ಸೋಮವಾರ, ಸೆಪ್ಟೆಂಬರ್ 27, 2021
22 °C

ರಂಜಾನ್ | ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸಾಮೂಹಿಕ ಪ್ರಾರ್ಥನೆ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ದರ್ಗಾ ಮತ್ತು ಮಸೀದಿಗಳಲ್ಲಿ ಮುಂಬರುವ ರಂಜಾನ್ ಹಬ್ಬದ ಪ್ರಯುಕ್ತ ಪ್ರಾರ್ಥನೆ, ಹಾಗೂ ಸಭೆ ಕೈಗೊಳ್ಳುವುದನ್ನು ಮೇ 3ರವರೆಗೆ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಮಕ್ಬೂಲ್ ಪಾಷಾ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ಹಜ್ ಇಲಾಖೆ ಕಾರ್ಯದರ್ಶಿಗಳ ನಿರ್ದೇಶನದನ್ವಯ ಮುಂಬರುವ ರಂಜಾನ್ ಹಬ್ಬದ ಸಮಯದಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಂಜಾನ್ ಮಾಸಾಚರಣೆಯಲ್ಲಿ ಮಸೀದಿ ಹಾಗೂ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಪ್ರತಿ ದಿನದ 5 ಬಾರಿ ನಮಾಜಿನ ಜತೆಗೆ ಶುಕ್ರವಾರದ ಮತ್ತು ತರಾವೆ ನಮಾಜ್‍ನ್ನು ಸಹ ಮಸೀದಿ/ದರ್ಗಾಗಳಲ್ಲಿ ಮಾಡಬಾರದು.

ಧ್ವನಿವರ್ಧಕಗಳ ಮೂಲಕ ಪ್ರಾರ್ಥನೆ ಕುರಿತು ಸಾರ್ವಜನಿಕ ಮಾಹಿತಿ ನೀಡಬಾರದು. ಕಡಿಮೆ ಧ್ವನಿವರ್ಧಕದ ಮೂಲಕ ಅಜಾನ್ ಕೂಗುವುದು ಮತ್ತು ಮೌಜ್ಜನ್ ಅಥವಾ ಮಸೀದಿಯ ಪೇಶ್ ಇಮಾಮ್ ಉಪವಾಸದ (ರೋಜಾ) ಕುರಿತು ಆರಂಭ ಮತ್ತು ಮುಕ್ತಾಯಗೊಳ್ಳುವ ಬಗ್ಗೆ ಮಾತ್ರ ಹೇಳಬೇಕು. ಯಾವುದೇ ರೀತಿಯ ಸಾರ್ವಜನಿಕ ಪ್ರವಚನ ನೀಡಬಾರದು.

ಇಫ್ತಿಯಾರ್ ಕೂಟಗಳನ್ನು ಮಾತ್ತು ಸಾಮೂಹಿಕ ಭೋಜನ ಕೂಟ (ಸಹರಿ) ಆಯೋಜಿಸುವಂತಿಲ್ಲ. ಮಸೀದಿ ಮೊಹಲ್ಲಾಗಳಲ್ಲಿ ಯಾವುದೇ ರೀತಿಯ ತಂಪು ಪಾನೀಯ, ಜ್ಯೂಸ್, ಗಂಜಿ ವಿತರಿಸುವಂತಿಲ್ಲ. ಮಸೀದಿ ಮತ್ತು ದರ್ಗಾದ ಸುತ್ತ ಮುತ್ತ ಯಾವುದೇ ಉಪಹಾರದ ಅಂಗಡಿಗಳನ್ನು ಹಾಕುವುದನ್ನು ಸಹ ನಿಷೇಧಿಸಿದೆ.

ಇದಲ್ಲದೇ ರಂಜಾನ್ ಮಾಹೆಯ ನಮಾಜ್ ಹೆಸರಿನಲ್ಲಿ ಗುಂಪು ಸೇರುವಂತಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಸರ್ಕಾರವು ನೀಡಿದಂತಹ ಸೂಚನೆಗಳನ್ನು ಜಿಲ್ಲೆಯ ಮುಸ್ಲಿಂರು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ವಕ್ಫ್ ಮಂಡಳಿಯ ಸದಸ್ಯರಾದ ಆಸೀಫ್ ಅಲಿ ಮತ್ತು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ನೂರುದ್ಧೀನ್ ಖಾದ್ರಿ ಅವರು ಮನವಿ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು