ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ: ದೇಶಪ್ರೇಮ ಸಾರುವ ಕವಲೂರು ರಥೋತ್ಸವ ಇಂದು

Published 23 ಮೇ 2024, 5:57 IST
Last Updated 23 ಮೇ 2024, 5:57 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ಕವಲೂರು ಗ್ರಾಮದ ದುರ್ಗಾದೇವಿ ಹಾಗೂ ಪಾರ್ವತಿ ಪರಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ (ಮೇ 23) ಸಹಸ್ರಾರು ಭಕ್ತರ ಮಧ್ಯೆ ರಥೋತ್ಸವ ಜರುಗಲಿದೆ.

ದುರ್ಗಾದೇವಿಯನ್ನು ಆರಾಧಿಸುವಲ್ಲಿ ಕವಲೂರು ಗ್ರಾಮ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಐದು ದಿನಗಳ ಜಾತ್ರಾ ಮಹೋತ್ಸವ ನಡೆಯಲಿದೆ.

ಜಾತ್ರೆಯ ವಿಶೇಷತೆ ಏನೆಂದರೆ ಸಾಮಾನ್ಯವಾಗಿ ರಥೋತ್ಸವದ ಮೇಲೆ ಧಾರ್ಮಿಕ ಧ್ವಜ ಹಾರಿಸುವುದು ಸಾಮಾನ್ಯ. ಆದರೆ ಈ ಜಾತ್ರೆಯಲ್ಲಿ ದೇಶ ಪ್ರೇಮ ಸಾರುವ ರಾಷ್ಟ್ರ ಧ್ವಜವನ್ನು ರಥೋತ್ಸವದ ಮೇಲೆ ಹಾರಿಸಿ ರಾಷ್ಟ್ರಪ್ರೇಮ ಹಾಗೂ ಭಾವೈಕ್ಯವನ್ನು ಈ ಜಾತ್ರೆ ಸಾರುತ್ತಿದೆ.

ಗ್ರಾಮದ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಸೇರಿ ಆಚರಿಸುವ ಜಾತ್ರೆ ಇದಾಗಿದ್ದು,  ದುರ್ಗಾದೇವಿ ರಥೋತ್ಸವ ಪಂಚಕಳಸವನ್ನು ಹೊಂದಿದ್ದು, ಮದುವೆಯಾದ ನವ ದಂಪತಿ ದುರ್ಗಾದೇವಿ ಪಂಚ ಕಳಸದ ರಥೋತ್ಸವ ನೋಡಿದರೆ ಜೀವನದಲ್ಲಿ ಸುಖ, ಶಾಂತಿ ಸಿಗಲಿದೆ ಎಂಬ ನಂಬಿಕೆಯಿದೆ. ಹಾಗಾಗಿ ಸುತ್ತ ಮುತ್ತಲಿನ ಗ್ರಾಮಗಳ ನವ ದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.

ಜಾತ್ರೆಯ ಕಾರ್ಯಕ್ರಮಗಳು: ಮೇ 23‌ ಗುರುವಾರದಂದು ಬೆಳಿಗ್ಗೆ ದುರ್ಗಾದೇವಿಗೆ ಕ್ಷೀರಾಭಿಷೇಕ, ಪಾರ್ವತಿ ಪರಮೇಶ್ವರ ಅಭಿಷೇಕ ಕಾರ್ಯಕ್ರಮ, ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಸಂಜೆ ಪಾರ್ವತಿ ಪರಮೇಶ್ವರ ದೇವರ ಲಘು ರಥೋತ್ಸವ ಕಾರ್ಯಕ್ರಮ ಸಕಲ ವಾದ್ಯ ಮೇಳದೊಂದಿಗೆ ನಡೆಯಲಿದೆ. ನಂತರ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಗದಗ ಜಿಲ್ಲೆಯ ಅಣ್ಣಿಗೇರಿ ಗ್ರಾಮದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಬ್ದುಲ್ ಖಾದರ್ ನಡಕಟ್ಟಿನ ಕುರ್ಗಿ ಅವರು ದುರ್ಗಾದೇವಿಯ ಪಂಚ ಕಳಸ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಮುಂಡರಗಿ ಅನ್ನದಾನೇಶ್ವರ ಸ್ವಾಮೀಜಿ, ಮೈನಹಳ್ಳಿ ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕುಕನೂರಿನ ಮಹದೇವ ಸ್ವಾಮೀಜಿ, ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುಳೆದಗುಡ್ಡ ಕೋಟೆಕಲ್ಲಿನ ಒಪ್ಪತೇಶ್ವರ ಸ್ವಾಮೀಜಿ ಹಾಗೂ ಇತರರು ಭಾಗವಹಿಸಲಿದ್ದಾರೆ.

ಮೇ 24 ಶುಕ್ರವಾರ ದುರ್ಗಾದೇವಿ ಅಗ್ನಿಕುಂಡ ಹಾರುವ ಕಾರ್ಯಕ್ರಮ ಜರುಗಲಿದೆ. ಮೇ 28 ರಂದು ಮುತ್ತೈದೆಯರಿಂದ ದೇವರಿಗೆ ಉಡಿ ಕಾರ್ಯಕ್ರಮ ನಡೆಯಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

‘ಗ್ರಾಮದ ಎಲ್ಲಾ ಸಮುದಾಯದವರು ಸೇರಿ ಆಚರಿಸುವ ದುರ್ಗಾದೇವಿ ಜಾತ್ರೆಯು ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ರಥೋತ್ಸವದ ಮೇಲೆ ರಾಷ್ಟ್ರಧ್ವಜ ಹಾರಾಡಲಿದೆ ಇದು ಮೊದಲಿನಿಂದಲು ಬಂದ ಸಂಪ್ರದಾಯವಾಗಿದೆ’ ಎಂದು ಗ್ರಾಮದ ಮುಖಂಡ ಮಹಾಂತೇಶ ಸಿಂದೋಗಿಮಠ ಹೇಳಿದರು.

ದುರ್ಗಾದೇವಿಯ ಮೂರ್ತಿ
ದುರ್ಗಾದೇವಿಯ ಮೂರ್ತಿ
ರಥೋತ್ಸವದ ಮೇಲೆ ರಾಷ್ಟ್ರಧ್ವಜ ಹಾರಾಡುತ್ತಿರುವುದು
ರಥೋತ್ಸವದ ಮೇಲೆ ರಾಷ್ಟ್ರಧ್ವಜ ಹಾರಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT