ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಹಲೋ.. ನಗರಸಭೆ ಕಣ್ಮುಚ್ಚಿಕೊಂಡಿದೆಯೇ?

Published 28 ಆಗಸ್ಟ್ 2023, 7:46 IST
Last Updated 28 ಆಗಸ್ಟ್ 2023, 7:46 IST
ಅಕ್ಷರ ಗಾತ್ರ

ಕೆ.ಓಂಕಾರ ಮೂರ್ತಿ

ಕೋಲಾರ: ಬಹಳ ದಿನಗಳಿಂದ ಅಂಡರ್‌ಪಾಸ್‌ ರಸ್ತೆಯ ಒಂದು ಬದಿ ಸಂಪೂರ್ಣ ಗಿಡ ಹಾಗೂ ತ್ಯಾಜ್ಯದಿಂದ ಮುಚ್ಚಿ ಹೋಗಿದ್ದರೂ ಕೇಳುವವರು ಇಲ್ಲ, ಕೊಳಚೆ ನೀರು ತುಂಬಿ ಸೊಳ್ಳೆ ಉತ್ಪಾದನೆಯ ಕಾರ್ಖಾನೆ ಆಗಿದ್ದರೂ ಗಮನಿಸುವವರು ಇಲ್ಲ, ವಿವಿಧ ಬಡಾವಣೆಗಳಲ್ಲಿ ತ್ಯಾಜ್ಯ ತುಂಬಿ ಕೊಳಚೆ ನೀರು ಕಟ್ಟಿಕೊಂಡು ಚರಂಡಿಗಳು ಗಬ್ಬು ನಾರುತ್ತಿದ್ದರೂ ಸರಿಡಪಡಿಸುವವರು ಇಲ್ಲ!

ಇದು ಕೋಲಾರ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿ. ಇದರಿಂದ ಸಾರ್ವಜನಿಕರು ರೋಸಿ ಹೋಗಿದ್ದು, ‘ನಗರಸಭೆ ಕಣ್ಮುಚ್ಚಿಕೊಂಡಿದೆಯೇ’ ಎಂದು ಆಕ್ರೋಶದಿಂದಲೇ ಪ್ರಶ್ನಿಸುತ್ತಿದ್ದಾರೆ.

ಪ್ರಮುಖವಾಗಿ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಬಳಿ ಕೀಲುಕೋಟೆಗೆ ತೆರಳುವ ರೈಲ್ವೆ ಅಂಡರ್‌ಪಾಸ್‌ ರಸ್ತೆಯ ಒಂದು ಭಾಗ ಸಂಪೂರ್ಣವಾಗಿ ಕಳೆ ಗಿಡಗಳಿಂದ ಮುಚ್ಚಿಕೊಂಡಿದೆ.

ವಾಹನ ಸವಾರರು, ಪಾದಚಾರಿಗಳು ಒಂದು ಭಾಗದಲ್ಲಿ ಮಾತ್ರ ತೆರಳಲು ಸಾಧ್ಯವಾಗುತ್ತಿದೆ. ಒಂದು ವಾಹನ ಬಂದಾಗ ಕಾದು ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗ ಈ ಅಂಡರ್‌ಬ್ರಿಜ್‌ ಅಕ್ಷರಶಃ ಕೆರೆಯಂತಾಗುತ್ತದೆ.

ಈ ಸಂಬಂಧ ಹಲವಾರು ಬಾರಿ ನಗರಸಭೆ, ಇತರ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಕೀಲುಕೋಟೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಸಮಸ್ಯೆಗೆ ನಗರಸಭೆ ಸ್ಪಂದಿಸುತ್ತಿಲ್ಲ. ಹಲವು ದಿನಗಳಿಂದ ಅಂಡರ್‌ಪಾಸ್‌ನ ಒಂದು ಬದಿ ರಸ್ತೆ ಮುಚ್ಚಿ ಹೋದರೂ ತನಗೇನೂ ಗೊತ್ತೆ ಇಲ್ಲದಂತೆ ಅಧಿಕಾರಿಗಳು ಸಿಬ್ಬಂದಿ ನಿದ್ರಿಸುತ್ತಿದ್ದಾರೆ.
ವಿನಯಗೌಡ, ಕೀಲುಕೋಟೆ ನಿವಾಸಿ

ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ. ಕೆಲವರು ‘ಎಕ್ಸ್‌’ ವೇದಿಕೆಯಲ್ಲಿ (ಹಿಂದಿನ ಟ್ವಿಟರ್) ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಅವರಿಗೂ ಟ್ಯಾಗ್‌ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಕೋಲಾರ ನಗರಸಭೆಯ ಆಯುಕ್ತ ಶಿವಾನಂದ ಅವರಾಗಲಿ, ಆರೋಗ್ಯ ನಿರೀಕ್ಷಕರಾಗಲಿ ಕರೆಯನ್ನೇ ಸ್ವೀಕರಿಸುವುದಿಲ್ಲ. ನಗರದ ಜನತೆ ಸಮಸ್ಯೆ ಹೊತ್ತು ನಗರಸಭೆ ಕಚೇರಿಗೆ ಹೋದರೂ ಕೇಳುವವರು ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಈಚೆಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಹಲವಾರು ಬಾರಿ ನಗರ ಪ್ರದಕ್ಷಿಣೆ ಮಾಡಿ ಸ್ವಚ್ಛತೆಗೆ ಸೂಚನೆ ನೀಡಿದ್ದಾರೆ. ಸ್ವತಃ ಆಯುಕ್ತರನ್ನೇ ಕರೆದುಕೊಂಡು ಸಮಸ್ಯೆಯ ದರ್ಶನ ಮಾಡಿಸಿದ್ದಾರೆ. ಆದರೂ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಲೆಕೆಡಿಸಿಕೊಂಡಿಲ್ಲ.

‘ಅಧಿಕಾರಿಗಳು ಜಿಲ್ಲಾಧಿಕಾರಿಯ ಮಾತೇ ಕೇಳಲ್ಲ. ಇನ್ನು ನಮ್ಮ ದೂರು ಯಾವ ಲೆಕ್ಕ’ ಎಂದು ನಾಗರಿಕರು ಕಿಡಿಕಾರುತ್ತಿದ್ದಾರೆ.

ನಗರದ ವಿವಿಧ ಬಡಾವಣೆ, ರಸ್ತೆಗಳಲ್ಲಿ ಚೇಂಬರ್‌ ಹಾಗೂ ಒಳಚರಂಡಿ ಉಕ್ಕಿ ರಸ್ತೆಗೆ ಹರಿಯುತ್ತಿರುವ ಬಗ್ಗೆ ಜನರು ದೂರು ನೀಡಿದರೂ ವಾರ, ತಿಂಗಳುಗಟ್ಟಲೆ ಸಮಸ್ಯೆ ಬಗೆಹರಿಯುತ್ತಿಲ್ಲ.

‘ಅಧಿಕಾರಿಗಳು ಸಾರ್ವಜನಿಕರ ಮೊಬೈಲ್ ಕರೆ ಸ್ವೀಕರಿಸುವುದಿಲ್ಲ. ಈ ಕೂಡಲೇ ನಗರಸಭೆಯ ಎಲ್ಲಾ ವಾರ್ಡ್‍ಗಳಲ್ಲಿ ಕಸದ ನಿರ್ವಹಣೆ, ಯುಜಿಡಿ ಸಮಸ್ಯೆಗಳನ್ನು ಬಗೆಹರಿಸಬೇಕು‌’ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಹುದ್ದೆ ಭರ್ತಿಗೆ ಆಗ್ರಹ

ಕೋಲಾರ ನಗರಸಭೆಗೆ 418 ವಿವಿಧ ಹುದ್ದೆಗಳು ಮಂಜೂರಾತಿ ಆಗಿದ್ದು 282 ಹುದ್ದೆಗಳು ಖಾಲಿ ಬಿದ್ದಿವೆ. 136 ಹುದ್ದೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಉಳಿದ ಹುದ್ದೆಗಳ ಭರ್ತಿಗೆ ಆಗ್ರಹ ವ್ಯಕ್ತವಾಗಿದೆ. ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ಕೆ.ಎನ್.ರವೀಂದ್ರನಾಥ್ ಅವರು ಈಚೆಗೆ ಜಿಲ್ಲಾಧಿಕಾರಿ ಮುಖಾಂತರ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಸಿಬ್ಬಂದಿ ಕೊರತೆಯಿಂದ ರಸ್ತೆ ದೀಪಗಳು ಒಳಚರಂಡಿ ವ್ಯವಸ್ಥೆ ಕುಡಿಯುವ ಮತ್ತು ದಿನಬಳಕೆಯ ನೀರಿನ ವ್ಯವಸ್ಥೆ ಹಾಗೂ ಬಡಾವಣೆಗಳಲ್ಲಿ ಕಸ ವಿಲೇವಾರಿ ಸರಿಯಾಗಿ ನಡೆಯದೆ ನಿವಾಸಿಗಳು ಪರಿತಪ್ಪಿಸುವಂತೆ ಆಗಿದೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ಅವ್ಯವಸ್ಥೆ ಬಗ್ಗೆ ಆಕ್ರೋಶ
ಸಾಮಾಜಿಕ ಜಾಲತಾಣದಲ್ಲೂ ಅವ್ಯವಸ್ಥೆ ಬಗ್ಗೆ ಆಕ್ರೋಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT