ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಭ್ರಷ್ಟಾಚಾರಿ, ಅತ್ಯಾಚಾರಿಗಳ ಪಕ್ಷ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಪ್ರಸಾದ್‌ ವಾಗ್ದಾಳಿ
Published 27 ಏಪ್ರಿಲ್ 2024, 15:27 IST
Last Updated 27 ಏಪ್ರಿಲ್ 2024, 15:27 IST
ಅಕ್ಷರ ಗಾತ್ರ

ಕೊಪ್ಪಳ/ಗಂಗಾವತಿ: ‘ಹಿಂದಿನ ಹತ್ತು ವರ್ಷಗಳ ಆಡಳಿತದಲ್ಲಿ ಜನಪರ ಕೆಲಸ ಮಾಡದೇ ಮೀನು, ಮಾಂಸ, ಮಂಗಳಸೂತ್ರದ ಬಗ್ಗೆ ಮಾತನಾಡಿ ಜನರ ದಾರಿ ತಪ್ಪಿಸುತ್ತಿರುವ ಬಿಜೆಪಿ ಭ್ರಷ್ಟಾಚಾರಿ, ಅತ್ಯಾಚಾರಿಗಳಿಂದ ಕೂಡಿದ ಪಕ್ಷವಾಗಿದೆ’ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಭಯದ ವಾತಾವರಣದಲ್ಲಿ ಇಲ್ಲ. ನಾವು ಎಂದೂ ಧರ್ಮ ಆಧಾರಿತ ರಾಜಕಾರಣ ಮಾಡಿಲ್ಲ. ಬಿಜೆಪಿ ಮಾತ್ರ ಇದೆಲ್ಲವನ್ನೂ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣೆಯಲ್ಲಿ 400 ಸ್ಥಾನಗಳನ್ನು ಕೊಡಿ ಎಂದು ಕೇಳುತ್ತಿದ್ದಾರೆ. ದೇಶದ ಸಂವಿಧಾನವನ್ನೇ ಬದಲಿಸಲು ಹೊರಟ ಇವರಿಗೆ ಮತ ಕೇಳುವ ಹಕ್ಕು ಇದೆಯೇ, ಬಿಜೆಪಿ ಹೇಳಿಕೊಳ್ಳುವ ಅಮೃತ ಕಾಲ ಇದಲ್ಲ. ಇದು ಅನ್ಯಾಯದ ಕಾಲ’ ಎಂದರು.

‘ದೇಶದಲ್ಲಿಯೇ ಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ನಾವು ನಮ್ಮ ಪಾಲಿನ ಹಕ್ಕು ಕೇಳಿದ್ದೇವೆ. ಬರ ಪರಿಹಾರದ ಹಣ ಕೇಂದ್ರ ಬಿಡುಗಡೆ ಮಾಡಿದ್ದು ಅಲ್ಲ. ನಾವು ಸುಪ್ರೀಂ ಕೋರ್ಟ್‌ ಹೋರಾಟ ಮಾಡಿದ್ದಕ್ಕೆ ಆರಂಭಿಕ ಯಶಸ್ಸು ಲಭಿಸಿದೆ’ ಎಂದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಸದ್ಯದ ಸ್ಥಿತಿಯಲ್ಲಿ ಲೋಕಸಭಾ ಚುನಾವಣೆ ಮತ್ತು ದೇಶದ ವಿಚಾರವೇ ಮುಖ್ಯ. ಮೊದಲು ಸಂವಿಧಾನ ಉಳಿದರೆ ಎಲ್ಲವೂ ಉಳಿದಂತೆ’ ಎಂದರು.

ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ, ಮುಖಂಡರಾದ ಎಸ್.ಬಿ ನಾಗರಳ್ಳಿ, ಜುಲ್ಲು ಖಾದ್ರಿ, ರಾಜಶೇಖರ ಸಿಂಧನೂರು, ಎಚ್.ಎನ್ ಬಡಿಗೇರ, ಅಮರೇಶ ಕರಡಿ ಪಾಲ್ಗೊಂಡಿದ್ದರು.

ಗಂಗಾವತಿ ವರದಿ: ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಕುರಿತು ಕೇಳಲಾದ ಪ್ರಶ್ನೆಗೆ ‘ತಪ್ಪು ಮಾಡಿದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಯಾವುದೇ ಜಾತಿ ವಿಚಾರ ಬರುವುದಿಲ್ಲ, ಓಲೈಕೆ ರಾಜಕಾರಣ ಪ್ರಶ್ನೆಯೇ ಇಲ್ಲ’ ಎಂದರು.

ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್ ಶ್ರೀನಾಥ, ರಾಜಶೇಖರ ಮುಸ್ಟೂರು, ಪರಮೇಶಪ್ಪ ಇ, ರಾಘವೇಂದ್ರ ಸಾಣಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT