ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಕೊಕ್ಕೆ ಸಂಸ್ಕೃತಿಗೆ ಬೀಳದ ಕಡಿವಾಣ

ಕುಷ್ಟಗಿ ತಾಲ್ಲೂಕಿನ ಶೇ 60ರಷ್ಟು ಮನೆಗಳಿಗೆ ವಿದ್ಯುತ್‌ ಮಾಪಕಗಳೇ ಇಲ್ಲ!
Published 25 ಫೆಬ್ರುವರಿ 2024, 5:17 IST
Last Updated 25 ಫೆಬ್ರುವರಿ 2024, 5:17 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದಿಂದ ಅನತಿ ದೂರದಲ್ಲಿರುವ ಬೆಂಚಮಟ್ಟಿ ಗ್ರಾಮದಲ್ಲಿ ಮುನ್ನೂರಕ್ಕೂ ಅಧಿಕ ಮನೆಗಳಿವೆ. ಆದರೆ ಒಂದು ಮನೆಗೆ ಮಾತ್ರ ವಿದ್ಯುತ್‌ ಬಳಕೆ ಮಾಪಕ (ಮೀಟರ್) ಇದೆ. ದೂರದ ನರಸಾಪುರದಲ್ಲಿ ಅಷ್ಟೇ ಮನೆಗಳಿದ್ದರೂ 3ರಿಂದ 4 ಮನೆಗಳಿಗೆ ಮಾತ್ರ ಮೀಟರ್‌ಗಳಿವೆ.

ಹಳ್ಳಿಗಳಲ್ಲಿ ಸರಾಸರಿ ಶೇ. 40ರಷ್ಟು ಮನೆಗಳಿಗೆ ಮಾತ್ರ ಅಧಿಕೃತ ಸಂಪರ್ಕಗಳಿದ್ದು, ಮಿಕ್ಕಿದ್ದೆಲ್ಲವೂ ಅನಧಿಕೃತ. ತಾಲ್ಲೂಕಿನ ಗೃಹಬಳಕೆ ವಿದ್ಯುತ್‌ ಸಂಪರ್ಕಕ್ಕೆ ಸಂಬಂಧಿಸಿದ ಮಾಹಿತಿ ಇದು. ಬಹುತೇಕ ಹಳ್ಳಿಗಳಲ್ಲಿನ ಶೇ. 90ರಷ್ಟು ಮನೆಗಳಿಗೆ ಅಧಿಕೃತ ಸಂಪರ್ಕವೇ ಇಲ್ಲ ಎಂಬುದನ್ನು ಸ್ವತಃ ಜೆಸ್ಕಾಂ ಸಿಬ್ಬಂದಿಯೇ ಒಪ್ಪಿಕೊಳ್ಳುತ್ತಾರೆ. ಯಾವುದೇ ಹಳ್ಳಿಗಳಿಗೆ ಹೋದರೂ ವಿದ್ಯುತ್‌ ತಂತಿಗಳಿಗೆ ಕೊಂಡಿ (ಕೊಕ್ಕೆ) ಹಾಕಿರುವುದು ಕಂಡುಬರುತ್ತದೆ.

ಜೆಸ್ಕಾಂ ಉಪ ವಿಭಾಗದ ಮಾಹಿತಿಯ ಪ್ರಕಾರ ತಾಲ್ಲೂಕಿನಲ್ಲಿ ಒಟ್ಟು 33 ಸಾವಿರ ಅಧಿಕೃತ (ಆರ್‌ಆರ್‌ ಸಂಖ್ಯೆ ಸಹಿತ) ಸಂಪರ್ಕಗಳಿದ್ದು, ಅವುಗಳ ಪೈಕಿ 31 ಸಾವಿರ ಸಂಪರ್ಕಗಳು ಗೃಹಜ್ಯೋತಿ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಬಿದ್ದ ಮನೆಗಳು, ಮನೆ ಮಾಲೀಕರು ಸ್ಥಳಾಂತರಗೊಂಡಿರುವುದು ಹೀಗೆ ಲೆಕ್ಕಹಾಕಿದರೆ ಉಳಿದ 2,400 ಸಂಪರ್ಕಗಳೂ ಉಚಿತವಾಗಬೇಕಿದೆ. ಸದ್ಯ ಈ ತಾಲ್ಲೂಕಿನಲ್ಲಿ 200 ಯೂನಿಟ್ ಗೆರೆ ದಾಟಿ ವಿದ್ಯುತ್‌ ಬಳಕೆ ಮಾಡಿ ಬಿಲ್‌ ಪಾವತಿಸುವವರು 259 ಜನ ಮಾತ್ರ ಎಂಬುದು ವಿಶೇಷ.

ಕಡಿವಾಣವಿಲ್ಲವೆ?: ಅನಧಿಕೃತ ಸಂಪರ್ಕಗಳಿಗೆ ಕಡಿವಾಣವಿಲ್ಲವೇ ಎಂದು ಕೇಳಿದರೆ ಜೆಸ್ಕಾಂ ಸಿಬ್ಬಂದಿ ಬಳಿ ಉತ್ತರವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾರನ್ನೂ ಮಾತನಾಡಿಸುವಂತಿಲ್ಲ.

ದಿಢೀರ್ ತಪಾಸಣೆಗೆ ಹೋಗುತ್ತಿದ್ದಂತೆ ಕೆಲವರು ವಿದ್ಯುತ್‌ ಪ್ರವಹಿಸುವ ವೈರ್‌ಗಳನ್ನೇ ಕಿತ್ತುಕೊಳ್ಳಲು ಮುಂದಾಗುತ್ತಾರೆ. ಇದರಿಂದ ಸಾಕಷ್ಟು ಅಪಾಯವೂ ಇದೆ. ಅವಘಡಗಳು ಸಂಭವಿಸಿದರೆ ನಮ್ಮನ್ನೇ ಹೊಣೆಗಾರರನ್ನಾಗಿಸುತ್ತಾರೆ ಎಂದು ಜೆಸ್ಕಾಂ ಸಿಬ್ಬಂದಿ ಬೇಸರ ಹೊರಹಾಕಿದರು.

ಈ ಹಿಂದೆ ವಿದ್ಯುತ್‌ಗೆ ಶುಲ್ಕವಿತ್ತು, ಈಗ ಉಚಿತವಾಗಿದೆ. ಆದರೂ ಜನರು ಸಂಪರ್ಕ ಅಧಿಕೃತಗೊಳಿಸಿಕೊಳ್ಳಲು ಮುಂದಾಗುತ್ತಿಲ್ಲ. ವಿಚಕ್ಷಣಾ ದಳದವರು ಬಂದು ದಾಖಲಿಸುವ ಪ್ರಕರಣಗಳಲ್ಲಿ ಕೆಲವರು ದಂಡ ಕಟ್ಟುತ್ತಾರೆ ವಿನಃ ಆರ್‌ಆರ್‌ ಸಂಖ್ಯೆ ಪಡೆಯುವುದಿಲ್ಲ.

‘₹650 ಠೇವಣಿ ಮತ್ತು ಮೀಟರ್‌ ಅಳವಡಿಸುವುದಕ್ಕೆ ₹1,500 ಶುಲ್ಕ ಪಾವತಿಸಿದರೆ ಆರ್‌ಆರ್‌ ಸಂಖ್ಯೆ ನೀಡುತ್ತೇವೆ. ಗ್ರಾಮಗಳಿಗೆ ಭೇಟಿ ನೀಡುವ ಸಿಬ್ಬಂದಿಗೆ ದಾಖಲೆ ಒದಗಿಸಿದರೆ ಕೆಲ ನಿಮಿಷದಲ್ಲೇ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ವಿಷಯದಲ್ಲಿ ಜನ ಸಹಕರಿಸಬೇಕಿದೆ’ ಎನ್ನುತ್ತಾರೆ ಜೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ದಾವಲಸಾಬ್ ನದಾಫ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT