ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಹೊದ್ದ ಹೊಲಗಳ ಮಧ್ಯೆ ಚರಗದ ಹಬ್ಬ

ಟಂ ಟಂ, ಕಾರು, ಟ್ರ್ಯಾಕ್ಟರ್‌ಗಳಲ್ಲಿ ಹೊಲಗಳಿಗೆ ತೆರಳಿದ ರೈತರು
Last Updated 3 ಜನವರಿ 2022, 4:50 IST
ಅಕ್ಷರ ಗಾತ್ರ

ಕುಷ್ಟಗಿ: ಎಳ್ಳ ಅಮಾವಾಸ್ಯೆ ಹಬ್ಬವನ್ನು ತಾಲ್ಲೂಕಿನಲ್ಲಿಯ ರೈತರು ಮತ್ತು ಅವರ ಕುಟುಂಬದವರು ಸಡಗರದೊಂದಿಗೆ ಆಚರಿಸಿದರು.

ಆಧುನಿಕತೆಯ ಭರಾಟೆ ನಡುವೆಯೂ ಚರಗ ಚೆಲ್ಲುವ ಸಂಭ್ರಮಕ್ಕೆ ಯಾವುದೇ ಕೊರತೆಯಾಗದ ರೀತಿಯಲ್ಲಿ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದು ಕಂಡುಬಂದಿತು.

ಕಪ್ಪು (ಎರೆ) ಜಮೀನುಗಳು ಇರುವಲ್ಲಿ ಸಂಭ್ರಮ ಹೆಚ್ಚಾಗಿತ್ತು. ಕುಟುಂಬದವರು, ಸ್ನೇಹಿತರು, ಬಂಧು ಬಾಂಧವರೊಡನೆ ಹೊಲಗಳಿಗೆ ವಾಹನಗಳು, ಬೈಕ್‌ಗಳಲ್ಲಿ ಖುಷಿಯಿಂದ ತೆರಳಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿಯೇ ಎತ್ತು ಮತ್ತು ಚಕ್ಕಡಿಯ ಸಂಖ್ಯೆ ತೀರಾ ಕಡಿಮೆಯಾಗಿದ್ದು ಕಾರು, ಟಂ ಟಂ, ಟ್ರ್ಯಾಕ್ಟರ್‌ಗಳದ್ದೇ ಭರಾಟೆ ಇತ್ತು. ಅಪರೂಪಕ್ಕೆ ಸಿಂಗಾರೊಂಡ ಎತ್ತುಗಳು ಮತ್ತು ಚಕ್ಕಡಿಗಳು ಕಂಡುಬಂದವು.

ಈ ಬಾರಿ ಹೊಲಗಳಲ್ಲಿ ಹಿಂಗಾರಿ ಬಿಳಿಜೋಳ, ಕಡಲೆ ಮತ್ತಿತರೆ ಬೆಳೆಗಳು ಭರ್ಜರಿಯಾಗಿದ್ದು ಹೊಲಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವುದು ಜನರ ಭಕ್ತಿಭಾವ ಸಮರ್ಪಣೆಗೆ ಮತ್ತಷ್ಟೂ ಪ್ರೇರಣೆ ಒದಗಿಸಿತು. ಹೊಲದಲ್ಲಿನ ಬನ್ನಿ ಮರಗಳಿಗೆ ಸೀರೆ ತೊಡಿಸಿ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿ ತಾವು ತಂದಿದ್ದ ತರಹೇವಾರಿ ತಿನಿಸುಗಳ ನೈವೇದ್ಯ ಸಮರ್ಪಿಸಿದರು. ನಂತರ ಜಮೀನಿನ ಸುತ್ತ ಸಂಪ್ರದಾಯದಂತೆ ಚರಗ ಚೆಲ್ಲುವ ಸಂಪ್ರದಾಯವನ್ನು ನೆರವೇರಿಸುವ ಮೂಲಕ ಭೂತಾಯಿಗೆ ಭಕ್ತಿಯ ಸೇವೆ ಸಲ್ಲಿಸಿದರು.ಬಂಧುಗಳಷ್ಟೇ ಅಲ್ಲದೆ ದಾರಿಯಲ್ಲಿ ಹೋಗುತ್ತಿರುವವರನ್ನೂ ಆದರದಿಂದ ಬರಮಾಡಿಕೊಂಡು ಅವರಿಗೂ ಖಡಕ್‌ ರೊಟ್ಟಿ, ಬದನೆಕಾಯಿ ಇತರೆ ಪಲ್ಯೆ, ಶೇಂಗಾ, ಎಳ್ಳು ಹೋಳಿಗೆ ಬಾಯೂರಿಸುವ ರೀತಿಯಲ್ಲಿದ್ದ ಮತ್ತಿತರೆ ಖಾದ್ಯಗಳನ್ನು ಉಣಬಡಿಸುವ ಮೂಲಕ ಆತಿಥ್ಯ ನೀಡಿ ಪುನೀತರಾಗಿದ್ದು ವಿಶೇಷವಾಗಿತ್ತು.

ಹಿಂದಿನ ವರ್ಷಗಳಿಗಿಂತಲೂ ಈ ಬಾರಿ ಭೂಮಿ ಹಸಿರುಹೊದ್ದು ನಿಂತಿವೆ. ಕಡಲೆ ಕಾಯಿಕಟ್ಟಿದೆ, ಜೋಳ ಹಾಲುಗಾಳು ಇದೆ. ಇತರೆ ಬೆಳೆಗಳೂ ಚೆನ್ನಾಗಿವೆ. ಹಾಗಾಗಿ ಎಳ್ಳ ಅಮಾವಾಸ್ಸೆ ಆಚರಿಸುವುದಕ್ಕೆ ಬಹಳಷ್ಟು ಖುಷಿಯಾಗುತ್ತಿದೆ ಎಂದು ತಳುವಗೇರಾದ ಶರಣಗೌಡ ಪಾಟೀಲ ಇತರರು ಸಂತಸ ವ್ಯಕ್ತಪಡಿಸಿದರು. ರೈತರ ಬದುಕು ಬೇವು ಬೆಲ್ಲದಂತೆ ಸುಖ ದುಃಖಗಳ ಮಿಶ್ರಣ ಹಾಗಾಗಿ ಬೆಳೆ ಹೇಗೇ ಇದ್ದರೂ ಭೂಮಿತಾಯಿ ಸ್ಮರಣೆ ನಿಲ್ಲುವುದಿಲ್ಲ. ಇದ್ದುದುರಲ್ಲಿಯೇ ತೃಪ್ತಿಯ ಜೀವನ ಸವೆಸಬೇಕಿದೆ ಎಂದು ಟೆಂಗುಂಟಿಯ ಹಿರಿಯರಾದ ರೈತ ಹನುಮಗೌಡ ಅನುಭವ ಹಂಚಿಕೊಂಡರು. ಪಟ್ಟಣದ ಜಮೀನುಗಳಲ್ಲಿಯೂ ಈ ಬಾರಿ ಚರಗ ಚೆಲ್ಲುವ ವಿವಿಧ ರೀತಿಯ ಖಾದ್ಯ ಮೆಲ್ಲುವ ಸಂಭ್ರಮದಲ್ಲಿ ಬಹಳಷ್ಟು ಜನರು ಪಾಲ್ಗೊಂಡಿದ್ದರು.

ದಾರಿಗುಂಟ ನೂರಾರು ಸಂಖ್ಯೆಯಲ್ಲಿ ಜಮೀನುಗಳಲ್ಲಿ ಬೀಡು ಬಿಟ್ಟಿದ್ದು ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT