ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹6.77 ಲಕ್ಷ ಬಿಲ್‌, ಅವ್ಯವಹಾರ ಶಂಕೆ!

ನಗರಸಭೆಯಿಂದ 2 ಇವಿ ಚಾರ್ಜಿಂಗ್‌ ಪಾಯಿಂಟ್‌ ಖರೀದಿ; ಮಾರುಕಟ್ಟೆ ಮೌಲ್ಯ 1 ಉಪಕರಣಕ್ಕೆ ಅಂದಾಜು ₹16,500
Published : 25 ಸೆಪ್ಟೆಂಬರ್ 2024, 7:10 IST
Last Updated : 25 ಸೆಪ್ಟೆಂಬರ್ 2024, 7:10 IST
ಫಾಲೋ ಮಾಡಿ
Comments

ಕೋಲಾರ: ಸ್ವಚ್ಛ ಭಾರತ ಮಿಷನ್‌ 1–0 ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆಗೆ ಎಲೆಕ್ಟ್ರಾನಿಕ್‌ ವಾಹನಗಳನ್ನು ಜಾರ್ಜ್ ಮಾಡಲು ಕೋಲಾರ ನಗರಸಭೆ ಖರೀದಿಸಿರುವ ಎರಡು ಚಾರ್ಜಿಂಗ್‌ ಪಾಯಿಂಟ್‌ ಮೊತ್ತವು ಸಾರ್ವಜನಿಕರನ್ನು ಹುಬ್ಬೇರಿಸುವಂತೆ ಮಾಡಿದ್ದು, ಅವ್ಯವಹಾರ ಶಂಕೆ ಮೂಡಿಸಿದೆ.

ಎರಡು ಚಾರ್ಜಿಂಗ್‌ ಪಾಯಿಂಟ್‌ಗಳಿಗೆ ಬರೋಬ್ಬರಿ ₹6.77 ಲಕ್ಷ ಬಿಲ್‌ ಮಾಡಲಾಗಿದೆ. ಒಂದು ಉಪಕರಣಕ್ಕೆ ₹3.38 ಲಕ್ಷದಂತೆ ಖರೀದಿಸಲಾಗಿದೆ. ಎರಡೂ ಉಪಕರಣಗಳಿಗೆ ಜಿಎಸ್‌ಟಿ ಸೇರಿ ಬರೋಬ್ಬರಿ ₹7.99 ಲಕ್ಷ ಬಿಲ್‌ ಆಗಿದೆ.

ಬೋಲ್ಟ್‌.ಅರ್ತ್‌ ಕಂಪನಿಯ ಈ ಜಾರ್ಜಿಂಗ್‌ ಪಾಯಿಂಟ್‌ನ ಮಾರುಕಟ್ಟೆ ಮೌಲ್ಯ ಒಂದಕ್ಕೆ ಕೇವಲ ಸುಮಾರು ₹16,500 ಇದೆ. ಬೋಲ್ಟ್‌.ಅರ್ತ್‌ ಕಂಪನಿಯ ವೆಬ್‌ಸೈಟ್‌ ಪರಿಶೀಲಿಸಿದಾಗಲೂ ಇದೇ ಮಾಹಿತಿ ಲಭ್ಯವಾಗಿದೆ.

ಈ ಉಪಕರಣಗಳನ್ನು ಕೋಲಾರ ನಗರಸಭೆ ಹೆಸರಿನಲ್ಲಿ ಬೆಂಗಳೂರಿನ ಇನ್‌ಫ್ಯಾಂಟ್ರಿ ರಸ್ತೆ ಬಳಿಯ ಅಲ್ಫಾ ಟೆಕ್ನಾಲಾಜಿಸ್‌ನಿಂದ ಜುಲೈ 19ರಂದು ಖರೀದಿಸಿರುವುದಾಗಿ ಬಿಲ್ ಆಗಿದೆ. ಈ ಸಂಬಂಧ ‘ಟ್ಯಾಕ್ಸ್‌ ಇನ್‌ವಾಯ್ಸ್‌’ ರಿಸೀದಿಯೂ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಜಾರ್ಜಿಂಗ್‌ ಪಾಯಿಂಟ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್‌ ನೀಡಿದ ಸುಳಿವು ಆಧರಿಸಿ ‘ಪ್ರಜಾವಾಣಿ’ ಪರಿಶೀಲನೆ ನಡೆಸಿದಾಗ ಮತ್ತಷ್ಟು ಅಂಶಗಳು ಬಹಿರಂಗಗೊಂಡಿವೆ.

ಒಂದು ಚಾರ್ಜಿಂಗ್‌ ಪಾಯಿಂಟ್‌ ಉಪಕರಣವನ್ನು ಕೋಲಾರ ನಗರಸಭೆ ಕಚೇರಿಯ ಆವರಣದಲ್ಲಿ ಅಳವಡಿಸಲಾಗಿದೆ. ಮತ್ತೊಂದು ಉಪಕರಣವನ್ನು ಕೆಂದಟ್ಟಿಯ ಎಸ್‌ಟಿಪಿ ಘಟಕದಲ್ಲಿ ಅಳವಡಿಸಲಾಗಿದೆ.

‘ಜೆಮ್‌ (ಗವರ್ನಮೆಂಟ್‌ ಇ ಮಾರ್ಕೆಟಿಂಗ್‌) ಪೋರ್ಟಲ್‌ನಲ್ಲಿ ಟೆಂಡರ್‌ ಕರೆಯಲಾಗಿತ್ತು. ಅಂದಾಜು ಮೊತ್ತ ನಮೂದಿಸಿದ್ದೆವು. ಅಲ್ಪಾ ಟೆಕ್ನಾಲಜಿಸ್‌ ಮೂಲಕ ಖರೀದಿಸಲಾಗಿದೆ’ ಎಂದು ನಗರಸಭೆಯ ಸಹಾಯಕ ಪರಿಸರ ಎಂಜಿನಿಯರ್‌ (ಎಇಇ) ಎನ್‌.ಆರ್‌.ದಿಲೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅವ್ಯವಹಾರ ಶಂಕೆ ಇರುವ ಕಾರಣ ತನಿಖೆ ನಡೆಸುವಂತೆ ಕೊತ್ತೂರು ಮಂಜುನಾಥ್‌ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

15 ದಿನಗಳ ಹಿಂದೆಯಷ್ಟೇ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಸದ್ಯದಲ್ಲೇ ಸಾಮಾನ್ಯ ಸಭೆ ನಡೆಯಲಿದೆ. ಅದಕ್ಕೂ ಮೊದಲು ಕೌನ್ಸಿಲ್‌ ಇರಲಿಲ್ಲ. ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿಯಾಗಿದ್ದರು.

ಬೋಲ್ಟ್‌.ಅರ್ತ್‌ ವೆಬ್‌ಸೈಟ್‌ನಲ್ಲಿರುವ ಅದೇ ಆಕಾರದ ಇವಿ ಚಾರ್ಜಿಂಗ್‌ ಪಾಯಿಂಟ್‌ನ ಮೌಲ್ಯ
ಬೋಲ್ಟ್‌.ಅರ್ತ್‌ ವೆಬ್‌ಸೈಟ್‌ನಲ್ಲಿರುವ ಅದೇ ಆಕಾರದ ಇವಿ ಚಾರ್ಜಿಂಗ್‌ ಪಾಯಿಂಟ್‌ನ ಮೌಲ್ಯ
ಕೋಲಾರ ನಗರಸಭೆ ಕಚೇರಿ
ಕೋಲಾರ ನಗರಸಭೆ ಕಚೇರಿ
ನಗರಸಭೆ ಸಲ್ಲಿಸಿದ್ದ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿ ನೀಡಿರುವ ಆಡಳಿತಾತ್ಮಕ ಅನುಮೋದನೆಯ ಪತ್ರ
ನಗರಸಭೆ ಸಲ್ಲಿಸಿದ್ದ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿ ನೀಡಿರುವ ಆಡಳಿತಾತ್ಮಕ ಅನುಮೋದನೆಯ ಪತ್ರ
ನಾನು ಕಳೆದ ತಿಂಗಳಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಅದಕ್ಕೂ ಮೊದಲು ನಡೆದಿರುವ ಖರೀದಿ ವ್ಯವಹಾರವಿದು. ನನ್ನ ಗಮನಕ್ಕೆ ಬಂದಿಲ್ಲ. ಏನಾಗಿದೆ ಎಂದು ಪರಿಶೀಲನೆ ನಡೆಸುತ್ತೇನೆ ಎಸ್‌.ಅಂಬಿಕಾ ಪ್ರಭಾರ ಪೌರಾಯುಕ್ತೆ ಕೋಲಾರ ನಗರಸಭೆ
ಅಂದಾಜು ಪಟ್ಟಿ ಸಿದ್ಧಪಡಿಸಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗೆ ಕ್ರಿಯಾಯೋಜನೆ ಸಲ್ಲಿಸಿದ್ದು ಅವರು ಅನುಮೋದನೆ ನೀಡಿದ್ದರು. ಖರೀದಿ ಬಿಲ್‌ ಕೂಡ ಇದ್ದು ಯಾವುದೇ ಅವ್ಯವಹಾರ ನಡೆದಿಲ್ಲ.
–ಎನ್‌.ಆರ್‌.ದಿಲೀಪ್‌ ಎಇಇ (ಪರಿಸರ) ನಗರಸಭೆ ಕೋಲಾರ
ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇನೆ. ಯಾರ ಕೈವಾಡವಿದೆಯೋ ಅವರನ್ನು ಅಮಾನತುಗೊಳಿಸಬೇಕು.
–ಎಂ.ಸುರೇಶ್‌ ಬಾಬು ಕೋಲಾರ ನಗರಸಭೆ ಸದಸ್ಯ

ಜಿಲ್ಲಾಧಿಕಾರಿಯಿಂದ ₹8 ಲಕ್ಷದ ಯೋಜನೆಗೆ ಅನುಮತಿ!

ಸ್ವಚ್ಛ ಭಾರತ ಮಿಷನ್‌ 1–0 ಯೋಜನೆಯಡಿ ಘನ ತ್ಯಾಜ್ಯ ವಸ್ತು ನಿರ್ವಹಣೆ ಸಂಬಂಧ ಎಲೆಕ್ಟ್ರಾನಿಕ್‌ ವಾಹನಗಳನ್ನು ಚಾರ್ಜ್‌ ಮಾಡಲು ಎರಡು ಚಾರ್ಜಿಂಗ್‌ ಪಾಯಿಂಟ್‌ಗಳ ಖರೀದಿಗಾಗಿ ಕೋಲಾರ ನಗರಸಭೆ ಅಧಿಕಾರಿಗಳು 2023ರ ಡಿಸೆಂಬರ್‌ನಲ್ಲಿ ಕ್ರಿಯಾಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು. ಎರಡು ಉಪಕರಣ ಖರೀದಿಗೆ ₹8 ಲಕ್ಷ ಆಗಬಹುದೆಂದು ಅಂದಾಜು ಮೊತ್ತವನ್ನು ನಗರಸಭೆ ಅಧಿಕಾರಿಗಳು ನಮೂದಿಸಿದ್ದರು. ಅದಕ್ಕೆ ಜಿಲ್ಲಾಧಿಕಾರಿಯು ಕೆಲ ಷರತ್ತುಗಳೊಂದಿಗೆ ಜನವರಿ 1ರಂದು ಕ್ರಿಯಾಯೋಜನೆಗೆ ಅನುಮೋದನೆಯನ್ನೂ ನೀಡಿದ್ದಾರೆ. ಈ ಪತ್ರವೂ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT