ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಧರ್ಮದ ಹೆಚ್ಚುಗಾರಿಕೆ ತೋರುವ ಸಿನಿಮಾ’

ಚಿತ್ರ ನಿರ್ದೇಶಕ ಕೇಸರಿ ಹರವೂ ವಿಶ್ಲೇಷಣೆ
Published 26 ಮೇ 2024, 3:14 IST
Last Updated 26 ಮೇ 2024, 3:14 IST
ಅಕ್ಷರ ಗಾತ್ರ

ಕೊಪ್ಪಳ: 'ಸಿನಿಮಾಗಳಲ್ಲಿ ಬಹುಸಾಂಸ್ಕೃತಿಕ ಚಹರೆ, ಜಾತ್ಯತೀತ ನೀತಿಗಳನ್ನು ತೋರಿಸಿದರೂ ಅದು ಹಿಂದೂತ್ವದ ಮೂಗಿನ ನೇರಕ್ಕೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಚಲನಚಿತ್ರ ನಿರ್ದೇಶಕ ಕೇಸರಿ ಹರವೂ ಹೇಳಿದರು. ಆರ್ಥಿಕ ಕಾರಣ ಸೇರಿದಂತೆ ಹಲವು ಅಂಶಗಳಿಂದಾಗಿ ಬಹುಸಂಖ್ಯಾತ ವಾದ ಪೋಷಿಸುವ ಸಿನಿಮಾಗಳೇ ಬರುತ್ತಿವೆ ಎಂದು ವಿಶ್ಲೇಷಿಸಿದರು.

ಗೋಷ್ಠಿಯಲ್ಲಿ ‘ಸಿನಿಮಾ ಮಾಧ್ಯಮ’ ಕುರಿತು ಮಾತನಾಡಿದ ಅವರು ‘ಹಿಂದೂ ಸಿದ್ಧಾಂತವನ್ನೇ ನೆಚ್ಚಿಕೊಂಡು ಬಂದಿರುವ ಸಿನಿಮಾಗಳು ಬಾಲಿವುಡ್‌ನಲ್ಲಿ ಹೆಚ್ಚಾಗಿ ತೆರೆ ಕಂಡಿವೆ. ಅದರಲ್ಲೂ ಕಳೆದ ಇಪ್ಪತ್ತು ವರ್ಷಗಳಲ್ಲಿ ಒಂದೇ ಧರ್ಮದ ಹೆಚ್ಚುಗಾರಿಕೆ ಪೋಷಿಸುವ ಸಿನಿಮಾಗಳು ಬಿಡುಗಡೆ ಆಗಿವೆ’ ಎಂದು ಹೇಳಿದರು.

ಪ್ರಭಾವ: ‘ಸಂವಿಧಾನವನ್ನು ಕೇಸರೀಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ನ್ಯಾಯಾಂಗದಲ್ಲೂ ಹಿಂದೂತ್ವ ಪ್ರಭಾವ ಬೀರುತ್ತಿದೆ’ ಎಂದು ಹೈಕೋರ್ಟ್‌ ವಕೀಲ ಎಸ್.ಬಾಲನ್ ಅಸಮಾಧಾನ ವ್ಯಕ್ತಪಡಿಸಿದರು.

‘ವರ್ತಮಾನದಲ್ಲಿ ಧರ್ಮ ರಾಜಕಾರಣ’ ಕುರಿತ ಗೋಷ್ಠಿಯಲ್ಲಿ ‘ನ್ಯಾಯ ವ್ಯವಸ್ಥೆ’ ಕುರಿತು ಮಾತನಾಡಿ ‘ನ್ಯಾಯಾಧೀಶರು ವೇದ, ಶ್ರುತಿ, ಉಪನಿಷತ್ತು, ರಾಮಾಯಣ, ಮಹಾಭಾರತದ ಕಡೆ ನೋಡಿ ತೀರ್ಪು ಕೊಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಶಿಕ್ಷಣ ವ್ಯವಸ್ಥೆ’ ಕುರಿತು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮಾತನಾಡಿ ‘ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಉಳಿಸಿಕೊಳ್ಳದಿದ್ದರೆ ಸಂವಿಧಾನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು. ಸಾಹಿತಿ ಮಹಾಂತೇಶ ಮಲ್ಲನಗೌಡ, ಪತ್ರಕರ್ತ ರಾಜಾಭಕ್ಷಿ, ಆನಂದ ಸಿಂಗಾಣಿ, ಸಲೀಮಾ ಜಾನ್ ಉಪಸ್ಥಿತರಿದ್ದರು. ಜೀವನಸಾಬ್ ಬಿನ್ನಾಳ ನಿರೂಪಿಸಿದರು.

ರಹಿಮಾನವ್ವ ಕಲ್ಮನಿ,ಪಿ.ಬಿ.ಧುತ್ತರಗಿ ಸಾಂಸ್ಕೃತಿಕ ವೇದಿಕೆಯಲ್ಲಿ ಆಯೋಜಿಸಿದ್ದ ಬದುಕು ಹಾಡು ಗೋಷ್ಠಿಯಲ್ಲಿ ಮೈಸೂರಿನ ರಂಗಕರ್ಮಿ ಜನಾರ್ದನ (ಜನ್ನಿ) ಮಾತನಾಡಿದರು.

ಫಕ್ಕೀರಪ್ಪ ವಜ್ರಬಂಡಿ, ಮಹಾಂತೇಶ ಕೊತಬಾಳ, ಹೊನ್ನಪ್ಪ ಮರಿಯಮ್ಮನವರ, ಜ್ಯೋತಿ ಹಿಟ್ನಾಳ ಉಪಸ್ಥಿತರಿದ್ದರು. ಬಾಳಪ್ಪ ವೀರಾಪುರ, ಮಂಜುಳಾ ಸೋಮನಾಳ ಸಂಯೋಜಿಸಿದರು‌.

ಕೊನೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅರುಣಾ ನರೇಂದ್ರ, ಪತ್ರಕರ್ತ ಸಿರಾಜ್‌ ಬಿಸರಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಶೀಲಾ ಹಾಲ್ಕುರಿಕೆ ಹಾಗೂ ನಾಗರಾಜ ಡೊಳ್ಳಿನ ಸಂಯೋಜನೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT