ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | 2025ಕ್ಕೆ ಕ್ಷಯಮುಕ್ತ ಜಿಲ್ಲೆಯ ಗುರಿ: ನಲಿನ್ ಅತುಲ್

Published 29 ಮಾರ್ಚ್ 2024, 6:43 IST
Last Updated 29 ಮಾರ್ಚ್ 2024, 6:43 IST
ಅಕ್ಷರ ಗಾತ್ರ

ಕೊಪ್ಪಳ: ‘ಮುಂದಿನ ವರ್ಷದ ವೇಳೆಗೆ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಮಾಡುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ವತಿಯಿಂದ ನಗರದಲ್ಲಿ ಬುಧವಾರ ನಡೆದ ವಿಶ್ವ ಕ್ಷಯರೋಗ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಕ್ಷಯರೋಗದ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ರೋಗದ ಪತ್ತೆ ಹಾಗೂ ಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಅರಿವು ಮತ್ತು ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ. ಕ್ಷಯರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ರೋಗಿಗೆ ಸೂಕ್ತ ಚಿಕಿತ್ಸೆ ನೀಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿಎಚ್‌ಒ ಡಾ. ಲಿಂಗರಾಜು ಟಿ. ಮಾತನಾಡಿ, ‘ಕ್ಷಯರೋಗ ಅಪೌಷ್ಠಿಕತೆಯಿಂದ ಬಳಲುತ್ತಿರುವವರಲ್ಲಿ ಕಂಡುಬರುತ್ತದೆ. ಅಂತಹ ಜನರನ್ನು ಗುರುತಿಸಿ ಕ್ಷಯ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕು. ಚಿಕಿತ್ಸೆ ಪಡೆಯುವ ಕ್ಷಯ ರೋಗಿಗಳಿಗೆ ಚಿಕಿತ್ಸೆ ಮುಗಿಯುವವರೆಗೆ ಪೌಷ್ಠಿಕ ಆಹಾರಕ್ಕಾಗಿ ಪ್ರತಿ ತಿಂಗಳು ₹500 ಇಲಾಖೆಯಿಂದಲೇ ನೀಡಲಾಗುತ್ತದೆ. ಇಲಾಖೆ ಈ ಯೋಜನೆಯ ಬಗ್ಗೆಯೂ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಶಶಿಧರ ಎ. ಮಾತನಾಡಿ,‘ಕ್ಷಯರೋಗವು ಮೈಕ್ರೊ ಬ್ಯಾಕ್ಟಿರಿಯಂ ಟ್ಯೂಬರ್‌ಕ್ಯೂಲೋಸಿಸ್ ಎಂಬ ಸೂಕ್ಷ್ಮಾಣುವಿನಿಂದ ರೋಗಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ಹೊರಬರುವ ಉಗುಳಿನಿಂದ ಹರಡುತ್ತದೆ’ ಎಂದು ಹೇಳಿದರು.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಪ್ರಕಾಶ ಕೆ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ರವೀಂದ್ರನಾಥ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಪ್ರಕಾಶ ಎಚ್., ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವೆಂಕಟೇಶ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಾಂಜಿನೇಯ, ಡಾ.ಗೌರಿಶಂಕರ, ಡಾ.ಆನಂದ ಗೋಟೂರು, ವೈದ್ಯಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಜನರಲ್ಲಿ ಪರೀಕ್ಷೆಯ ಜಾಗೃತಿ ಮೂಡಿಸಲು ವೈದ್ಯರ ಸಲಹೆ    ಪೌಷ್ಠಿಕ ಆಹಾರ ಪಡೆದುಕೊಳ್ಳಲು ಇಲಾಖೆಯಿಂದ ಮಾಸಿಕ ₹500 ಕ್ಷಯರೋಗ ನಿರ್ಮೂಲನೆಗೆ ಶ್ರಮಿಸಿದ ಸಿಬ್ಬಂದಿಗೆ ಸನ್ಮಾನ
ವರ್ಷದಿಂದ ವರ್ಷಕ್ಕೆ ಇಳಿಕೆ
ಜಿಲ್ಲೆಯಲ್ಲಿ 2023ನೇ ಸಾಲಿಗೆ ಸರ್ಕಾರಿ ವಲಯ 3090 ಖಾಸಗಿ ವಲಯ 506 ಸೇರಿ ಒಂದು ವರ್ಷಕ್ಕೆ 3596 ಕ್ಷಯರೋಗಿಗಳ ಪತ್ತೆಯ ಗುರಿ ಹೊಂದಲಾಗಿದೆ. ಸರ್ಕಾರಿ ವಲಯದಲ್ಲಿ 2748 ಮತ್ತು ಖಾಸಗಿ ವಲಯದಲ್ಲಿ 128 ಸೇರಿ ಒಟ್ಟು 2876 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ.ಶಶಿಧರ ಹೇಳಿದರು. 86 ಬಹುಔಷಧ ನಿರೋಧಕ ಕ್ಷಯ ರೋಗಿಗಳು ಹಾಗೂ 164 ಎಚ್.ಐ.ವಿ ಸೋಂಕಿತ ಟಿಬಿ ರೋಗಿಗಳು ಪತ್ತೆಯಾಗಿದ್ದು 2022ನೇ ಸಾಲಿಗೆ ಹೋಲಿಸಿದಾಗ 2023ನೇ ಸಾಲಿನಲ್ಲಿ ಕ್ಷಯರೋಗ ಪತ್ತೆಯ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT