ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೌಲಭ್ಯ ಪಡೆಯಲು ಜಾಗೃತರಾಗಲು ಕರೆ

ಪಿಂಜಾರ, ನದಾಫ್‌ ಸಮುದಾಯದ ಪದಾಧಿಕಾರಿಗಳ ಪದಗ್ರಹಣ
Published 10 ಮಾರ್ಚ್ 2024, 4:16 IST
Last Updated 10 ಮಾರ್ಚ್ 2024, 4:16 IST
ಅಕ್ಷರ ಗಾತ್ರ

ಕೊಪ್ಪಳ: ‘ಭಾಷೆ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಾದ ನಮಗೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಂದ ಅನುದಾನ ಕೊಡಿಸಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪಿಂಜಾರ ಸಮುದಾಯವರಿಗೆ ಮೀಸಲಾತಿ ನೀಡಬೇಕು. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಜಾಗೃತರಾಗಬೇಕು’ ಎಂದು ನದಾಫ್, ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಎಚ್.ಜಲೀಲಸಾಬ್ ಹೇಳಿದರು.

ನಗರದಲ್ಲಿ ಶನಿವಾರ ಶಿವಮೊಗ್ಗದ ರಾಜ್ಯ ನದಾಫ್/ ಪಿಂಜಾರ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,‘ಮೂರು ದಶಕ ಕಳೆದರೂ ನಮ್ಮ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಲ್ಲ. ಹಿಂದೆ ಮಾಡಿದ ತಪ್ಪು ಮತ್ತೆ ಮುಂದೆ ಮಾಡಬಾರದು. ಪಿಂಜಾರರು ಪ್ರವರ್ಗ-1ರಲ್ಲಿದ್ದೇವೆ ಎನ್ನುವ ವಿಚಾರ ಅಧಿಕಾರಿಗಳಿಗೇ ಗೊತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಒಟ್ಟು ಅನುದಾನದಲ್ಲಿ ನಮ್ಮ ಸಮುದಾಯಕ್ಕೂ ಪಾಲು ನೀಡಬೇಕು.  ನಮ್ಮ ಸಮುದಾಯದ ಜನರಿಗೆ ಸರಿಯಾಗಿ ಮಾಹಿತಿಯಿಲ್ಲದೆ ಪಿಂಜಾರ ಎಂದು ನಮೂದಿಸದೇ ಮುಸ್ಲಿಂ ಎಂದು ಬರೆಯಿಸಲಾಗಿದೆ. ಇದರಿಂದಾಗಿ ಯಾವ ರೀತಿಯಿಂದಲೂ ನಮಗೆ ಉತ್ತಮ ಸ್ಥಾನಮಾನ ಲಭಿಸುತ್ತಿಲ್ಲ. ರಾಜ್ಯಮಟ್ಟದಲ್ಲಿ ಮುಸ್ಲಿಂ ಮತ್ತು ಪಿಂಜಾರ ಸಮಾಜದವರು ಒಗ್ಗಟ್ಟಾಗಿಲ್ಲ. ತಳಮಟ್ಟದಲ್ಲಿ ಒಗ್ಗಟ್ಟಾಗಿದ್ದೇವೆ’ ಎಂದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ,‘ಅಲ್ಪಸಂಖ್ಯಾತರಿಗೆ ನಮ್ಮ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಸರ್ಕಾರದ ಸೌಲಭ್ಯ ಸಿಗದ ಜಾತಿಗಳಿಗೆ ಸೌಲಭ್ಯ ಒದಗಿಸಲು ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಮಾಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಂತರಾಜ್ ವರದಿ ಸಹಕಾರಿಯಾಗಲಿದೆ. ಎಲ್ಲರನ್ನೂ ಸಮಾನವಾಗಿ ಕಂಡಾಗ ಮಾತ್ರ ಸಮ ಸಮಾಜ ನಿರ್ಮಾಣದ ಬಸವಣ್ಣನವರ ಆಶಯ ಸಾಕಾರಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಕಾಸೀಂಅಲಿ ಮುದ್ದಾಬಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಸಂಘದ ಮಹಿಳಾ ಘಟಕದ ನಿಕಟ ಪೂರ್ವ ಜಿಲ್ಲಾಧ್ಯಕ್ಷೆ ರೇಷ್ಮಾ ಖಾಜಾವಲಿ, ನೂತನ ಜಿಲ್ಲಾಧ್ಯಕ್ಷೆ ಸಲ್ಮಾ ಜಹಾನ್, ಸಮಾಜದ ಮುಖಂಡ ಬಾಷು ಸಾಬ್ ಖತೀಬ್, ಸರ್ದಾರ ಗಲ್ಲಿ ಮುಸ್ಲಿಂ ಪಂಚ ಕಮಿಟಿಯ ಅಧ್ಯಕ್ಷ ಖಾದರ್ ಸಾಬ್ ಕುದ್ರಿಮೋತಿ, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಮುಖಂಡರಾದ ಮಾನ್ವಿ ಪಾಷಾ, ಕಾಟನ್ ಪಾಷಾ, ಅಸ್ಮಾನ ಸಾಬ್ ನದಾಫ್, ರಿಯಾಜ್ ಕುದ್ರಿಮೋತಿ, ಫಕ್ರುಸಾಬ್ ಚುಕ್ಕನಕಲ್,  ಫಾತೀಮಾ ಬೇಗಂ, ಕಾಸೀಂಸಾಬ್ ಸಂಕನೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕುರಾನ್ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೂತನ ಪದಾಧಿಕಾರಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ ಅತಿಥಿಗಳಿಂದ ಕ್ಯಾಲೆಂಡರ್ ಬಿಡುಗಡೆ

ಯಾವುದೇ ಸಮುದಾಯದವಾದರೂ ಒಗ್ಗಟ್ಟು ಇದ್ದಾಗ ಮಾತ್ರ ಅಧಿಕಾರ ಸಿಗುತ್ತದೆ. ಅಧಿಕಾರ ಸಿಕ್ಕಾಗಲಷ್ಟೇ ಸಮಾಜದ ಪ್ರಗತಿ ಸಾಧ್ಯ

-ಕೆ.ಎಂ.ಸೈಯ್ಯದ್ ಸೈಯದ್‌ ಫೌಂಡೇಷನ್‌ ಅಧ್ಯಕ್ಷ

‘ಸಿಎಂ ಭೇಟಿಗೆ ಅವಕಾಶ ಕೊಡಿಸಿ’

ನಮ್ಮ ಸಮಾಜದ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿಡಬೇಕಾಗಿದೆ. ಹತ್ತು ತಿಂಗಳಿಂದ ಪ್ರಯತ್ನ ಮಾಡಿದರೂ ಅವಕಾಶ ಲಭಿಸಿಲ್ಲ’ ಎಂದು  ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಖಲೀಲಸಾಬ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಹಿಟ್ನಾಳ ‘ಮುಖ್ಯಮಂತ್ರಿ ಜೊತೆ ಚರ್ಚಿಸಲು ನಿಮಗೆ ಅವಕಾಶ ಕೊಡಿಸುವೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT