ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಅವೈಜ್ಞಾನಿಕ ಕಾಮಗಾರಿ; ತರಾತುರಿಯಲ್ಲಿ ಸಿಂಥೆಟಿಕ್‌ ಟ್ರ್ಯಾಕ್ ಉದ್ಘಾಟನೆ

ಕಾಮಗಾರಿ ಅವೈಜ್ಞಾನಿಕ, ಹೆಚ್ಚುವರಿ ಅನುದಾನಕ್ಕೆ ಕೋರಿಕೆ; ಸಭೆ ನಡೆಸಿ ಪರಿಶೀಲಿಸುವೆ –ಸಚಿವ
Published 16 ಆಗಸ್ಟ್ 2024, 4:55 IST
Last Updated 16 ಆಗಸ್ಟ್ 2024, 4:55 IST
ಅಕ್ಷರ ಗಾತ್ರ

ಕೋಲಾರ: ‘ಕಾಮಗಾರಿ ಪೂರ್ಣಗೊಂಡಿಲ್ಲ ಎಂಬ ಮಾಹಿತಿ ನನಗೂ ಗೊತ್ತಾಗಿದೆ. ಟ್ರ್ಯಾಕ್‌ನಲ್ಲಿ ಕೆಲವೆಡೆ ನೀರು ನಿಂತುಕೊಳ್ಳುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ₹ 7 ಕೋಟಿ ವೆಚ್ಚದಲ್ಲಿ ನಡೆಸಿದ ಕಾಮಗಾರಿ ಇದಾಗಿದೆ. ಈ ಬಗ್ಗೆ ಸಭೆ ನಡೆಸಿ ಪರಿಶೀಲಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ತಿಳಿಸಿದರು.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನೂತನ ಸಿಂಥೆಟಿಕ್‌ ಟ್ರ್ಯಾಕ್ ಉದ್ಘಾಟಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಪರಿಪೂರ್ಣವಾಗಿ ಮಕ್ಕಳಿಗೆ ಉಪಯೋಗ ಆಗುವ ರೀತಿ ಸಜ್ಜುಪಡಿಸಿ ಕೊಡಲಾಗುವುದು’ ಎಂದರು.

‘ಬಾಕಿ ಉಳಿದಿರುವ ಕಾಮಗಾರಿಯನ್ನು ನಿಗದಿತ ₹ 7 ಕೋಟಿ ಮೊತ್ತದಲ್ಲೇ ಮಾಡಿಸಬೇಕಿದೆ. ಆದರೆ, ಹೆಚ್ಚುವರಿಯಾಗಿ ಏನಾದರೂ ಕೆಲಸ ಆಗಬೇಕಿದ್ದರೆ ಅದಕ್ಕೆ ಎಷ್ಟು ಹಣ ಬೇಕು ಎಂಬುದರ ಬಗ್ಗೆಯೂ ಚರ್ಚಿಸಲಾಗುವುದು. ಮಳೆ ನೀರು ನಿಲ್ಲದಂತೆ ನೋಡಿಕೊಳ್ಳುವುದು ಗುತ್ತಿಗೆದಾರರ ಜವಾಬ್ದಾರಿ’ ಎಂದು ಹೇಳಿದರು.

ಹಲವಾರು ಕೆಲಸಗಳು ಬಾಕಿ ಇರುವಂತೆಯೇ ಕ್ರೀಡಾಂಗಣಕ್ಕೆ ತರಾತುರಿಯಲ್ಲಿ ಚಾಲನೆ ನೀಡಿರುವುದಕ್ಕೆ ಜಿಲ್ಲೆಯ ಕ್ರೀಡಾಪಟುಗಳು, ಕ್ರೀಡಾ ಸಂಘಟನೆಗಳ ಪದಾಧಿಕಾರಿಗಳು, ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ತಿಂಗಳ 20ರಿಂದ ಕಾಮಗಾರಿ ಮತ್ತೆ ಆರಂಭವಾಗಲಿದೆ. ಕ್ರೀಡಾಂಗಣದಲ್ಲಿ ಹಲವು ಮಾರ್ಪಡು ಅಗತ್ಯವಿರುವುದರ ಜೊತೆಗೆ ಹೆಚ್ಚುವರಿ ಕೆಲಸ ನಡೆಯಬೇಕಿರುವುದನ್ನು ಕ್ರೀಡಾ ಇಲಾಖೆ ನೇಮಿಸಿರುವ ಸಮಿತಿ ಸದಸ್ಯರು ಗಮನಕ್ಕೆ ತಂದಿದ್ದಾರೆ. ಕಾಮಗಾರಿಗಳಿಗೆ ಇನ್ನೂ ಸುಮಾರು ₹ 50 ಲಕ್ಷ ಅಗತ್ಯ ಬೀಳಬಹುದೆಂದು ಗುತ್ತಿಗೆದಾರರು ಹೇಳಿದ್ದಾರೆ.

ಮತ್ತೊಮ್ಮೆ ಕ್ರೀಡಾಂಗಣ ಉದ್ಘಾಟಿಸಬೇಕು: ‘ಕ್ರೀಡಾಪಟುಗಳು, ಸಂಘಟಕರು, ಕ್ರೀಡಾ ಸಂಸ್ಥೆ ಪದಾಧಿಕಾರಿಗಳು, ಕ್ರೀಡಾಂಗಣದ ಅಭಿವೃದ್ಧಿಗೆ ಕಾರಣರಾದ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿ ತರಾತುರಿಯಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಉದ್ಘಾಟಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮ ಮುಂದೂಡಲು ಮನವಿ ಮಾಡಿದರೂ ಕೇಳಿಲ್ಲ’ ಎಂದು ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ಮಾಜಿ ಕಾರ್ಯದರ್ಶಿ ಕೆ.ಜಯದೇವ್‌ ಆಕ್ರೋಶ ವ್ಯಕ್ತಪಡಿಸಿದರು.

‘ಕ್ರೀಡಾಂಗಣದ ನ್ಯೂನತೆ ಬಗ್ಗೆ ಪರಿಶೀಲನೆ ನಡೆಸಲು ಸಚಿವರು ಮುಂದಾಗಿರುವುದು ಉತ್ತಮ ಬೆಳವಣಿಗೆ. ಆಗಲಾದರೂ ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಜಿಲ್ಲೆಯವರೇ ಆದ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಆಹ್ವಾನಿಸಬೇಕು’ ಎಂದರು.

‘ಹಲವರ ಹೋರಾಟದ ಫಲವಾಗಿ ಕ್ರೀಡಾಂಗಣಕ್ಕೆ ಸಿಂಥೆಟಿಕ್‌ ಟ್ರ್ಯಾಕ್‌ ಹಾಕಲಾಗಿದೆ. ಉದ್ಘಾಟನಾ ಕಾರ್ಯಕ್ರಮವನ್ನು ದೊಡ್ಡಮಟ್ಟದಲ್ಲಿ ನಡೆಸಬೇಕಿತ್ತು’ ಎಂದು ಹೇಳಿದರು.

ಕಾಮಗಾರಿ ಪೂರ್ಣಗೊಂಡ ಮೇಲೆ ರೋಡ್‌ ರೇಸ್‌ ಆಯೋಜನೆ ಮಾಡಿ ಹಿರಿಯ ಕ್ರೀಡಾಪಟುಗಳನ್ನು ಆಹ್ವಾನಿಸಿ ಜಿ.ಪರಮೇಶ್ವರ ಮುನಿಯಪ್ಪ ಅವರನ್ನು ಕರೆಸಿ ಮತ್ತೆ ಉದ್ಘಾಟನೆ ಮಾಡಲಾಗುವುದು.
-ಕೆ.ಜಯದೇವ್‌, ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ಮಾಜಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT