ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಟಾನಾಗೆ ಶ್ರಾವಣ ಸಂಭ್ರಮ

Last Updated 1 ಸೆಪ್ಟೆಂಬರ್ 2018, 16:44 IST
ಅಕ್ಷರ ಗಾತ್ರ

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಲಂಟಾನ ಪೊದೆಗಳು, ಬಣ್ಣ ಬಣ್ಣದ ಹೂಗಳನ್ನು ಮುಡಿಗೇರಿಸಿಕೊಂಡು ಸಂಭ್ರಮಿಸುತ್ತಿವೆ. ಕಡು ಹಸಿರು ಬಣ್ಣದ ಎಲೆಯ ನಡುವೆ ಅರಳಿದ ಹೂಗೊಂಚಲುಗಳ ಸೌಂದರ್ಯವನ್ನು ನೋಡಿಯೇ ಸವಿಯಬೇಕು.

ಸ್ಥಳೀಯವಾಗಿ ಬಟಾಣಿ ಗಿಡ, ಬೇಲಿ ಗಿಡ ಎಂಬ ಹೆಸರಿನಿಂದ ಕರೆಯಲ್ಪಡುವಲಂಟಾನ ಹೂವುಗಳು ಶ್ರಾವಣ ಮಾಸದಲ್ಲಿ ಅರಳಿ ಗಣಪನ ಹಬ್ಬಕ್ಕೂ ಮುಂದುವರಿಯುತ್ತದೆ.

ಇವು ಹಿಂದಿನ ಕಾಲದಲ್ಲಿ ಕಾಡಿನ ತುಂಬಾ ಬಿರಿದ ಬಹುವರ್ಣದಲ್ಲಿ ನೋಡುಗರಿಗೆ ಹೂದೇರಿನಂತೆ ಕಾಣುತ್ತಿತ್ತು. ಮರ ಹತ್ತಿ ನೋಡಿದರೆ ಕಾಡಿನ ಉದ್ದಗಲಕ್ಕೂ ಹೂವಿನ ಹಾಸಿಗೆಯಂತೆ ಗೋಚರಿಸುತ್ತಿತ್ತು.

ಕಾಲಾಂತರದಲ್ಲಿ ಕಾಡುಗಳು ಮಾಯವಾಗಿದ್ದರೂ ತಾಲ್ಲೂಕಿನ ಉತ್ತರ ಭಾಗದ ಗುಡ್ಡಗಾಡು ಹಾಗೂ ದಕ್ಷಿಣ ಭಾಗದ ಮಾವಿನ ತೋಟದ ಬೇಲಿ ಹಾಗೂ ರಸ್ತೆ ಬದಿಗಳಲ್ಲಿ ನೆಲೆ ಕಂಡುಕೊಂಡಿವೆ.

ಲಂಟಾನ ಹೂವೆಂದರೆ ಜೇನ್ನೊಣಗಳಿಗೆ ಹೆಚ್ಚು ಪ್ರಿಯ. ಪುಟ್ಟ ಹಕ್ಕಿಗಳು ಸಹ ಹೂವಿನ ಮಧುಪಾತ್ರೆಗೆ ಕೊಕ್ಕು ಹಾಕಿ ಮಧು ಹೀರುತ್ತವೆ. ಪಕ್ಷಿಗಳು ಮಾತ್ರವಲ್ಲದೆ ಹೂವಿನ ಮಧುವಿನ ರುಚಿ ಗೊತ್ತಿರುವ ಮಕ್ಕಳು ಹೂವನ್ನು ಕಿತ್ತು ಹಿಂಭಾಗವನ್ನು ತುಟಿಗಳ ನಡುವೆ ಸಿಕ್ಕಿಸಿಕೊಂಡು ಹೂಗೊಳವೆಯಲ್ಲಿನ ಸಿಹಿಯಾದ ರಸವನ್ನು ಎಳೆದು ಸವಿಯುವುದುಂಟು.

ಇನ್ನೂ ಬೇಲಿ ಕಾಯಿ ಎಂದರೆ ಮೇಕೆಗಳಿಗೆ ಪಂಚಪ್ರಾಣ. ಬಲಿತ ಕಾಯಿ ಸಿಕ್ಕಿದರೆ ಮೇಕೆಗಳು ಹೊಟ್ಟೆ ಬಿರಿಯುವಂತೆ ತಿನ್ನುತ್ತವೆ. ಕಪ್ಪಗೆ ಹಣ್ಣಾದ ಮೇಲೆ ಕಾಗೆ ಮತ್ತಿತರ ಪಕ್ಷಿಗಳು, ಅಳಿಲು, ಕೋತಿ, ನಾಯಿ ಮುಂತಾದ ಪ್ರಾಣಿಗಳು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ.

ಲಂಟಾನ ಹೂವು ಹಾಗೂ ಕಾಯಿಗೆ ಮಾತ್ರ ಹೆಸರಾಗಿಲ್ಲ. ಕೆಲವರು ಲಂಟಾನ ಬರೆಗಳನ್ನು ಕತ್ತರಿಸಿ ಮಕ್ಕರಿ ಹಾಗೂ ಬುಟ್ಟಿ ಹೆಣೆದು ಮಾರಿ ಜೀವನ ಮಾಡುತ್ತಾರೆ. ಕೃಷಿ ಕ್ಷೇತ್ರದಲ್ಲಿ ಈ ಮಕ್ಕರಿಗಳಿಗೆ ಅಧಿಕ ಬೇಡಿಕೆ ಇದೆ.

ಕೋಳಿ ಮರಿ ಸಾಕಲು ದೊಡ್ಡ ಮಕ್ಕರಿಗಳನ್ನು ಹೆಣೆಯಲಾಗುತ್ತಿದೆ. ಬಯಲು ಸೀಮೆಯಲ್ಲಿ ಬಿದಿರು ಸಿಗುವುದು ಅಪರೂಪ. ಹಾಗಾಗಿ ಲಂಟಾನ ಬರೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಹಿಂದಿನಿಂದಲೂ ಲಂಟಾನ ಉರುವಲಾಗಿ ಬಳಸಲ್ಪಡುತ್ತಿದೆ. ಬೇರೆ ಸೌದೆಗೆ ಹೋಲಿಸಿದರೆ ಲಂಟಾನ ಬೇಗ ಒಣಗುತ್ತದೆ. ಅರೆಬರೆ ಒಣಗಿದರೂ ಸಾಕು ಚೆನ್ನಾಗಿ ಉರಿಯುತ್ತದೆ. ಈ ಗುಣ ಉಳಿವಿಗೆ ಮಾರಕವಾಗಿ ಪರಿಣಮಿಸಿದೆ. ಸೌದೆಗೆಂದು ಹೋದವರು ಮೊದಲು ಬಲಿ ತೆಗೆದುಕೊಳ್ಳುವುದು ಲಂಟಾನ ಪೊದೆಯನ್ನೆ.

ಕೆಲವರು ಬೇರು ಸಹಿತಿ ಕಿತ್ತು ಉರುವಲಿಗೆ ಬಳಸುವುದುಂಟು. ಇದರಿಂದಾಗಿ ಲಂಟಾನ ಪೊದೆಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಆದರೆ ಈಗ ಗ್ರಾಮೀಣ ಪ್ರದೇಶದ ಕುಟುಂಬಗಳೂ ಸಹ ಅಡುಗೆ ಅನಿಲ ಬಳಸುತ್ತಿವೆ. ಉರುವಲಿಗಾಗಿ ಲಂಟಾನ ಗಿಡ ಕಡಿಯುವುದು ಕಡಿಮೆಯಾಗಿದೆ. ಅಡುಗೆ ಅನಿಲದ ಕೃಪೆಯಿಂದ ಉಳಿದುಕೊಂಡ ಲಂಟಾನ, ಬಣ್ಣ ಬಣ್ಣದ ಹೂಗಳ ಮೂಲಕ ತನ್ನ ಇರುವನ್ನು ಸಾರುತ್ತಿದೆ.

ಮೂಲಿಕಾ ಸಸ್ಯವೂ ಹೌದು

ಸಣ್ಣ ಮುಳ್ಳುಗಳನ್ನು ಹೊಂದಿದ ಪೊದೆ ಆಗಿದ್ದು, ವೇಗವಾಗಿ ಬೆಳೆಯುವ ಗುಣ ಹೊಂದಿದೆ. ಮಳೆ ಹಿನ್ನಡೆಯ ನಡುವೆಯೂ ಬದುಕುವ ಸಾಮರ್ಥ್ಯ ಇದಕ್ಕಿದೆ. ಇದು ಮೂಲಿಕಾ ಸಸ್ಯವೂ ಹೌದು. ಗ್ರಾಮೀಣ ಪ್ರದೇಶದ ಜನರು ಸಣ್ಣಪುಟ್ಟ ಗಾಯಗಳಿಗೆ ಲಂಟಾನ ಎಲೆಯ ರಸ ತೆಗೆದು ಹಚ್ಚುವುದು ಸಾಮಾನ್ಯ.

ಹಳೆ ತಲೆಮಾರಿನ ಗ್ರಾಮೀಣರು, ಹೊಲ ಕೊಯಿಲು ಮಾಡುವಾಗ ಸೊಪ್ಪು ಸದೆ ಕೊಯ್ಯುವಾಗ ಆಕಸ್ಮಿಕವಾಗಿ ಬೆರಳು ಅಥವಾ ಕೈ ಕೊಯ್ದುಕೊಂಡರೆ ನೇರವಾಗಿ ಲಂಟಾನ ಪೊದೆಯ ಬಳಿಹೋಗಿ ಸೊಪ್ಪು ಕಿತ್ತು ಗಾಯದ ಮೇಲೆ ರಸ ಹಿಂಡುತ್ತಿದ್ದರು. ಗಾಯವೂ ಗುಣವಾಗುತ್ತಿತ್ತು.

ಇತ್ತೀಚೆಗೆ ಆರ್ಥಿಕ ಮೌಲ್ಯ ಬಂದಿದೆ

ಈ ಮಧ್ಯೆ ಲಂಟಾನ ಸಸಿಗೆ ಆರ್ಥಿಕ ಮೌಲ್ಯ ಬಂದಿದೆ. ಬೇರೆ ಬೇರೆ ಬಣ್ಣದ ಲಂಟಾನ ಕಡ್ಡಿಗಳನ್ನು ತಂದು ಪಾಟ್‌ಗಳಲ್ಲಿ ಬೆಳೆಸಿ ಅಲಂಕಾರಿಕ ಸಸ್ಯವಾಗಿ ಮಾರಲಾಗುತ್ತಿದೆ. ಕುಬ್ಜ ಲಂಟಾನ ಪೊದೆಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT