ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಗ್ಗಿದ ಜಿ.ಪಂ ಕ್ಷೇತ್ರಗಳು: ತಗ್ಗಿದ ತಾ.ಪಂ ಕ್ಷೇತ್ರಗಳು

ಚುನಾವಣೆಗೆ ಸಿದ್ಧತೆ: ಕ್ಷೇತ್ರ ಪುನರ್‌ ವಿಂಗಡಣೆಗೆ ರಾಜ್ಯ ಚುನಾವಣಾ ಆಯೋಗದ ಸೂಚನೆ
Last Updated 13 ಫೆಬ್ರುವರಿ 2021, 13:42 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಕ್ಷೇತ್ರಗಳ ಪುನರ್‌ ವಿಂಗಡಣೆಗೆ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ.

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಅಧಿಕಾರಾವಧಿ ಮುಕ್ತಾಯ ಹಂತಕ್ಕೆ ಬಂದಿದ್ದು, ಚುನಾವಣಾ ಆಯೋಗವು ಗ್ರಾಮ ಮಟ್ಟಕ್ಕೆ ಆಡಳಿತ ತಲುಪಿಸುವ ಉದ್ದೇಶದಿಂದ ಕ್ಷೇತ್ರಗಳ ಪುನರ್‌ ವಿಂಗಡಣೆಗೆ ಸೂಚನೆ ನೀಡಿದೆ.

2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಸದ್ಯ 30 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮತ್ತು 111 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿವೆ. ಇದೀಗ ಆಯೋಗವು ಜಿ.ಪಂ ಕ್ಷೇತ್ರಗಳ ಸಂಖ್ಯೆಯನ್ನು 33ಕ್ಕೆ ಹೆಚ್ಚಿಸುವಂತೆ ಹಾಗೂ ತಾ.ಪಂ ಕ್ಷೇತ್ರಗಳ ಸಂಖ್ಯೆಯನ್ನು 89ಕ್ಕೆ ಇಳಿಸುವಂತೆ ಸೂಚಿಸಿದೆ. ಆಯೋಗದ ಆದೇಶದಂತೆ ಹೊಸದಾಗಿ 3 ಜಿ.ಪಂ ಕ್ಷೇತ್ರಗಳು ಸೃಷ್ಟಿಯಾಗಲಿವೆ ಮತ್ತು 22 ತಾ.ಪಂ ಕ್ಷೇತ್ರಗಳು ರದ್ದಾಗಲಿವೆ.

ಜನಸಂಖ್ಯೆ, ಕ್ಷೇತ್ರ ಪುನರ್ ವಿಂಗಡಣೆ ನಕ್ಷೆ ಹಾಗೂ ಕ್ಷೇತ್ರಗಳ ಸಮಗ್ರ ಮಾಹಿತಿಯೊಂದಿಗೆ ಫೆ.22ರಂದು ಆಯಾ ಚುನಾವಣಾ ತಹಶೀಲ್ದಾರ್‌ಗಳು ಅಥವಾ ಸಿಬ್ಬಂದಿ ಖುದ್ದು ಹಾಜರಾಗಿ ಆಯೋಗಕ್ಕೆ ವರದಿ ಸಲ್ಲಿಸಬೇಕಿದೆ.

ಕೋಲಾರ ತಾಲ್ಲೂಕಿನಲ್ಲಿ ಹಿಂದಿನಂತೆಯೇ 7, ಮುಳಬಾಗಿಲು ತಾಲ್ಲೂಕಿನಲ್ಲಿ 6 ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲಿ 5 ಜಿ.ಪಂ ಕ್ಷೇತ್ರಗಳು ಮುಂದುವರಿಯಲಿವೆ. ಮಾಲೂರು ತಾಲ್ಲೂಕು ವ್ಯಾಪ್ತಿಯಲ್ಲಿ ಹೊಸದಾಗಿ 1 ಜಿ.ಪಂ ಕ್ಷೇತ್ರ ರಚನೆಯಾಗಲಿದ್ದು, ಒಟ್ಟಾರೆ ಕ್ಷೇತ್ರಗಳ ಸಂಖ್ಯೆ 6ಕ್ಕೆ ಏರಿಕೆಯಾಗಲಿದೆ.

ಕೆಜಿಎಫ್‌ ಈ ಹಿಂದೆ ಬಂಗಾರಪೇಟೆ ತಾಲ್ಲೂಕಿನ ವ್ಯಾಪ್ತಿಯಲ್ಲೇ ಇತ್ತು. ಆಗ ಬಂಗಾರಪೇಟೆ ತಾಲ್ಲೂಕಿನಲ್ಲಿ 7 ಜಿ.ಪಂ ಕ್ಷೇತ್ರಗಳಿದ್ದವು. 2018ರಲ್ಲಿ ಕೆಜಿಎಫ್‌ ಅನ್ನು ಬಂಗಾರಪೇಟೆ ತಾಲ್ಲೂಕಿನಿಂದ ಪ್ರತ್ಯೇಕಿಸಿ ಹೊಸ ತಾಲ್ಲೂಕಾಗಿ ಘೋಷಿಸಲಾಯಿತು. ಇದೀಗ ಕೆಜಿಎಫ್‌ ತಾಲ್ಲೂಕು ವ್ಯಾಪ್ತಿಯಲ್ಲಿ 4 ಮತ್ತು ಬಂಗಾರಪೇಟೆ ತಾಲ್ಲೂಕಿನಲ್ಲಿ 5 ಜಿ.ಪಂ ಕ್ಷೇತ್ರಗಳನ್ನು ರಚಿಸುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಇದರೊಂದಿಗೆ ಅವಿಭಜಿತ ಬಂಗಾರಪೇಟೆ ತಾಲ್ಲೂಕಿನಲ್ಲಿ ಹೊಸದಾಗಿ 2 ಜಿ.ಪಂ ಕ್ಷೇತ್ರ ಸೃಷ್ಟಿಯಾಗಲಿವೆ.

22 ತಾ.ಪಂ ಕ್ಷೇತ್ರ ರದ್ದು: ಜಿಲ್ಲೆಯಲ್ಲಿ ಒಟ್ಟಾರೆ 6 ತಾಲ್ಲೂಕು ಪಂಚಾಯಿತಿಗಳಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ 22 ಕ್ಷೇತ್ರಗಳು ರದ್ದಾಗಲಿವೆ. ಕೋಲಾರ ತಾಲ್ಲೂಕಿನಲ್ಲಿ ಸದ್ಯ 25 ತಾ.ಪಂ ಕ್ಷೇತ್ರಗಳಿವೆ. ಪುನರ್‌ ವಿಂಗಡಣೆ ಬಳಿಕ ಕ್ಷೇತ್ರಗಳ ಸಂಖ್ಯೆ 19ಕ್ಕೆ ಇಳಿಯಲಿದ್ದು, 6 ಕ್ಷೇತ್ರಗಳು ರದ್ದಾಗಲಿವೆ. ಮಾಲೂರು ತಾಲ್ಲೂಕಿನಲ್ಲಿ ತಾ.ಪಂ ಕ್ಷೇತ್ರಗಳ ಸಂಖ್ಯೆ 20ರಿಂದ 16ಕ್ಕೆ ಇಳಿಯಲಿದ್ದು, 4 ಕ್ಷೇತ್ರಗಳು ರದ್ದಾಗುತ್ತವೆ.

ಅವಿಭಜಿತ ಬಂಗಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ತಾ.ಪಂ ಕ್ಷೇತ್ರಗಳ ಸಂಖ್ಯೆಯನ್ನು 27ರಿಂದ 23ಕ್ಕೆ ಇಳಿಸಲಾಗುತ್ತಿದ್ದು, 4 ಕ್ಷೇತ್ರ ರದ್ದು ಮಾಡಲಾಗುತ್ತದೆ. ಮುಳಬಾಗಿಲು ತಾಲ್ಲೂಕಿನಲ್ಲಿ ತಾ.ಪಂ ಕ್ಷೇತ್ರಗಳು 21ರಿಂದ 17ಕ್ಕೆ ಇಳಿಕೆಯಾಗಲಿದ್ದು, 4 ಕ್ಷೇತ್ರಗಳು ರದ್ದಾಗಲಿವೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ 18 ಇದ್ದ ತಾ.ಪಂ ಕ್ಷೇತ್ರಗಳ ಸಂಖ್ಯೆ 14ಕ್ಕೆ ಇಳಿಯುತ್ತಿದ್ದು, 4 ಕ್ಷೇತ್ರಗಳನ್ನು ರದ್ದುಪಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT