ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಹೋಟೆಲ್ ಆಗಿರುವ ಬಸ್‌ ತಂಗುದಾಣ

ಕೆ.ತ್ಯಾಗರಾಜ ಕೊತ್ತೂರು
Published 21 ಮೇ 2024, 6:34 IST
Last Updated 21 ಮೇ 2024, 6:34 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಕುರುಡುಮಲೆಯಲ್ಲಿ ಪ್ರಯಾಣಿಕರಿಗೆ ನಿರ್ಮಿಸಿರುವ ಬಸ್ ತಂಗುದಾಣವನ್ನು ಸುತ್ತಮುತ್ತಲಿನ ಅಂಗಡಿಯವರು ಅತಿಕ್ರಮಣ ಮಾಡಿಕೊಂಡು ವಾಣಿಜ್ಯ ಮಳಿಗೆಗಳ ಸಂಕೀರ್ಣ ಮಾದರಿಯಲ್ಲಿ ಬದಲಿಸಿಕೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ರಾಜ್ಯದಲ್ಲಿ ರಾಜಕಾರಣಿಗಳ ಆಕರ್ಷಕ ಕೇಂದ್ರವಾಗಿರುವ ಕುರುಡುಮಲೆ ಪ್ರವಾಸಿ ತಾಣವಾಗಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ದೇವಾಲಯಕ್ಕೆ ಬರುತ್ತಾರೆ. ಜತೆಗೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ನಾನಾ ಕಡೆಗಳಿಗೆ ಹೋಗಿ ಬರುತ್ತಾರೆ. ಇದರಿಂದ ಪ್ರಯಾಣಿಕರು ಗಾಳಿ, ಮಳೆ ಹಾಗೂ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಸರ್ಕಾರದಿಂದ ಸುಸಜ್ಜಿತವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಹಾಗೂ ತಂಗುದಾಣ ನಿರ್ಮಿಸಿದೆ. ಆದರೆ, ಕೆಲವು ವ್ಯಾಪಾರಿಗಳು ತಂಗುದಾಣದಲ್ಲಿ ಹೋಟೆಲ್‌ ಹಾಗೂ ನಾನಾ ಬಗೆಯ ಅಂಗಡಿಗಳನ್ನು ಇಟ್ಟುಕೊಂಡು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇದರಿಂದ ಪ್ರಯಾಣಿಕರು ಬಯಲಲ್ಲೇ ನಿಲ್ಲುವ ಸ್ಥಿತಿ ಎದುರಾಗಿದೆ.

ತಂಗುದಾಣದಲ್ಲಿ ಒಂದು ಕಡೆಗೆ ಕೆಲವರು ಗೋಡೆ ನಿರ್ಮಿಸಿ ಹೋಟೆಲನ್ನಾಗಿ ಮಾಡಿಕೊಂಡಿದ್ದರೆ, ಮತ್ತೊಂದು ಭಾಗವನ್ನು ಚಿಲ್ಲರೆ ಅಂಗಡಿ ಹಾಗೂ ದೋಸೆ ಕಾರ್ನರ್‌ ಆಗಿ ಬದಲಿಸಿಕೊಂಡು ಸಂಪೂರ್ಣವಾಗಿ ವ್ಯಾಪಾರಿಗಳು ತಂಗುದಾಣವನ್ನು ಆಕ್ರಮಿಸಿಕೊಂಡಿದ್ದಾರೆ. ಇದರಿಂದ ತಂಗುದಾಣ ವ್ಯಾಪಾರಿಗಳ ಪಾಲಾಗಿದೆ.

ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು ವರ್ಷಗಳ ಹಿಂದೆ ಗ್ರಾಮದಲ್ಲಿ ಸುಸಜ್ಜಿತ ತಂಗುದಾಣ ನಿರ್ಮಿಸಿದ್ದರೆ, ಅದನ್ನು ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ಕೇಂದ್ರಗಳಾಗಿ ಮಾಡಿಕೊಂಡಿದ್ದಾರೆ. ತಂಗುದಾಣದಲ್ಲಿ ಕೆಎಸ್ಆರ್‌ಟಿಸಿ ತಂಗುದಾಣ ಎಂಬ ನಾಮಫಲಕ ಬಿಟ್ಟರೆ ಉಳಿದ ಯಾವ ಮಾಹಿತಿಯೂ ಕಾಣದಂತೆ ಮುಚ್ಚಿ ಹಾಕಿದ್ದಾರೆ. ಹಾಗಾಗಿ ಯಾರಿಗೆ ದೂರು ನೀಡಬೇಕು ಎಂಬುದು ಪ್ರಯಾಣಿಕರಿಗೆ ತಿಳಿಯದಂತಾಗಿದೆ.

ಇನ್ನೂ ತಂಗುದಾಣದಲ್ಲಿನ ಅಂಗಡಿ ಹಾಗೂ ಹೋಟೆಲ್‌ನವರು ಮುಂಭಾಗ ದೋಸೆ ಹಾಗೂ ಬೋಂಡಾ ಮತ್ತಿತರ ಆಹಾರ ಸಾಮಾಗ್ರಿಗಳನ್ನು ತಯಾರಿಸಲು ಕಾದ ತವಾ (ಹೆಂಚು) ಹಾಗೂ ಎಣ್ಣೆಯ ಬಾಂಡಲಿ ಇಟ್ಟಿರುತ್ತಾರೆ. ಇದರಿಂದ ಪ್ರಯಾಣಿಕರು ಸ್ವಲ್ಪ ಯಾಮಾರಿದರೂ ಎಣ್ಣೆ ಹಾಗೂ ಬೆಂಕಿ ಮೈ ಮೇಲೆ ಬೀಳುವ ಸಂಭವ ಇರುತ್ತದೆ. ಹಾಗಾಗಿ ತಂಗುದಾಣದ ಮುಂದೆ ಓಡಾಡಲು ಭಯವಾಗುತ್ತದೆ ಎಂಬುದು ಪ್ರಯಾಣಿಕರ ಮಾತಾಗಿದೆ.

ಕುರುಡುಮಲೆ ದೇವಾಸ್ಥಾನಕ್ಕೆ ಪ್ರತಿನಿತ್ಯ ನೂರಾರು ಮಂದಿ ಪ್ರಯಾಣಿಸುತ್ತಾರೆ. ಇದರಿಂದ ಜನಸಂದಣಿಯೂ ಹೆಚ್ಚಿರುತ್ತದೆ. ಬೆರಳಣಿಕೆಯಷ್ಟು ಬಸ್‌ ಗ್ರಾಮಕ್ಕೆ ಬರುವುದರಿಂದ ತಂಗುದಾಣದಲ್ಲಿಯೇ ಕೂರಬೇಕಾಗುತ್ತದೆ. ಆದರೆ, ತಂಗುದಾಣ ವ್ಯಾಪಾರಿಗಳ ಪಾಲಾಗಿರುವುದರಿಂದ ಪ್ರಯಾಣಿಕರು ಮರ ಗಿಡ ಹಾಗೂ ಸ್ಥಳೀಯ ಅಂಗಡಿ ಮುಂಗಟ್ಟುಗಳ ಮುಂದೆ ನಿಲ್ಲುವಂತಾಗಿದೆ. ಇದರಿಂದ ಕೂಡಲೇ ತಂಗುದಾಣದ ಅತಿಕ್ರಮಣ ತೆರವು ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಸ್ಥಳೀಯರು ಮನವಿ
ಮಾಡಿದ್ದಾರೆ.

ನಾನು ಕುರುಡುಮಲೆಯಲ್ಲಿ ಪಿಡಿಒ ಆಗಿ ಅಧಿಕಾರ ಸ್ವೀಕಾರಕ್ಕಿಂತ ಮೊದಲಿನಿಂದಲೂ ತಂಗುದಾಣದಲ್ಲಿ ಅಂಗಡಿ ಹೋಟೆಲ್‌ಗಳಿವೆ. ತಂಗುದಾಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.

-ತುಳಸಿರಾಮ ಶೆಟ್ಟಿ, ಪಿಡಿಒ

ತಂಗುದಾಣದ ಸ್ಥಳವನ್ನು ಯಾವುದೇ ಹರಾಜು ಅಥವಾ ಇನ್ನಿತರೆ ವ್ಯವಹಾರದ ಮೂಲಕ ಯಾವ ಅಂಗಡಿ ಅಥವಾ ಹೋಟೆಲ್‌ಗೆ ಬಾಡಿಗೆ  ಅಥವಾ ಲೀಜಿಗೆ ನೀಡಿಲ್ಲ. ಈ ಕುರಿತು ಪರಿಶೀಲಿಸಲಾಗುವುದು.

-ಅನ್ಸರ್ ಪಾಷ, ಕೆಎಸ್ಆರ್‌ಟಿಸಿ ವ್ಯವಸ್ಥಾಪಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT