ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯಿಂದ ಶೀಘ್ರ ನೀರು: ಶಾಸಕ ಕೆ. ರಾಘವೇಂದ್ರ

Published 8 ಜನವರಿ 2024, 14:04 IST
Last Updated 8 ಜನವರಿ 2024, 14:04 IST
ಅಕ್ಷರ ಗಾತ್ರ

ಅಳವಂಡಿ: ಈ ಭಾಗದ ಬಹುದಿನಗಳ ಬೇಡಿಕೆಯ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿಸಿ ₹88 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿ ಕೊನೆ ಹಂತದಲ್ಲಿದ್ದು ಶೀಘ್ರದಲ್ಲಿ ಈ ಏತನೀರಾವರಿ ಯೋಜನೆಯಿಂದ 8-10 ಸಾವಿರ ಎಕರೆ ನೀರಾವರಿ ಪ್ರದೇಶಕ್ಕೆ ನೀರು ಹರಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.

ಅಳವಂಡಿ ಜಿ.ಪಂ ವ್ಯಾಪ್ತಿಯಲ್ಲಿ ಕಂಪ್ಲಿ, ಅಳವಂಡಿ, ಕವಲೂರು, ಗುಡುಗೇರಿ,ಮುರ್ಲಾಪುರ, ಘಟ್ಟರಡ್ಡಿಹಾಳ, ಬೆಳಗಟ್ಟಿ, ಹಟ್ಟಿ, ಹೈದರ್ ನಗರ, ಕೇಸಲಾಪುರ ಹಾಗೂ ರಘುನಾಥನಹಳ್ಳಿ ಗ್ರಾಮಗಳಿಗೆ ಅಂದಾಜು ಮೊತ್ತ ₹ 9.87 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿ ನಿರ್ಮಾಣ ಹಾಗೂ ಸ್ಮಾರ್ಟ್‌ಕ್ಲಾಸ್ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಸ್ಮಾರ್ಟ್‌ ಕ್ಲಾಸ್‌ಗಳ ನಿರ್ಮಾಣ ಮಾಡಲಿದ್ದೇವೆ. ಕ್ಷೇತ್ರದಲ್ಲಿ ರಸ್ತೆ, ನೀರಾವರಿ, ಚೆಕ್ ಡ್ಯಾಂ ಹಾಗೂ ಕಾಲುವೆ ಅಭಿವೃದ್ಧಿ ಸೇರಿ ಅನೇಕ ರೀತಿಯ ಸೌಲಭ್ಯಗಳಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಳ್ಳೆಯ ಜನಪರ ಆಡಳಿತ ನಡೆಸುತ್ತಿದೆ. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದ ಅನ್ನಭಾಗ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಹಾಗೂ ಯುವನಿಧಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದ್ದೇವೆ ಎಂದು ತಿಳಿಸಿದರು.

ತುಂತುರು ನೀರಾವರಿ ಘಟಕ ವಿತರಣೆ: ಅಳವಂಡಿ ಗ್ರಾಮದಲ್ಲಿ ಕೃಷಿ ಸಿಂಚಾಯಿ ಯೋಜನೆಯಡಿ ಆಯ್ಕೆಗೊಂಡ ರೈತರಿಗೆ ಪೈಪ್‌ ಮತ್ತು ಸ್ಪಿಂಕ್ಲರ್‌ ಸೆಟ್‌ ಅನ್ನು ಇದೇ ಸಂದರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ವಿತರಣೆ ಮಾಡಿದರು.

ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಮುಖಂಡರಾದ ಭರಮಪ್ಪ, ವೆಂಕನಗೌಡ, ಬಾಲಚಂದ್ರನ, ಗಾಳೆಪ್ಪ, ಪ್ರಸನ್ನ, ತೋಟಪ್ಪ, ಪ್ರಕಾಶಸ್ವಾಮಿ, ಯಲ್ಲಪ್ಪ, ಗುರುಬಸವರಾಜ, ಅನ್ವರ್ ಗಡಾದ, ಮಹಾಂತೇಶ, ಹೊನ್ನಕೇರಪ್ಪ, ಭೀಮೇಶಪ್ಪ, ಪರಶುರಾಮ, ರಂಗಪ್ಪ, ಶಂಕರ, ರವಿ, ಅಕ್ಬರ್, ಕೃಷಿ ಇಲಾಖೆಯ ಸಹದೇವ ಯರಗುಪ್ಪ, ತಹಶೀಲ್ದಾರ್ ವಿಠಲ್ ಚೌಗಲೆ, ತಾ.ಪಂ.ಇಒ ದುಂಡೇಶ್ ತುರಾದಿ, ಟಿಎಚ್‌ಒ ರಾಮಾನುಂಜಯ, ಪಿಎಸ್ಐ ನಾಗಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT