ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಅಡುಗೆ ಎಣ್ಣೆ ಮಾರಾಟ ಜಾಲ: ವರ್ತಕರ ಲಾಭದಾಸೆಗೆ ಗ್ರಾಹಕರು ಬಲಿಪಶು

ಹೊರ ರಾಜ್ಯಗಳಿಂದ ಆಮದು
Last Updated 17 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕಳಪೆ ಅಡುಗೆ ಎಣ್ಣೆ ಮಾರಾಟ ಜಾಲ ಸಕ್ರಿಯವಾಗಿದ್ದು, ಹಲವೆಡೆ ದಿನಸಿ ಅಂಗಡಿಗಳಲ್ಲಿ ಕದ್ದುಮುಚ್ಚಿ ಪ್ಯಾಕಿಂಗ್‌ ಇಲ್ಲದ ಎಣ್ಣೆಯನ್ನು ಚಿಲ್ಲರೆಯಾಗಿ ಮಾರಾಟ ಮಾಡಲಾಗುತ್ತಿದೆ.

ಆಂಧ್ರಪ್ರದೇಶ, ತಮಿಳುನಾಡು ರಾಜ್ಯದಿಂದ ಪ್ರತಿನಿತ್ಯ ಲೋಡ್‌ಗಟ್ಟಲೇ ಬರುವ ನಕಲಿ ಎಣ್ಣೆಯನ್ನು ವ್ಯಾಪಾರಿಗಳು ರಾಜಾರೋಷವಾಗಿ ಮಾರುತ್ತಿದ್ದಾರೆ. ಅಗ್ಗದ ಬೆಲೆಗೆ ಸಿಗುವ ಈ ಎಣ್ಣೆಯು ಆರೋಗ್ಯಕ್ಕೆ ಕಂಟಕವಾದರೂ ಗ್ರಾಹಕರು ಹಣ ಉಳಿಸುವ ಏಕೈಕ ಕಾರಣಕ್ಕೆ ಕಳಪೆ ಎಣ್ಣೆ ಖರೀದಿಸಿ ಬಳಸುತ್ತಿದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ನಿಯಮದ ಪ್ರಕಾರ ಅಡುಗೆ ಎಣ್ಣೆಯನ್ನು ಕಡ್ಡಾಯವಾಗಿ ಪ್ಯಾಕೆಟ್‌, ಪ್ಲಾಸ್ಟಿಕ್‌ ಕ್ಯಾನ್‌ ಅಥವಾ ಡಬ್ಬದಲ್ಲಿ (ಟಿನ್‌) ತುಂಬಿಸಿ ಮಾರಾಟ ಮಾಡಬೇಕು. ಅಲ್ಲದೇ, ಉತ್ಪಾದನೆ ಮತ್ತು ವಹಿವಾಟಿಗೆ ಭಾರತೀಯ ಪ್ರಮಾಣಿತ ಸಂಸ್ಥೆ (ಬಿಎಸ್‌ಐ), ಎಫ್‌ಎಸ್‌ಎಸ್‌ಎಐನಿಂದ ವಾಣಿಜ್ಯ ಪರವಾನಗಿ ಪಡೆಯಬೇಕು. ಜತೆಗೆ ಎಣ್ಣೆ ಪ್ಯಾಕೆಟ್‌ ಅಥವಾ ಟಿನ್‌ ಮೇಲೆ ಗುಣಮಟ್ಟ ಖಾತ್ರಿಯ ಮುದ್ರೆ ಇರಬೇಕು.

ಆದರೆ, ಅಧಿಕ ಲಾಭದಾಸೆಗೆ ಹಾಗೂ ವಾಣಿಜ್ಯ ಪರವಾನಗಿ ಶುಲ್ಕ ಉಳಿಸುವ ಉದ್ದೇಶಕ್ಕೆ ಅಡ್ಡದಾರಿ ಹಿಡಿದಿರುವ ವರ್ತಕರು ನಕಲಿ ಎಣ್ಣೆ ಉತ್ಪಾದನಾ ಕಂಪನಿಗಳೊಂದಿಗೆ ಕೈಜೋಡಿಸಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ನಗರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ನಡೆಯುತ್ತಿರುವ ಈ ದಂಧೆಗೆ ಜನರು ಅರಿವಿಲ್ಲದೆ ಬಲಿಪಶುವಾಗುತ್ತಿದ್ದಾರೆ.

ಪ್ಯಾರಾಫಿನ್‌ ಮಿಶ್ರಣ: ಚಿಲ್ಲರೆಯಾಗಿ ಮಾರಾಟ ಮಾಡುವ ಎಣ್ಣೆಗೆ ಪೆಟ್ರೋಲಿಯಂ ಉಪ ಉತ್ಪನ್ನವಾದ ಪ್ಯಾರಾಫಿನ್‌ ರಾಸಾಯನಿಕವನ್ನು ಬೆರೆಸಲಾಗುತ್ತಿದೆ. ದ್ರವ ರೂಪದಲ್ಲಿರುವ ಪ್ಯಾರಾಫಿನ್‌ನ ಬೆಲೆ ಕಡಿಮೆಯಿದ್ದು, ಈ ರಾಸಾಯನಿಕವನ್ನು ಅಡುಗೆ ಎಣ್ಣೆಯಲ್ಲಿ ಬೆರೆಸಿದರೆ ಬರಿಗಣ್ಣಿಗೆ ಪತ್ತೆ ಆಗುವುದೇ ಇಲ್ಲ. ಪೆಟ್ರೋಲಿಯಂ ಸಂಸ್ಕರಣೆ ಹಂತದಲ್ಲಿ ಕೊನೆಗೆ ಉಳಿಯುವ ಪ್ಯಾರಾಫಿನ್‌ ರಾಸಾಯನಿಕವು ಕಲಬೆರಕೆಗೆ ಸೂಕ್ತ ಪದಾರ್ಥ. ಹಾಲಿನಲ್ಲಿ ನೀರು ಹೊಂದಿಕೊಳ್ಳುವಂತೆ ಎಣ್ಣೆಯೊಡನೆ ಬೆರೆತು ಹೋಗುವ ಗುಣವುಳ್ಳ ಪ್ಯಾರಾಫಿನ್‌ ಕ್ಯಾನ್ಸರ್‌ಕಾರಕ ರಾಸಾಯನಿಕವಾಗಿದೆ.

ನಕಲಿ ಅಡುಗೆ ಎಣ್ಣೆಯಿಂದ ಮಾಡಿದ ಆಹಾರ ಪದಾರ್ಥಗಳ ಜತೆ ವಿಷಕಾರಿ ಪ್ಯಾರಾಫಿನ್‌ ರಾಸಾಯನಿಕವು ಸದ್ದಿಲ್ಲದೆ ಜನರ ಉದರ ಸೇರುತ್ತಿದೆ. ಇದರಿಂದ ಜನರಲ್ಲಿ ಕ್ಯಾನ್ಸರ್‌, ಕರುಳು ಸಮಸ್ಯೆ, ಬೊಜ್ಜು, ಅಜೀರ್ಣ, ಮೂತ್ರಪಿಂಡ ಸೋಂಕಿನಂತಹ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ.

ಬೆಲೆ ಕಡಿಮೆ: ಕ್ಯಾನ್‌, ಪ್ಯಾಕೆಟ್‌ ಹಾಗೂ ಟಿನ್‌ಗಳಲ್ಲಿ ಬರುವ ಬ್ರಾಂಡ್‌ ಎಣ್ಣೆ ಬೆಲೆಗೆ ಹೋಲಿಸಿದರೆ ಚಿಲ್ಲರೆಯಾಗಿ ಮಾರಾಟ ಮಾಡುವ ಎಣ್ಣೆ ಬೆಲೆ ಕಡಿಮೆಯಿದೆ. ಬಹುಪಾಲು ಬ್ರಾಂಡ್‌ ಎಣ್ಣೆ ಬೆಲೆ ₹ 105ರ (ಲೀಟರ್‌ಗೆ) ಗಡಿ ದಾಟಿವೆ. ಆದರೆ, ಚಿಲ್ಲರೆಯಾಗಿ ಮಾರಾಟವಾಗುತ್ತಿರುವ ಎಣ್ಣೆ ಬೆಲೆ ₹ 95ರಿಂದ ₹ 100ರೊಳಗೆ ಇದೆ.

ಫಾಸ್ಟ್‌ಫುಡ್‌ ಮಳಿಗೆಗಳು, ಹೋಟೆಲ್‌ಗಳು, ಬೋಂಡ ಅಂಗಡಿ, ಗೋಬಿ ಮಂಚೂರಿ ಅಂಗಡಿ ಮಾಲೀಕರಿಗೆ ಮಾರುಕಟ್ಟೆಯಲ್ಲಿ ಚಿಲ್ಲರೆಯಾಗಿ ಸಿಗುವ ಅಡುಗೆ ಎಣ್ಣೆಯೇ ಅಚ್ಚುಮೆಚ್ಚು. ದರ ಕಡಿಮೆ ಇರುವ ಕಾರಣಕ್ಕೆ ಮಾಲೀಕರು ಚಿಲ್ಲರೆಯಾಗಿ ಸಿಗುವ ಎಣ್ಣೆಯನ್ನೇ ಆಹಾರ ಪದಾರ್ಥಗಳಿಗೆ ಬಳಕೆ ಮಾಡುತ್ತಿದ್ದಾರೆ. ನಾಲಿಗೆ ರುಚಿಗಾಗಿ ಮನೆ ಆಹಾರ ಬಿಟ್ಟು ಹೋಟೆಲ್‌ ತಿನಿಸು, ಗೋಬಿ ಮಂಚೂರಿ, ಬೋಂಡ ಸವಿಯುವ ಮಂದಿ ಹಣ ಕೊಟ್ಟು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ.

ಚಿಲ್ಲರೆಯಾಗಿ ಅಡುಗೆ ಎಣ್ಣೆ ಮಾರಾಟ ಮಾಡುವ ವರ್ತಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಎಫ್ಎಸ್ಎಸ್ಎಐ, ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ರಾಜಕೀಯ ಒತ್ತಡದ ಕಾರಣಕ್ಕೆ ಮೌನಕ್ಕೆ ಶರಣಾಗಿದ್ದಾರೆ.

***

ಜಿಲ್ಲೆಯ ಕೆಲವೆಡೆ ವರ್ತಕರು ಚಿಲ್ಲರೆಯಾಗಿ ಅಡುಗೆ ಎಣ್ಣೆ ಮಾರುತ್ತಿರುವುದು ಗಮನಕ್ಕೆ ಬಂದಿದೆ. ಆ ವರ್ತಕರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. ಪ್ರಕರಣ ದಾಖಲಿಸಿ ದಂಡ ವಿಧಿಸುತ್ತೇವೆ.
–ಡಾ.ಎಂ.ಎ.ಚಾರಿಣಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಜಿಲ್ಲಾ ಅಂಕಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT