ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ | ನೇರಳೆ ಹಣ್ಣಿನ ದರ್ಬಾರ್: ಕೆ.ಜಿ ₹100 ರಿಂದ ₹150ಕ್ಕೆ ಮಾರಾಟ

ಮಂಜುನಾಥ ಎಸ್
Published 21 ಜೂನ್ 2024, 7:10 IST
Last Updated 21 ಜೂನ್ 2024, 7:10 IST
ಅಕ್ಷರ ಗಾತ್ರ

ಬಂಗಾರಪೇಟೆ: ಪಟ್ಟಣಕ್ಕೆ ನೇರಳೆ ಹಣ್ಣು ಪ್ರವೇಶಿಸಿದ್ದು, ಕೆಜಿ ₹100 ರಿಂದ ₹150ಕ್ಕೆ ಮಾರಾಟವಾಗುತ್ತಿದೆ.

ಸಾಮಾನ್ಯವಾಗಿ ಜೂನ್‌ನಲ್ಲಿ ನೇರಳೆಹಣ್ಣು ಹೆಚ್ಚು ಮಾರುಕಟ್ಟೆಯಲ್ಲಿ ಸಿಗುತ್ತಿದ್ದು, ಬಹಳಷ್ಟು ತಮಿಳುನಾಡಿನಿಂದ ಮಾರುಕಟ್ಟೆಗೆ ಸರಬರಾಜು ಆಗುತ್ತಿದೆ. ಜತೆಗೆ ತಾಲ್ಲೂಕಿನಲ್ಲಿ ಇತ್ತೀಚಿಗೆ ಮಿಶ್ರ ಬೇಸಾಯವಾಗಿ ನೇರಳೆಹಣ್ಣನ್ನು ಬೆಳೆಯಲು ಪ್ರಾರಂಭಿಸಿದ್ದಾರೆ.

ಬೀದಿಬದಿಯ ವ್ಯಾಪಾರಿಗಳು ತಳ್ಳುವ ಗಾಡಿಯಲ್ಲಿ ಸುರಿದು 250 ಗ್ರಾಂ ₹30 ಎಂದು ಬೋರ್ಡ್‌ ಹಾಕಿರುವುದು ಸಾಮಾನ್ಯವಾಗಿದೆ. ಈ ಹಣ್ಣು ರುಚಿಕರವಾಗಿದ್ದು, ಆರೋಗ್ಯಕ್ಕೂ ಉತ್ತಮವಾಗಿದ್ದು ಇದಕ್ಕೆ ಬೇಡಿಕೆ ಇದೆ.

ಈ ಹಣ್ಣನ್ನು ಎಲ್ಲರೂ ಬೆಳೆಯುವುದಿಲ್ಲ. ಕೇವಲ ಬದು ಅಥವಾ ರಸ್ತೆ ಬದಿಯಲ್ಲಿ ಇದನ್ನು ಬೆಳೆಯುತ್ತಾರೆ.  ಹಾಗಾಗಿ ಎಲ್ಲರಿಗೂ ಕೈಗೆ ಸಿಗುವುದು ಕಷ್ಟವಾಗುತ್ತದೆ.

ಈ ಬೆಳೆಯನ್ನು ಒಂದು ಬೆಳೆಯಾಗಿ ಬೆಳೆದರೆ ಉತ್ತಮ ಲಾಭ ಗಳಿಸಬಹುದು. ಆಯುರ್ವೇದದಲ್ಲಿ ನೇರಳೆ ರಸಕ್ಕೆ ಉತ್ತಮ ಬೆಲೆ ಇದೆ. ಜತೆಗೆ ಅತಿಸಾರ ಭೇದಿ ನಿಲ್ಲಿಸುವ ಔಷಧವೂ ಆಗಿದೆ. ಇದರ ತಿರಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೂ ಬಳಸಲಾಗುತ್ತದೆ. ಇದರ ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುವುದರಿಂದ ಆಯುರ್ವೇದ, ಯುನಾನಿ ಔಷಧ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ ಎಂಬುದು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆ ವೈದ್ಯ ಶೇಷಾದ್ರಿ ಅಯ್ಯರ್ ಅವರ ಮಾತಾಗಿದೆ.

ನೇರಳೆ ಹಣ್ಣಿನ ಬೆಳೆ ಬೆಳೆಯುವುದು ಹೇಗೆ: ದೇಸಿ ತಳಿ ನಾಟಿ ಮಾಡಿದರೆ ಇಳುವರಿ ಪಡೆಯಲು ಕನಿಷ್ಠ 8 ರಿಂದ 10 ವರ್ಷ ಕಾಯಬೇಕು. ಕಸಿ ಗಿಡ ನೆಟ್ಟರೆ ಕೇವಲ ಮೂರು ವರ್ಷದಲ್ಲಿ ಹಣ್ಣುಗಳು ಸಿಗುತ್ತವೆ. ಮಾರ್ಚ್, ಏಪ್ರಿಲ್‌ನಲ್ಲಿ ಮರ ಹೂ ಬಿಡಲಾರಂಭಿಸುತ್ತದೆ. ನಂತರ, ಜೂನ್ ತಿಂಗಳ ಹೊತ್ತಿಗೆ ಹಣ್ಣಾಗುತ್ತವೆ. ಒಂದು ಮರ ಸುಮಾರು 2 ಕ್ವಿಂಟಲ್‌ನಷ್ಟು ಹಣ್ಣು ಕೊಡುತ್ತದೆ.

ರೈತರು ತಮ್ಮ ಜಮೀನುಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆದರೆ ಭವಿಷ್ಯದಲ್ಲಿ ಉತ್ತಮ ಆದಾಯ ಸಿಗಲಿದೆ 
ಚಂದ್ರಾರೆಡ್ಡಿ ತೋಪ್ಪನಹಳ್ಳಿ ರೈತ
ಪ್ರತಿದಿನ ಐವತ್ತು ಕೆಜಿ ನೇರಳೆ ಹಣ್ಣನ್ನು ತಮಿಳುನಾಡಿನಿಂದ ತಂದು ಪಟ್ಟಣದಲ್ಲಿ ಮಾರಾಟ ಮಾಡಲಾಗುತ್ತಿದೆ ಉತ್ತಮ ಬೇಡಿಕೆ ಇದೆ.
ಇದಾಯತ್ ಬೀದಿಬದಿ ವ್ಯಾಪಾರಿ ಬಂಗಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT