ಅಂಚೆ ಕಚೇರಿ ಎದುರು ಪ್ರತಿಭಟನೆ

7
ದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟ ಪ್ರಕರಣ

ಅಂಚೆ ಕಚೇರಿ ಎದುರು ಪ್ರತಿಭಟನೆ

Published:
Updated:
Deccan Herald

ಕೋಲಾರ: ದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟು ಅಂಬೇಡ್ಕರ್‌ ವಿರುದ್ಧ ಘೋಷಣೆ ಕೂಗಿದ ಪ್ರಕರಣ ಖಂಡಿಸಿ ಬಹುಜನ ಸಂಘರ್ಷ ಸೇನೆ ಸದಸ್ಯರು ಇಲ್ಲಿನ ಅಂಚೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು.

‘ದೇಶದಲ್ಲಿ ಶಾಂತಿ ಕದಡುವ ದುರುದ್ದೇಶದಿಂದ ಕೇಂದ್ರ ಸರ್ಕಾರವೇ ಯೂತ್‌ ಫಾರ್‌ ಇಕ್ವಾಲಿಟಿ ಸಂಘಟನೆ ಸದಸ್ಯರನ್ನು ಎತ್ತಿಕಟ್ಟಿ ಈ ದುಷ್ಕೃತ್ಯ ಮಾಡಿಸಿದೆ. ಅಲ್ಲದೇ, ಪೊಲೀಸರ ಮೇಲೆ ಒತ್ತಡ ತಂದು ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ದಲಿತರು ಮತ್ತು ಶೋಷಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸರ್ಕಾರದ ಭಾಗವಾಗಿರುವ ಸಚಿವರು ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತರಿಗೆ ರಕ್ಷಣೆ ಇಲ್ಲವಾಗಿದೆ’ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್‌.ಅಂಬರೀಷ್‌ ಆರೋಪಿಸಿದರು.

‘ಅಂಬೇಡ್ಕರ್ ರಚಿಸಿದ ಸಂವಿಧಾನದ ತಳಹದಿಯ ಮೇಲೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಸಂವಿಧಾನದ ಅಡಿಯಲ್ಲೇ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್‌, ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಭಯದ ವಾತಾವರಣ: ‘ಕೇಂದ್ರವೇ ಯೋಜಿತ ರೀತಿಯಲ್ಲಿ ಸಂಚು ರೂಪಿಸಿ ಸಂವಿಧಾನದ ಪ್ರತಿಗೆ ಬೆಂಕಿ ಹಚ್ಚಿಸುವ ಕೆಲಸ ಮಾಡಿಸಿದೆ. ಆ ಮೂಲಕ ದಲಿತ ಸಮುದಾಯವನ್ನು ಅವಮಾನಿಸಿದೆ. ರಾಜಕೀಯ ಲಾಭಕ್ಕೆ ದಲಿತರ ಹಕ್ಕುಗಳನ್ನು ಹತ್ತಿಕ್ಕುವ ಹುನ್ನಾರ ಮಾಡಿದೆ. ದಲಿತರು ಜೀವ ಭಯದಲ್ಲಿ ಬದುಕುವ ವಾತಾವರಣ ಸೃಷ್ಟಿ ಮಾಡಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಸಂವಿಧಾನದ ಪ್ರತಿ ಸುಟ್ಟ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಎಲ್ಲಾ ರಾಜ್ಯಗಳಲ್ಲಿ ದಲಿತರಿಗೆ ರಕ್ಷಣೆ ನೀಡಬೇಕು. ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘಟನೆ ಸದಸ್ಯರಾದ ವಿ.ನಾಗೇಶ್, ಲಕ್ಷೀಪತಿ, ಭರತ್, ವಾಸು, ವೆಂಕಟಮ್ಮ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ವೆಂಕಟೇಶ್ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !