಾಕಲು ಪ್ರಾರಂಭಿಸಿದ ಮೇಲೆ ನಾಟಿ ಮೀನುಗಳು ನೆಲೆ ಕಳೆದುಕೊಂಡಿವೆ.

ಕೆರೆಯಲ್ಲಿ ನೀರಾಶ್ರಿತ ಹಕ್ಕಿಗಳ ಕಲರವ ಸಾಮಾನ್ಯ. ಕೊಕ್ಕರೆ ಹಿಂಡುಗಳಿಗೆ ಲೆಕ್ಕವಿಲ್ಲ. ನೀರಿನಲ್ಲಿ ಮುಳುಗಿ ಮೀನು ಹಿಡಿಯುವ ಮುಳುಗು ಹಕ್ಕಿಗಳು ಖುಷಿ ಕೊಡುತ್ತದೆ. ನೀರಿನ ಮೇಲೆ ಪುಟ್ಟ ದೋಣಿಗಳಂತೆ ಸಾಗುವ ನೀರು ಕೋಳಿಗಳು ಮನಸ್ಸಿಗೆ ಮುದ ನೀಡುತ್ತವೆ.

ಕೆರೆಗೆ ನೀರು ಹರಿಸುವ ಪಾಲಾರ್ ಕಾಲುವೆಯಲ್ಲಿ ಬೆಳೆದು ನೋಡುಗರ ಕಣ್ತಣಿಸುವ ಬಹೋಪಯೋಗಿ ಜಂಬು.
ಕೆರೆಗೆ ನೀರು ಹರಿಸುವ ಪಾಲಾರ್ ಕಾಲುವೆಯಲ್ಲಿ ಬೆಳೆದು ನೋಡುಗರ ಕಣ್ತಣಿಸುವ ಬಹೋಪಯೋಗಿ ಜಂಬು.

ಹಿಂದೆ ಕೆರೆಗೆ ನೀರು ಹರಿಸುವ ದೊಡ್ಡ ಕಾಲುವೆ ಜಂಬಿಗೆ ಹೆಸರುವಾಸಿಯಾಗಿತ್ತು. ಕಾಲುವೆ ಸಮೀಪದ ಗ್ರಾಮಗಳ ಜನರು ಜಂಬನ್ನು ಕೊಯ್ದು ಒಣಗಿಸಿ ಮನೆಗಳ ಚಾವಣಿ ನಿರ್ಮಿಸಲು ಬಳಸುತ್ತಿದ್ದರು. ಗುಡಿಸಲುಗಳ ನಿರ್ಮಾಣ ಹಾಗೂ ಮಳೆಯಿಂದ ರಕ್ಷಣೆ ಪಡೆಯಲು ಗೊಂಗಡಿ ತಯಾರಿಸಲೂ ಜಂಬನ್ನು ಬಳಸಲಾಗುತ್ತಿತ್ತು. ಆದರೆ, ಮಳೆ ಕೊರತೆಯಿಂದ ಕಾಲುವೆಯಲ್ಲಿ ನೀರು ಹರಿಯುವುದು ನಿಂತಿತು. ಅದರೊಂದಿಗೆ ಜಂಬು ಕಣ್ಮರೆಯಾಗಿತ್ತು.

ಈ ಬಾರಿ ಉತ್ತಮ ಮಳೆಯಾದ ಪರಿಣಾಮ ಕೆ.ಸಿ ವ್ಯಾಲಿ ನೀರಿನೊಂದಿಗೆ ಕಾಲುವೆ ತುಂಬಿ ಹರಿಯಿತು. ಹಾಗಾಗಿ, ಜಂಬು ಪುನರ್ಜನ್ಮ ಪಡೆದುಕೊಂಡಿದೆ. ಕಾಲುವೆ ಪಕ್ಕದಲ್ಲಿ ಹಚ್ಚಗೆ ಬೆಳೆದು ನಿಂತಿರುವ ಜಂಬು ನೋಡುಗರ ಕಣ್ಸೆಳೆಯುತ್ತಿದೆ.

‘ಎಲ್ಲ ಕಡೆಗಳಂತೆ ಮುದುವಾಡಿ ಕೆರೆಯಲ್ಲೂ ಗದ್ದೆ ಬಯಲಿನ ವ್ಯವಸಾಯ ನಿಂತಿದೆ. ಆದರೆ, ಈ ಬಾರಿ ಕೆರೆ ತುಂಬಿರುವುದರಿಂದ ಅಂತರ್ಜಲ ವೃದ್ಧಿಯಾಗಿದೆ. ಸೂರ್ಯಾಸ್ತದ ಸೊಬಗು ಮರುಕಳಿಸಿದೆ. ಇದು ಅತ್ಯಂತ ಸಂತೋಷದ ಸಂಗತಿ’ ಎಂದು ಕೃಷಿಕ ನಾರಾಯಣಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT