ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ | ಸಿ.ಟಿ. ಸ್ಕ್ಯಾನ್‌ ಸೇವೆ ಸ್ಥಗಿತ: ರೋಗಿಗಳ ಪರದಾಟ

ನಿಯಮ ಮೀರಿ ಟೆಂಡರ್‌ ಪ್ರಕ್ರಿಯೆ: ನಿರ್ವಹಣೆ ಕಂಪನಿಗೆ ಲಕ್ಷಾಂತರ ಬಾಕಿ
Published 27 ಫೆಬ್ರುವರಿ 2024, 6:26 IST
Last Updated 27 ಫೆಬ್ರುವರಿ 2024, 6:26 IST
ಅಕ್ಷರ ಗಾತ್ರ

ಕುಷ್ಟಗಿ: ‘ಮಗಳಿಗೆ ಮೂರ್ಛೆರೋಗವಿದೆ. ವೈದ್ಯರು, ದೂರದ ಹುಬ್ಬಳ್ಳಿಗೆ ಹೋಗಿ ಸ್ಕ್ಯಾನ್‌ ಮಾಡಿಸಲು ಸೂಚಿಸಿದ್ದಾರೆ. ಒಂದೆಡೆ ಬಡತನ, ಇನ್ನೊಂದೆಡೆ ಬರ.. ಹೇಗೆ ಮಾಡುವುದು ಎಂಬ ಚಿಂತೆ ತಾಲ್ಲೂಕಿನ ಶಾಖಾಪುರದ ಅಂಬಣ್ಣ ತಳವಾರ ಅವರದ್ದು.

ತಾಯಿಗೆ ಅನಾರೋಗ್ಯ, ವೈದ್ಯರು ಹೊಟ್ಟೆ ಸ್ಕ್ಯಾನ್‌ ಮಾಡಬೇಕೆಂದಿದ್ದಾರೆ. ಖಾಸಗಿ ಕೇಂದ್ರಕ್ಕೆ ಹೋದರೆ ಸಾವಿರಾರು ರೂಪಾಯಿ ಖರ್ಚು. ಹೊಲದಲ್ಲಿ ಬೆಳೆ ಇಲ್ಲ. ಹಣ ಎಲ್ಲಿಂದ ತರಬೇಕು? ಇದು ತಾಲ್ಲೂಕಿನ ಚಳಗೇರಾದ ಹನುಮಗೌಡ ಅವರ ಅಳಲು.

ಇಲ್ಲಿಯ ನೂರು ಹಾಸಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 11 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದ ಕಂಪ್ಯೂಟೆಡ್ ಟೊಮೊಗ್ರಫಿ (ಸಿ.ಟಿ) ಸ್ಕ್ಯಾನಿಂಗ್‌ ಸೇವೆ, ಕಳೆದ ಮೂರು ವಾರದಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ಪರದಾಡುತ್ತಿರುವ ಬಡ ರೋಗಿಗಳು ಮತ್ತು ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಆರೋಗ್ಯ ಇಲಾಖೆಯ ಆಡಳಿತಾತ್ಮಕ ಬೇಜವಾಬ್ದಾರಿಯಿಂದ ಬಡವರಿಗೆ ಸರ್ಕಾರದ ಗುಣಮಟ್ಟದ ಸೇವೆ ಮರೀಚಿಕೆಯಾಗಿದೆ ಎಂಬ ಆರೋಪಗಳು ಕೇಳಿಬಂದವು.

₹3 ಕೋಟಿ ಖರ್ಚು: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಬಿಡುಗಡೆ ಮಾಡಿದ್ದ ಅಂದಾಜು ₹ 3 ಕೋಟಿ ಅನುದಾನದಲ್ಲಿ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್ ಸೇವೆ ಆರಂಭಿಸಲಾಗಿತ್ತು. ಅದರಿಂದ ಬಡವರಿಗೆ ಆಸ್ಪತ್ರೆಯಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನದ ಸೇವೆ ಲಭ್ಯವಾಗಿದ್ದರಿಂದ ಈ ಭಾಗದ ಜನರು ಖುಷಿ ಪಟ್ಟಿದ್ದರು. ಆದರೆ ಈಗ ಸೇವೆ ಸ್ಥಗಿತಗೊಂಡು, ಜನರು ಖಾಸಗಿ ಸ್ಕ್ಯಾನ್‌ ಕೇಂದ್ರಗಳಿಗೆ ಅಲೆಯುವಂತಾಗಿದ್ದು, ದುಬಾರಿ ಬೆಲೆ ತೆರುವಂತಾಗಿದೆ.

ಪಾವತಿಯಾಗದ ಬಾಕಿ: ಸಿ.ಟಿ ಸ್ಕ್ಯಾನ್‌ ಯಂತ್ರ ಸ್ಥಾಪಿಸಿದ ಆರೋಗ್ಯ ಇಲಾಖೆ ಮಾನವ ಸಂಪನ್ಮೂಲ ಸಹಿತ ಅದರ ನಿರ್ವಹಣೆಯ ಹೊಣೆಯನ್ನು 10 ವರ್ಷದ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ಬೆಂಗಳೂರಿನ ವಿಜಯಲಕ್ಷ್ಮಿ ಡಯಾಗ್ನಾಸ್ಟಿಕ್‌ ಸಂಸ್ಥೆಗೆ ವಹಿಸಿತ್ತು. ಕೇಂದ್ರದ ಒಳ ಆವರಣದ ಎಲ್ಲ ಸುಸಜ್ಜಿತ ವ್ಯವಸ್ಥೆಯನ್ನು ಲಕ್ಷಾಂತರ ಹಣದಲ್ಲಿ ಸ್ವತಃ ಸಂಸ್ಥೆಯೇ ಅಳವಡಿಸಿಕೊಂಡಿತ್ತು. ಆದರೆ ಸೇವೆ ಆರಂಭಗೊಂಡ 11 ತಿಂಗಳವರೆಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಸ್ಥೆಗೆ ನೀಡಬೇಕಿದ್ದ ಶುಲ್ಕದಲ್ಲಿ ಒಂದು ರೂಪಾಯಿ ಸಹ ನೀಡಿಲ್ಲ. ನಿರ್ವಹಣೆ ವೆಚ್ಚ ಮತ್ತು ಸಿಬ್ಬಂದಿ ಸಂಬಳ ಕೊಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಹಣ ಪಾವತಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆಗೆ ಪತ್ರ ಬರೆದ ಸಂಸ್ಥೆ ಅಲ್ಲಿಯವರೆಗೂ ಸೇವೆ ಒದಗಿಸಲು ಸಾಧ್ಯವಿಲ್ಲ ಎಂದೇ ಸ್ಪಷ್ಟಪಡಿಸಿ, ಫೆ. 1ರಿಂದ ಸೇವೆ ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಎಕ್ಸ್‌ ರೇ ಸಿಬ್ಬಂದಿ ಮೂಲಕ ಸಿ.ಟಿ ಸ್ಕ್ಯಾನ್ ಸೇವೆ ಆರಂಭಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅದರಂತೆ ಎರಡು ವಾರದ ಒಳಗೆ ಸೇವೆ ಪುನರಾರಂಭಗೊಳ್ಳಲಿದೆ
ಡಾ.ಟಿ.ಲಿಂಗರಾಜು ಜಿಲ್ಲಾ ಆರೋಗ್ಯ ಅಧಿಕಾರಿ
ಸಿ.ಟಿ. ಸ್ಕ್ಯಾನ್ ಸೇವೆ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದೆ. ಶೀಘ್ರ ಚಾಲನೆಗೊಳಿಸಲು ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು
ದೊಡ್ಡನಗೌಡ ಪಾಟೀಲ ಶಾಸಕ
ಆರೋಗ್ಯ ಇಲಾಖೆ ಎಡವಟ್ಟು: ಬಡವರಿಗೆ ಪೆಟ್ಟು
ಟೆಂಡರ್‌ ಕರೆಯುವ ಮೊದಲು ಆಯುಕ್ತರು ಜಿಲ್ಲಾಧಿಕಾರಿಯಿಂದ ಅನುಮೋದನೆ ಪಡೆಯುವುದು ಕಡ್ಡಾಯ. ಆದರೆ ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಸಿ.ಟಿ. ಸ್ಕ್ಯಾನ್‌ ಸೇವೆ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಗಾಳಿಗೆ ತೂರಿ ತರಾತುರಿಯಲ್ಲಿ ಕೇವಲ ಜಿಲ್ಲಾಧಿಕಾರಿ ಅನುಮೋದನೆ ಮಾತ್ರ ಪಡೆದು ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದ್ದರು. ಇಲಾಖೆ ಅನುಮತಿ ಪಡೆಯದ ಕಾರಣ ಅನುದಾನ ಬಿಡುಗಡೆಗೆ ಆರೋಗ್ಯ ಇಲಾಖೆ ಕೊಕ್ಕೆ ಹಾಕಿದ್ದರಿಂದ ಪೇಚಿಗೆ ಸಿಲುಕಿದ ಜಿಲ್ಲಾ ಆರೋಗ್ಯ ಇಲಾಖೆ ಮೊದಲಿನ ಟೆಂಡರ್‌ ಅನ್ನು ಸ್ಥಗಿತಗೊಳಿಸಿರುವುದು ಅಚ್ಚರಿಮೂಡಿಸಿದೆ. ಈ ಕುರಿತು ಸಂಪರ್ಕಿಸಿದ ‘ಪ್ರಜಾವಾಣಿ’ಗೆ ವಿವರಿಸಿದ ವಿಜಯಲಕ್ಷ್ಮಿ ಡಯಗ್ನೋಸ್ಟಿಕ್‌ ಸಂಸ್ಥೆಯ ಮುಖ್ಯಸ್ಥ ವೇಣುಗೋಪಾಲ ಅವರು ‘ಸಿಬ್ಬಂದಿಗೆ ವೇತನ ನೀಡುವುದಕ್ಕೆ ಸಮಸ್ಯೆಯಾಗಿದ್ದರಿಂದ ಹಣ ಬಿಡುಗಡೆಗೆ ಪತ್ರ ಬರೆಯಲಾಗಿತ್ತು. ಆದರೆ ಈಗ ಟೆಂಡರ್‌ ಒಪ್ಪಂದವನ್ನು ಸ್ಥಗಿತಗೊಳಿಸಿದ್ದಾರೆ. ಒಂದೇ ಪ್ಯಾಕೇಜ್‌ ಟೆಂಡರ್‌ ಪ್ರಕಾರ ಕೊಪ್ಪಳ ಜಿಲ್ಲೆಯ ನಾಲ್ಕೂ ಆಸ್ಪತ್ರೆಗಳ ಹೊಣೆ ನಮ್ಮ ಸಂಸ್ಥೆಗೆ ಸೇರಿತ್ತು. ಆದರೆ ಗಂಗಾವತಿ ಆಸ್ಪತ್ರೆ ಮತ್ತು ಕೊಪ್ಪಳ ಕಿಮ್ಸ್‌ನಲ್ಲಿನ ಸಿ.ಟಿ ಸ್ಕ್ಯಾನ್ ನಿರ್ವಹಣೆಯನ್ನೂ ನಮಗೆ ವಹಿಸಿರಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT