ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಸಾಮರಸ್ಯಕ್ಕೆ ಮಾದರಿ ಮಾವಿನ ಊರು

‘ಕಾವಾಲಿ ಕಾವಾಲಿ ಕನ್ನಡಂ ಕಾವಾಲಿ’ ಎನ್ನುವ ತೆಲುಗು ಮನಸ್ಸು
Last Updated 1 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಕಾಲಕ್ಕೆ ಶ್ರೀನಿವಾಸಪುರ ತಾಲ್ಲೂಕಿನ ಅನೇಕ ಗ್ರಾಮಗಳು ಆಂಧ್ರಪ್ರದೇಶಕ್ಕೆ ಸೇರಿಬಿಡುತ್ತವೆ ಎಂಬ ಆತಂಕ ಜನರಲ್ಲಿ ಮೂಡಿತ್ತು. ಇದಕ್ಕೆಂದೇ ನೇಮಿಸಿದ್ದ ಸಮಿತಿಯವರು ಈ ಪ್ರಾಂತ್ಯಕ್ಕೆ ಬಂದಾಗ, ಜನರು ತಾವು ಕರ್ನಾಟಕದಲ್ಲಿಯೇ (ಅಂದು ಮೈಸೂರು) ಇರ ಬಯಸುವುದಾಗಿ ಒತ್ತಾಯ ಪೂರ್ವಕ ಮನವಿ ಸಲ್ಲಿಸಿದ್ದನ್ನು ಹಿರಿಯರು ಇಂದೂ ನೆನೆಯುತ್ತಾರೆ.

ವಿಶೇಷವೆಂದರೆ ಹೀಗೆ ಒತ್ತಾಯಿಸಿದ್ದೂ ತೆಲುಗಿನಲ್ಲಿ! ಹಾಗೆ ಒತ್ತಾಯಿಸಿದ ಮನಸ್ಸುಗಳು ಭಾವನಾತ್ಮಕವಾಗಿ ಕನ್ನಡವಾಗಿದ್ದವು. ಆಡು ನುಡಿ ತೆಲುಗಾಗಿದ್ದರೂ, ಬದುಕು ಕನ್ನಡವಾಗಿತ್ತು. ಬೇಕೇ ಬೇಕು ಕನ್ನಡ ಬೇಕು ಎಂದು ಕೂಗಬೇಕಾದ ಸಂದರ್ಭ ಬಂದಾಗ, ‘ಕಾವಾಲಿ ಕಾವಾಲಿ ಕನ್ನಡಂ ಕಾವಾಲಿ’ ಎಂಬ ಧ್ವನಿ ಕೇಳುತ್ತಿದ್ದುದುಂಟು. ಚಿತ್ರ ನಟ ಜೂನಿಯರ್‌ ಎನ್‌ಟಿಆರ್ ಅಭಿಮಾನಿಯಾದರೂ, ಮಹೇಶ್‌ ಬಾಬು ಆರಾಧ್ಯನಾದರೂ, ನೆಲ ಜಲದ ಪ್ರಶ್ನೆ ಬಂದಾಗ ಅವರೆಲ್ಲಾ ತೆಲುಗರು, ಇವರೆಲ್ಲಾ ಕನ್ನಡಿಗರು.

ಇಲ್ಲಿನ ಬದುಕಿನ ಸಂಸ್ಕೃತಿ ಏಕಕಾಲಕ್ಕೆ ಕನ್ನಡವೂ ಹೌದು ತೆಲುಗೂ ಹೌದು. ಇದರಿಂದ ಕಳೆದುಕೊಂಡದ್ದು ಏನೂ ಇಲ್ಲ. ಎಲ್ಲವೂ ಉಳಿದುಕೊಂಡಿದೆ. ಅಂದಿನಂತೆಯೇ ಇಂದೂ ಸಹ ಭಾಷೆ ಹಾಗೂ ಬದುಕಿನ ಬೆಸುಗೆ ಮುಂದುವರೆದಿದೆ.

ಕರ್ನಾಟಕ, ಆಂಧ್ರ ಪ್ರದೇಶದ ಗಡಿ ಗ್ರಾಮಗಳ ಜನರು ಎರಡೂ ಕಡೆ ವೈವಾಹಿಕ ಸಂಬಂಧ ಬೆಳೆಸಿದ್ದಾರೆ. ಇದು ಮೊದಲಿನಿಂದಲೂ ನಡೆದು ಬಂದಿದೆ. ಇಲ್ಲಿನ ಮಕ್ಕಳಿಗೆ ಅಲ್ಲಿ ಅಜ್ಜಿ ಮನೆ ಇದ್ದರೆ, ಅಲ್ಲಿನ ಮಕ್ಕಳಿಗೆ ಇಲ್ಲಿ ಅಜ್ಜಿ ಮನೆ ಇರುತ್ತದೆ. ಆದ್ದರಿಂದಲೇ ಗಡಿ ಗ್ರಾಮಗಳ ಮಕ್ಕಳು ಏಕ ಕಾಲಕ್ಕೆ ಕನ್ನಡಿಗರೂ ಹೌದು, ತೆಲುಗರೂ ಹೌದು.

ಆಂಧ್ರಪ್ರದೇಶದ ಗಡಿ ದಾಟಿ ಬರುವ ಜಾನಪದ ಕಲಾವಿದರು ತಾಲ್ಲೂಕಿನಲ್ಲಿ ಸುತ್ತಾಡಿ, ತಮ್ಮ ಕಲಾ ಕೌಶಲ್ಯ ಪ್ರದರ್ಶಿಸಿ ಹೋಗುತ್ತಾರೆ. ಇಲ್ಲಿನ ಕಲಾವಿದರು ಗಡಿ ದಾಟಿ ಹೋಗಿ ಕಲಾಭಿಮಾನಿಗಳ ಹೃದಯ ಸೂರೆಗೊಳ್ಳುತ್ತಾರೆ. ಇಲ್ಲಿನ ಸೀತಾಫಲ ಅಲ್ಲಿನ ಮಾರುಕಟ್ಟೆಗೆ ಹೋದರೆ, ಅಲ್ಲಿನ ಅಲ್ಲಿ ನೇರಿಡಿ ಇಲ್ಲಿನ ಮಾರುಕಟ್ಟೆಗೆ ಬರುತ್ತದೆ. ಗಡಿಯ ಎರಡೂ ಕಡೆ ನಡೆಯುವ ಜಾತ್ರೆ, ಉತ್ಸವ, ಹಬ್ಬ ಹರಿದಿನಗಳಲ್ಲಿ ಎರಡೂ ಭಾಷಿಕರು ಭಾಗವಹಿಸುತ್ತಾರೆ. ಎರಡೂ ಕಡೆಯ ದನಗಾಹಿಗಳು ಒಂದೆಡೆ ಸೇರಿ ಮಧ್ಯಾಹ್ನ ತಂಗಳು ತಿನ್ನುತ್ತಾರೆ. ಸಂಜೆಯ ವೇಳೆಗೆ ತಮ್ಮ ತಮ್ಮ ಗಡಿಯೊಳಗೆ ಸೇರಿಕೊಳ್ಳುತ್ತಾರೆ.

ಸಂತೋಷವಾಗಲಿ, ಸಾವಾಗಲಿ ಸಮಾನವಾಗಿ ಹಂಚಿಕೊಳ್ಳುತ್ತಾರೆ. ಇಲ್ಲಿ ಸತ್ತ ಅವರ ವ್ಯಕ್ತಿಯ ಸಮಾಧಿಗೆ ಅಲ್ಲಿನ ಭಾಷೆಯಲ್ಲಿ ಕೆತ್ತಿದ ಕಲ್ಲು ನೆಡುತ್ತಾರೆ. ಅಲ್ಲಿ ಸತ್ತ ಇಲ್ಲಿನವ್ಯಕ್ತಿಯ ಸಮಾಧಿಗೆ ಇಲ್ಲಿನ ಭಾಷೆಯಲ್ಲಿ ಕೆತ್ತಿದ ಕಲ್ಲು ಅಳವಡಿಸುತ್ತಾರೆ. ಭಾಷಾ ದ್ವೇಷದ ಪ್ರಶ್ನೆಯೇ
ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT