ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಶ್ರಮಿಸಿದವರ ಆದರ್ಶ ಪಾಲಿಸಿ: ಸಿ.ಎನ್.ಪ್ರದೀಪ್‌ಕುಮಾರ್

Last Updated 1 ನವೆಂಬರ್ 2021, 15:33 IST
ಅಕ್ಷರ ಗಾತ್ರ

ಕೋಲಾರ: ‘ಕನ್ನಡ ನಾಡು, ನುಡಿಯ ಉಳಿವಿಗಾಗಿ ಹಲವರು ಶ್ರಮಿಸಿದ್ದಾರೆ. ಅಂತಹ ಮಹನೀಯರು ನಮಗೆ ಆದರ್ಶವಾಗಬೇಕು. ಆ ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಭಾಷೆ, ನೆಲ, ಜಲ ಸಂರಕ್ಷಣೆಗೆ ಸಂಕಲ್ಪ ಮಾಡೋಣ’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಹೇಳಿದರು.

ಅರಾಭಿಕೊತ್ತನೂರು ಶಾಲೆಯಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಷಯದಲ್ಲಿ ಉನ್ನತ ಸ್ಥಾನದಲ್ಲಿದೆ. ಮಕ್ಕಳು ಕನ್ನಡವನ್ನು ಸ್ಪಷ್ಟವಾಗಿ ಓದುವ, ಬರೆಯುವ, ಮಾತನಾಡುವುದನ್ನು ಕಲಿತರೆ ಅದೇ ನಾಡು, ನುಡಿಗೆ ನೀಡುವ ಗೌರವ’ ಎಂದರು.

‘ಕೋಲಾರ ಗಡಿ ಜಿಲ್ಲೆಯಾದರೂ ಕನ್ನಡಕ್ಕೆ ಎಂದಿಗೂ ದ್ರೋಹ ಬಗೆದಿಲ್ಲ. ಈಗ ಜಿಲ್ಲೆಯ ಗಡಿ ಭಾಗದಲ್ಲೂ ಸಂಪೂರ್ಣ ಕನ್ನಡ ವಾತಾವರಣವಿದೆ. ಈ ಹಿಂದೆ ಗಡಿ ಭಾಗದಲ್ಲಿ ತೆಲುಗು, ತಮಿಳು ಭಾಷೆ ಮಹತ್ವ ಪಡೆದಿದ್ದವು. ಈಗ ಅಂತಹ ಪರಿಸ್ಥಿತಿ ಇಲ್ಲ. ಯಾರೂ ಕನ್ನಡ ವಿರೋಧಿ ವರ್ತನೆ ತೋರುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಸಹೋದರತೆಯ ಮನೋಭಾವದೊಂದಿಗೆ ಅಭಿವೃದ್ಧಿ ತಾರತಮ್ಯ ನಿವಾರಣೆಯ ಚಿಂತನೆ ಅಗತ್ಯ. ಹಂಚಿ ಬದುಕುವ ತ್ಯಾಗ ಮನೋಭಾವ ನಮ್ಮದಾಗಬೇಕು. ರಾಜ್ಯದ ಯಾವುದೇ ಮೂಲೆಯಲ್ಲಿ ನಾಡು, ನುಡಿಗೆ ತೊಂದರೆಯಾದಾಗ ಒಗ್ಗೂಡುವ ಸಂಕಲ್ಪ ಮಾಡೋಣ’ ಎಂದು ಸಲಹೆ ನೀಡಿದರು.

‘ಕನ್ನಡ ನಾಡಿನ ಏಳಿಗೆಗೆ ಶ್ರಮಿಸಿದ ಮಹನೀಯರ ಆದರ್ಶ ಪಾಲಿಸುವುದು ಅಗತ್ಯ. ಕನ್ನಡ ನಾಡು, ನುಡಿಗೆ ಧಕ್ಕೆ ಬರುವಂತಾದರೆ ಯಾವುದೇ ಹೋರಾಟಕ್ಕೂ ಸಿದ್ಧರಾಗಬೇಕು. ಈ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಕನ್ನಡಾಭಿಮಾನ ಮುಖ್ಯ. ಇತರೆ ಭಾಷೆ ಕಲಿಯುವುದು ತಪ್ಪಲ್ಲ. ಆದರೆ, ಮಾತೃ ಭಾಷೆಗೆ ನೀಡುವ ಗೌರವಕ್ಕೆ ಚ್ಯುತಿ ಆಗಬಾರದು’ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಹೇಂದ್ರ ತಿಳಿಸಿದರು.

ಶಾಲೆ ಎಸ್‌ಡಿಎಂಸಿ ಸದಸ್ಯ ರಾಮಚಂದ್ರಪ್ಪ, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಭವಾನಿ, ಲೀಲಾ, ಸುಗುಣಾ, ಸಿ.ಎಲ್.ಶ್ರೀನಿವಾಸಲು, ಫರೀದಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT