ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಸಾಮಾನ್ಯ ಜನರ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ: ಇಕ್ಬಾಲ್‌ ಅನ್ಸಾರಿ
Last Updated 14 ಫೆಬ್ರುವರಿ 2021, 3:28 IST
ಅಕ್ಷರ ಗಾತ್ರ

ಗಂಗಾವತಿ: ‘ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರೈತ ವಿರೋಧಿ ಕಾಯ್ದೆಗಳ ಮೂಲಕ ಕೇಂದ್ರ ಸರ್ಕಾರ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಆರೋಪಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪಕ್ಷದ ನಗರ ಹಾಗೂ ಗ್ರಾಮೀಣ ಘಟಕ ವತಿಯಿಂದ ನಗರದ ಸಿಬಿಎಸ್‌ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದವರೆಗೆ ಹಮ್ಮಿಕೊಂಡಿದ್ದ ಎತ್ತಿನ ಬಂಡಿ ಪ್ರತಿಭಟನಾ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

‘ಇದು ಕೇಂದ್ರ ಸರ್ಕಾರದ ವಿರುದ್ಧದ ಹೋರಾಟ. ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ ಭರವಸೆಗಳನ್ನು ಈಡೇರಿಸಿಲ್ಲ. ದೇಶದಲ್ಲಿ ಗಲಭೆ ಸೃಷ್ಟಿ ಮಾಡುತ್ತಿದೆ’ ಎಂದು ದೂರಿದರು.

‘ಕೊರೊನಾಕ್ಕೂ ಮುಂಚೆ ಸಿಎಎ, ಎನ್‌ಆರ್‌ಸಿ ಎಂದು ದೇಶದಲ್ಲಿ ಗದ್ದಲಕ್ಕೆ ಕಾರಣವಾಯಿತು. ಈಗ ಡಿಸೇಲ್‌, ಪೇಟ್ರೊಲ್‌, ಅಡುಗೆ ಅನಿಲದ ಬೆಲೆ ಹೆಚ್ಚಳ ಮಾಡಿದೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುವ ಮೂಲಕ ಅದಾನಿ, ಅಂಬಾನಿ ಅವರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ. ಅಗತ್ಯ ವಸ್ತುಗಳ ಮೇಲೆ ಸೆಸ್‌ ಹಾಕುವ ಮೂಲಕ ಸಾಮಾನ್ಯ ಜನರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಬಡವರ ಕೂಲಿಯನ್ನು ಹೆಚ್ಚಳ ಮಾಡಲಿ’ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ,‘ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ಮೇಲೆ ಜನ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಆದರೆ, ಜನರ ನಿರೀಕ್ಷೆಯನ್ನು ಅವರು ಹುಸಿ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ಡಿಸೇಲ್, ಪೇಟ್ರೊಲ್‌ ಬೆಲೆ ಹೆಚ್ಚಳವಾದಾಗ ಬಿಜೆಪಿಯವರು ಪ್ರತಿಭಟನೆ ಮಾಡಿದರು. ಈಗ ಅವರದೇ ಸರ್ಕಾರ ಇದೆ. ಪ್ರತಿ ತಿಂಗಳು ಪೇಟ್ರೊಲ್‌, ಡಿಸೇಲ್‌ ಬೆಲೆ ಹೆಚ್ಚಳವಾಗುತ್ತಲೇ ಇದೆ. ಈಗ ಮೋದಿ ಭಕ್ತರು ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ನಾವೂ ರಾಮನ ಭಕ್ತರು. ಆದರೆ, ರಾಮಮಂದಿರ ನಿಧಿ ಸಂಗ್ರಹ ಅಭಿಯಾನ ಸರ್ಕಾರದ ಕೆಲಸ ಅಲ್ಲ. ಬಿಜೆಪಿಯವರು ಹುಳುಕುಗಳನ್ನು ಮುಚ್ಚಿಕೊಳ್ಳಲು ಈ ತರದ ಕೆಲಸ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

‘90 ದಿನಗಳಿಂದ ರೈತರು ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರಕ್ಕೆ ನಾಚಿಕೆಯಾಗಬೇಕು. ಅವರ ಬಗ್ಗೆ ಮಾತನಾಡಲು ತಯಾರಿಲ್ಲ. ರೈತರನ್ನು ಭಯೋತ್ಪಾದಕರಿಗೆ, ನಕ್ಸಲ್‌ಗಳಿಗೆ ಹೋಲಿಕೆ ಮಾಡುತ್ತಿದ್ದಾರೆ. ಹೋರಾಟ ಹತ್ತಿಕ್ಕಲು ಮುಂದಾಗುತ್ತಿದ್ದಾರೆ’ ಎಂದರು.

ಕಾಂಗ್ರೆಸ್‌ ಮುಖಂಡರಾದ ಲಲಿತರಾಣಿ, ಎಚ್‌.ಎಸ್‌.ಮುರಳೀಧರ, ಮಾಲಾಶ್ರೀ ಸಂದೀಪ್‌, ಲಿಂಗರಾಜಪ್ಪ, ಅಮರೇಶ ಗೋನಾಳ, ರಮೇಶ ನಾಯ್ಕ, ಸರ್ವೇಶ, ಮಹಮ್ಮದ್‌ ರಫಿ, ಶಾಮೀದ್‌ ಮನಿಯಾರ್‌, ರೆಡ್ಡಿ ಶ್ರೀನಿವಾಸ, ಅಂಬಣ್ಣ ನಾಯಕ, ಎಸ್‌.ಪಿ.ಖಾದ್ರಿ, ರಾಜು ನಾಯಕ ಹಾಗೂ ಫಕೀರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT