ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್ಸಿ–ಎಸ್ಟಿ ಕಾಯ್ದೆ ಸಮರ್ಪಕ ಜಾರಿಗೆ ಮನವಿ

ಬೇಡಿಕೆ ಈಡೇರಿಕೆಗೆ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರ ಒತ್ತಾಯ
Last Updated 9 ನವೆಂಬರ್ 2021, 16:02 IST
ಅಕ್ಷರ ಗಾತ್ರ

ಕೋಲಾರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಯ್ದೆಗಳ ಸಮರ್ಪಕವಾಗಿ ಜಾರಿಗೊಳಿಸಬೇಕು ಮತ್ತು ದಲಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಇಲ್ಲಿ ಮಂಗಳವಾರ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಸದಸ್ಯರಿಗೆ ಮನವಿ ಸಲ್ಲಿಸಿದರು.

‘ಸರ್ಕಾರಗಳು ದೇಶದಲ್ಲಿ ದಲಿತರ ಉದ್ಧಾರಕ್ಕಾಗಿ ಹಲವು ಕಾನೂನು ರೂಪಿಸಿವೆ. ಆದರೆ, ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಭೂಪರಭಾರೆ ನಿಷೇಧ ಕಾಯ್ದೆ ವಿರುದ್ಧವಾಗಿ ಕೆಲ ತೀರ್ಪು ಬಂದಿವೆ. ಈ ತೀರ್ಪುಗಳಿಂದ ದಲಿತರು ಭೂಮಿ ಕಳೆದುಕೊಳ್ಳುವ ಸಾಧ್ಯತೆಯಿದ್ದು, ಸರ್ಕಾರ ಸುಗ್ರೀವಾಜ್ಞೆ ಮೂಲಕ ದಲಿತರ ಹಕ್ಕು ರಕ್ಷಣೆ ಮಾಡಬೇಕು’ ಎಂದು ಸದಸ್ಯರು ಕೋರಿದರು.

‘ದಲಿತರಿಗೆ ಇನಾಂತಿ ಭೂಮಿ ಮಂಜೂರು ಮಾಡುವಾಗ ಕೆಲ ತಾಂತ್ರಿಕ ಕಾರಣಕ್ಕೆ ಬಿಟ್ಟು ಹೋಗಿದ್ದು, ಜಮೀನು ಸಾಗುವಳಿ ಮಾಡುತ್ತಿದ್ದ ದಲಿತರು ಮಾಲೀಕತ್ವ ಹೊಂದಿಲ್ಲ. ಹೀಗಾಗಿ ಮತ್ತೊಮ್ಮೆ ಭೂಮಿ ಮಂಜೂರಾತಿಗೆ ಅವಕಾಶ ನೀಡಲು ಸರ್ಕಾರ ಸುತ್ತೋಲೆ ಹೊರಡಿಸಬೇಕು’ ಎಂದು ಸಮಿತಿಯ ರಾಜ್ಯ ಘಟಕದ ಸಂಘಟನಾ ಸಂಚಾಲಕ ರಮೇಶ್ ಮನವಿ ಮಾಡಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಪ್ರಬಲವಾಗಿದ್ದರೂ ಸರ್ಕಾರಿ ಅಭಿಯೋಜಕರ ಹೇಳಿದಂತೆ ಸಾಕ್ಷಿದಾರರ ಕೊರತೆಯಿಂದ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಗೊಂಡಿವೆ. ಸರ್ಕಾರಿ ಅಭಿಯೋಜಕರು ಮತ್ತು ಸಾಕ್ಷಿದಾರರ ನಡುವಿನ ಸಮನ್ವಯದ ಕೊರತೆಯಿಂದಾಗಿ ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಸರ್ಕಾರಿ ಆಯೋಜಕರಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಹೇಳಿದರು.

ವಿದ್ಯಾರ್ಥಿವೇತನ: ‘ನಗರ ಮತ್ತು ಗ್ರಾಮಾಂತರ ಪ್ರದೇಶದ ವಸತಿಹೀನರಿಗೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಡುವಂತೆ ಆದೇಶ ನೀಡಬೇಕು. ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಸರ್ಕಾರಿ ಖಾಸಗಿ ಶಾಲೆಗಳಿಗೆ ನೀಡುತ್ತಿರುವ ಉತ್ತೇಜನ ಹಣ ನಿಲ್ಲಿಸಿರುವುದು ಸರಿಯಲ್ಲ. ದಲಿತ ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ವಿದ್ಯಾರ್ಥಿವೇತನ ಮುಂದುವರಿಸಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

‘ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಐಎಸ್‌ಬಿ ಯೋಜನೆ ಮೊತ್ತವನ್ನು ₹ 1 ಲಕ್ಷಕ್ಕೆ ಮಿತಿಗೊಳಿಸಿರುವುದು ಖಂಡನೀಯ. ಶೇ 50ರಷ್ಟು ಮೂಲ ಮಂಜೂರಾತಿಗೆ ಅನುಗುಣವಾಗಿ ಸಹಾಯಧನ ನೀಡಬೇಕು. ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಎಸ್ಸಿ–ಎಸ್ಟಿ ಹಣ ದುರುಪಯೋಗ ಆಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಮುನಿಯಪ್ಪ, ಖಜಾಂಚಿ ಗೋವಿಂದರಾಜು, ಸಂಘಟನಾ ಸಂಚಾಲಕರಾದ ಕೇಶವ, ವಿಜಿ, ವೆಂಕಟೇಶಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT