ಸೋಮವಾರ, ನವೆಂಬರ್ 18, 2019
24 °C

ಅಳುವವರಿಗೆ ಭಾಷೆ ಬಗ್ಗೆ ಅರಿವಿಲ್ಲ: ನಾಡೋಜ ಡಾ.ಮಹೇಶ ಜೋಶಿ ಕಳವಳ

Published:
Updated:
Prajavani

ಕೋಲಾರ: ‘ಗಡಿ ಜಿಲ್ಲೆಯಲ್ಲಿ ಕನ್ನಡ, ತೆಲುಗು, ತಮಿಳು ಭಾಷೆ ಬಳಕೆಯಿದ್ದರೂ, ಕನ್ನಡವನ್ನು ಮಾತೃ ಭಾಷೆಯನ್ನಾಗಿ ಬಳಕೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ದೂರದರ್ಶನ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೆಶಕ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.

ಕನ್ನಡ ಸಿರಿ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ನಮ್ಮನ್ನು ಅಳುವವರಿಗೆ ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು ಇಲ್ಲದಂತಾಗಿದ್ದು, ಇದರಿಂದ ಕನ್ನಡಿಗರು ಸೌಕರ್ಯ ಪಡೆದುಕೊಳ್ಳಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ವಿಷಾದಿಸಿದರು.

‘ನಾಡಿನಲ್ಲಿ ದೈವ. ಅದೈತ ವಿಶಿಷ್ಟ ಅದೈತಗಳಿಂದ ಕೂಡಿರುವ ತ್ರಿವೇಣಿ ಸಂಗಮವಾಗಿದೆ. ಭಾರತೀಯ ಸಂಸ್ಕೃತಿಯ ಸಿದ್ದಾಂತಗಳು ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತಗಳ ಜತೆ ಪೌರಾಣಿಕ, ಸಾಂಸ್ಕೃತಿಕ ಸಂಪತ್ತುಗಳಿಂದ ಕೂಡಿ ದೇಶಕ್ಕೆ ಕೀರ್ತಿ ತರುತ್ತಿದೆ. ರಾಮಾಯಣ ಮಹಾಭಾರತ ಪೌರಾಣಿಕ ಇತಿಹಾಸ ಕೋಲಾರಲ್ಲೂ ದಾಖಲೆಗಳಿಗೆ’ ಎಂದರು.

ರಾಜ್ಯ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್ ಮಾತನಾಡಿ. ‘ಸಾಹಿತ್ಯ, ಸಾಂಸ್ಕೃತಿಕ ಚಳುವಳಿ ಜಿಲ್ಲೆಯಿಂದ ಪ್ರಾರಂಭವಾದ ಇತಿಹಾಸವಿದ್ದು, ಸಂಸ್ಥೆ ಅಥವಾ ಸಂಘಟನೆಯ ಪೂರ್ವ ಯೋಜನೆಗಳ ಸಮಗ್ರವಾಗಿ ಒಳಗೊಳ್ಳುವ ನಿಟ್ಟಿನಲ್ಲಿ ಕೆಲಸ ಸಂಘಟನೆಯ ಮೂಲಕ ನಡೆಯಬೇಕು’ ಎಂದು ತಿಳಿಸಿದರು.

‘ಕಲೆ, ಸಾಹಿತ್ಯ, ಹಾಡುಗಳು ಜನರ ಅಲೋಚನೆಗಳಿಗೆ ಸ್ಪಂದಿಸುವಂತೆ ರಚನೆಯಾಗಬೇಕು. ಮನರಂಜನೆ ಮನಸ್ಸಿನ ಧಾರ್ಮಿಕ ಆಧ್ಯಾತ್ಮೀಕವಾಗಿ ಜನರ ಬದುಕು ರೂಪಿಸುವಂತಾಗಬೇಕು, ಸಾಹಿತ್ಯ ಪರಂಪರೆಯ ಚಟುವಟಿಕೆಗಳು ಜನರ ಭದ್ರತೆಯನ್ನು ಮುಂದಿಟ್ಟು ಹೋದಾಗ ಯಾವುದೇ ಸಂಘಟನೆಗೆ ಗೌರವ ಸಿಗುತ್ತದೆ’ ಎಂದು ಹೇಳಿದರು.

ಕಾನೂನು ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ಪ್ರಸನ್ನಕುಮಾರಿ ಮಾತನಾಡಿ, ‘ಮಕ್ಕಳು ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಬೇಕು. ಭಾಷೆಯ ಶಕ್ತಿಯನ್ನು ಯುವಕರಿಗೆ ಅರಿವು ಮೂಡಿಸುವ ಮೂಲಕ ಸಾಮಾಜಿಕ, ಆರ್ಥಿಕ, ರಾಜಕೀಯದಲ್ಲಿ ಐಕ್ಯತೆ ತರಬೇಕು’ ಎಂದು ತಿಳಿಸಿದರು.

ರಾಜ್ಯ ಸರಕು ಮಾರಾಟ ಮತ್ತು ಖರೀದಿದಾರರ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು ಮಾತನಾಡಿ, ‘ಜಿಲ್ಲೆಯಲ್ಲಿ ಸಾಹಿತಿಗಳಿಗೆ, ಪ್ರಶಸ್ತಿ ಪುರಸ್ಕೃತರಿಗೆ ಕೊರತೆ ಇಲ್ಲ. ಗಡಿಭಾಗದ ಹಳ್ಳಿಗಳಲ್ಲಿ ಸಿರಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ನಡೆಸುವ ಮೂಲಕ ಕನ್ನಡ ಭಾಷೆಯನ್ನು ವಿಸ್ತರಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ರೈತ ಹೋರಾಟಗಾರ ಮಲ್ಲಿಕಾರ್ಜುನರೆಡ್ಡಿ ರಚಿಸಿರುವ ‘ನಮ್ಮ ಭೂಮಿ– ನಮ್ಮ ಹೋರಾಟ’ ಪುಸ್ತಕ ಬಿಡುಗಡೆ ಮಾಡಲಾಯಿತು.

ಪಿಯು ಉಪನ್ಯಾಸಕ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್, ಭಾರತ ಸೇವಾ ದಳದ ಅಧ್ಯಕ್ಷ ಕೆ.ಎಸ್.ಗಣೇಶ್, ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಸುಬ್ಬರಾಮಯ್ಯ, ಸಂಸ್ಥಾಪಕ ಅಧ್ಯಕ್ಷ ಕೆ.ನರಸಿಂಹಮೂರ್ತಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)