ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ ದರ್ಶನಕ್ಕೆ ಬಂದಿದ್ದ ಉತ್ತರ ಭಾರತೀಯರು ಮತ್ತು ಸ್ಥಳೀಯರ ನಡುವೆ ಗಲಾಟೆ

ಪ‍್ರವಾಸಿಗರ ಮೇಲೆ ಹಲ್ಲೆ
Published 2 ಜನವರಿ 2024, 19:53 IST
Last Updated 2 ಜನವರಿ 2024, 19:53 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಅಂಜನಾದ್ರಿ ಸೇರಿದಂತೆ ಸುತ್ತಮುತ್ತಲಿನ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಬಂದಿದ್ದ ಉತ್ತರ ಭಾರತದ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಮಂಗಳವಾರ ರಾತ್ರಿ ಗಲಾಟೆ ನಡೆದಿದೆ.

ಬಸವನ ದುರ್ಗಾ (ಕೊರಮ್ಮ ಕ್ಯಾಂಪ್) ಸಮೀಪ ಈ ಘಟನೆ ಜರುಗಿದೆ. ನಾಲ್ಕು ಬಸ್‌ಗಳಲ್ಲಿ ಬಂದಿದ್ದ ಪ್ರವಾಸಿಗರು ಸಂಚಾರ ಮಾಡುತ್ತಿದ್ದ ಬಸ್‌ ಕೇಬಲ್‌ಗೆ ಬಡಿದು ತುಂಡಾಗಿದ್ದು ಗಲಾಟೆಗೆ ಮೂಲ ಕಾರಣ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಕೇಬಲ್‌ ತುಂಡಾಗಿದ್ದರಿಂದ ಹಣ ಕೊಡಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದು ಸ್ಥಳೀಯರು ಬಸ್‌ಗಳಿಗೆ ಕಲ್ಲು ಎಸೆದಿದ್ದರಿಂದ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಕೆಲ ಪ್ರವಾಸಿಗರ ಮೇಲೆ ಹಲ್ಲೆಯೂ ಆಗಿದೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ರಾಮಕುಮಾರ್ ಹಾಗೂ ಮೋನು ಎನ್ನುವವರ ತಲೆಗೆ ಗಾಯಗಳಾಗಿದ್ದು ಅವರಿಗೆ ಗಂಗಾವತಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಘಟನೆಯನ್ನು ಖಂಡಿಸಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಪ್ರವಾಸಿಗರು ನಮಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಪೊಲೀಸ್ ಠಾಣೆಯೊಳಗೆ ಹೋಗಿದ್ದರು. ಅವರನ್ನು ಪೊಲೀಸರು ಹೊರಗಡೆ ಕಳಿಸಿದರು.

‘ನಮ್ಮ ಮೇಲೆ ಯಾಕೆ ಹಲ್ಲೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಸ್ಥಳೀಯರು ಬಸ್‌ಗೆ ಕಲ್ಲು ಎಸೆದರು. ಬಳಿಕ ಹಲ್ಲೆ ಮಾಡಿದರು. ಕೆಲವರು ನಮ್ಮ ಬಳಿಯಿದ್ದ ಹಣ ಕಿತ್ತುಕೊಂಡರು’ ಎಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಪ್ರವಾಸಿಗರೊಬ್ಬರು ಆರೋಪಿಸಿದರು.

ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಗಂಗಾವತಿ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ‘ಉತ್ತರ ಪ್ರದೇಶದಿಂದ ಬಂದ ಪ್ರವಾಸಿಗರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT