ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರುವ ಬೆಳೆ ಉಳಿಸಿಕೊಳ್ಳಲು ಕಸರತ್ತು

ಮಲ್ಲಾಪುರ, ಸಂಗಾಪುರ ಭಾಗದ ರೈತರಿಂದ ಕೊಪ್ಪಳದಲ್ಲಿ ಪ್ರತಿಭಟನೆ
Published 10 ಜನವರಿ 2024, 8:42 IST
Last Updated 10 ಜನವರಿ 2024, 8:42 IST
ಅಕ್ಷರ ಗಾತ್ರ

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಆನೆಗೊಂದಿ ಭಾಗ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಇಲ್ಲಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ಆರಂಭಿಸಿದ್ದು, ಇರುವ ಬೆಳೆಗಳನ್ನು ಉಳಿಸಿಕೊಳ್ಳಲು ತುಂಗಭದ್ರಾ ಜಲಾಶಯದಿಂದ ಎಡದಂಡೆ ವಿಜಯನಗರ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ತುಂಗಭದ್ರಾ ಎಡದಂಡೆ ವಿಜಯನಗರ ಕಾಲುವೆ ಡಿಸ್ಟ್ರಿಬ್ಯೂಟರ್​ 1ರಿಂದ 11ಎ ವ್ಯಾಪ್ತಿಯಲ್ಲಿ ಹಲವು ಬೆಳೆಗಳನ್ನು ಬೆಳೆಯಲಾಗಿದ್ದು, ನೀರು ಪೂರೈಕೆ ಮಾಡದ ಕಾರಣ ಇರುವ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಬರಗಾಲದಿಂದಾಗಿ ಮೊದಲೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗ ನೀರೂ ಇಲ್ಲವಾದರೆ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ ಎಂದು ರೈತರು ಹೇಳಿದರು.

ರಾಂಪುರ, ಮಲ್ಲಾಪುರ, ಸಂಗಾಪುರ, ಕೊರಮ್ಮಕ್ಯಾಂಪ್‌, ಗೂಗಿಬಂಡಿ, ಹನುಮನಹಳ್ಳಿ, ರಂಗಾಪುರ, ಕಡೇಬಾಗಿಲು ಸೇರಿದಂತೆ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

ಹುಲಿಗಿಯ ನೀರು ಬಳಕೆದಾರರ ಸಹಕಾರ ಸಂಘದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ರೈತರು ‘ಬೆಳಗಾವಿ ಅಧಿವೇಶನ ಸಮಯದಲ್ಲಿ ನಡೆದ ಸಭೆಯಲ್ಲಿ ನೀರು ಬಿಡುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಇದೇ 10ರಿಂದ ನೀರು ಹರಿಸುವುದಾಗಿಯೂ ತಿಳಿಸಿ ಈಗ ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

‘ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಂಧನೂರು ತಾಲ್ಲೂಕಿನಲ್ಲಿ ತಿಮ್ಮಾಪುರ ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿದ ಕಾರಣಕ್ಕಾಗಿ 0.20 ಟಿಎಂಸಿ ಅಡಿಯಷ್ಟು ನೀರು ನದಿಗೆ ಬಿಡಲಾಗಿದೆ. ಆದರೆ, ನಮ್ಮ ಭಾಗದಲ್ಲಿ ರೈತರಿಗಾಗಿ ಅಳಿದುಳಿದ ಬಾಳೆ, ತೆಂಗು ಹಾಗೂ ಹೂವಿನ ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಬಿಡಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಯಾಕೆ ಮೀನಮೇಷ ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಕುಡಿಯಲು ಅಗತ್ಯವಾಗಿ ಬೇಕಾಗುವಷ್ಟು ನೀರಿನ ಸಂಗ್ರವಿದೆ. ಈಗಾಗಲೇ ಬೇರೆ ಕಾಲುವೆಗಳಿಗೆ ಬಿಡುವುದಿಲ್ಲವೆಂದೂ  ತೀರ್ಮಾನಿಸಲಾಗಿದೆ. ನಮಗೆ ನಿತ್ಯ 65 ಕ್ಯುಸೆಕ್ಸ್‌ನಂತೆ 100 ದಿನ ನೀರು ಹರಿಸಿದರೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ನೀರು ಬಳಕೆದಾರರ ಸಂಘದ ಅಧ್ಯಕ್ಷ ಜನಾರ್ದನ ಹುಲಿಗಿ, ಮಲ್ಲಾಪುರ ಗ್ರಾಮದ ರೈತ ಗ್ಯಾನಪ್ಪ, ಗಾಳೆಪ್ಪ, ಗೋವಿಂದರೆಡ್ಡಿ, ಗೌರೀಶ ಬಾಗೋಡಿ, ರಾಮಗೌಡ ರಾಂಪೂರ, ಯಂಕಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT