ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಏರದ ಚುನಾವಣಾ ಕಾವು; ಬಿಜೆಪಿಯಲ್ಲಿ ಮಂಕು

ತಾಲ್ಲೂಕಿನಲ್ಲಿ ಕಾಣದ ಚುನಾವಣಾ ಪ್ರಚಾರದ ಭರಾಟೆ; ಕಾಂಗ್ರೆಸ್‌ ಪಕ್ಷದಲ್ಲಿ ಹುರುಪು
Published 15 ಏಪ್ರಿಲ್ 2024, 4:27 IST
Last Updated 15 ಏಪ್ರಿಲ್ 2024, 4:27 IST
ಅಕ್ಷರ ಗಾತ್ರ

ಕುಷ್ಟಗಿ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾನಕ್ಕೆ ಇನ್ನೂ ಮೂರು ವಾರ ಮಾತ್ರ ಬಾಕಿ ಉಳಿದಿದ್ದರೂ ತಾಲ್ಲೂಕಿನಲ್ಲಿ ಚುನಾವಣೆ ಪ್ರಚಾರ ಕಾವು ಮಾತ್ರ ಏರಿಲ್ಲ.

ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಎರಡು ದಿನಗಳಿಂದ ಜನರ ಮೈಮನಗಳಿಗೆ ತಂಪು ಹವೆ ಸೋಕಿ ಆಹ್ಲಾದತೆ ಸೃಷ್ಟಿಸಿದೆ. ದ್ಯಾಮವ್ವ ದೇವಿ ಜಾತ್ರೆ ನಿಮಿತ್ತ ಸಪ್ತಭಜನೆ ಆರಂಭಗೊಂಡಿದ್ದು ಪಟ್ಟಣದಲ್ಲಿ ಯಾವುದೇ ಮೂಲೆಗೆ ಹೋದರೂ ಧ್ವನಿವರ್ಧಕಗಳ ಮೂಲಕ ಈಗ ‘ಓಂ ನಮಃ ಶಿವಾಯ’ ಶಿವನಾಮ ಸಂಕೀರ್ತನೆ, ಜಪ ಹಗಲು ರಾತ್ರಿಯೂ ಮಾರ್ದನಿಸುತ್ತಿದೆ. ಆದರೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಭರಾಟೆ, ಮತಬೇಟೆಗೆ ಸಂಬಂಧಿಸಿದ ಲಕ್ಷಣಗಳು ಗೋಚರಿಸದಿರುವುದು ಚುನಾವಣೆ ಇದೆಯೊ ಇಲ್ಲವೊ ಎಂಬಷ್ಟರ ಮಟ್ಟಿಗೆ ರಾಜಕೀಯ ಚಟುವಟಿಕೆ ತಣ್ಣಗಿದೆ ಎಂಬ ಮಾತು ಕೇಳಿಬಂದಿವೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಒಂದು ದಿನ ಮಾತ್ರ ಕಾರ್ಯಕರ್ತರು, ಪದಾಧಿಕಾರಿಗಳ ಸಭೆ ನಡೆಸಿದ್ದನ್ನು ಬಿಟ್ಟರೆ ಸಾರ್ವಜನಿಕ ಪ್ರಚಾರ ಸಭೆ ನಡೆಸಿಲ್ಲ. ಅದರಲ್ಲೂ ಕಾಂಗ್ರೆಸ್‌ ಪಕ್ಷ ತಾಲ್ಲೂಕಿನ ಮೂರ್ನಾಲ್ಕು ಹಳ್ಳಿಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಅಭ್ಯರ್ಥಿ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ಬಹಿರಂಗ ಸಭೆ ನಡೆಸಿದ್ದರೆ ಬಿಜೆಪಿ ತಾಲ್ಲೂಕು ಕೇಂದ್ರದಲ್ಲಿ ಮಾತ್ರ ಒಂದು ಬಾರಿ ಪದಾಧಿಕಾರಿಗಳ ಸಭೆ ನಡೆಸಿವೆ. ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ ಸೇರಿದಂತೆ ಯಾವುದೇ ನಾಯಕರು ತಾಲ್ಲೂಕಿಗೆ ಭೇಟಿ ನೀಡದಿರುವುದು ಅಚ್ಚರಿ ಮೂಡಿಸಿದೆ.

ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ನಂತರ ಈ ಕ್ಷೇತ್ರದ ಕಾರ್ಯಕರ್ತರು, ಮುಖಂಡರಲ್ಲಿ ಹೆಚ್ಚಿನ ಹುರುಪು ಎದ್ದುಕಾಣುತ್ತಿದೆ. ಆದರೆ ಬಿಜೆಪಿ ಅಭ್ಯರ್ಥಿ ಪಟ್ಟಣದವರೇ ಆಗಿದ್ದರೂ ಮತ್ತು ದೊಡ್ಡನಗೌಡ ಪಾಟೀಲ ಜಿಲ್ಲೆಯಲ್ಲಿ ಏಕೈಕ ಬಿಜೆಪಿ ಶಾಸಕರಾಗಿರುವುದು ಅಷ್ಟೇ ಅಲ್ಲ ಬಿಜೆಪಿ ಅಭ್ಯರ್ಥಿ ತಂದೆಯೂ ಆಗಿರುವ ಮಾಜಿ ಶಾಸಕ ಕೆ.ಶರಣಪ್ಪ ಪಟ್ಟಣದಲ್ಲಿದ್ದರೂ ಆ ಪಕ್ಷದಲ್ಲಿ ಅಂಥ ಚೈತನ್ಯ ಕಂಡುಬರುತ್ತಿಲ್ಲ ಎನ್ನಲಾಗುತ್ತಿದೆ.

ಕವಿದ ಮಂಕು: ಈ ಮಧ್ಯೆ ಹಾಲಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಂಗಣ್ಣ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದ್ದು ಪಕ್ಷದಲ್ಲಿ ಒಂದು ರೀತಿಯಲ್ಲಿ ಮಂಕು ಆವರಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅಲ್ಲದೆ ಸಂಗಣ್ಣ ಕಾಂಗ್ರೆಸ್‌ ಪಕ್ಷ ಸೇರಿದರೆ ಅವರನ್ನು ಹಿಂಬಾಲಿಸಲು ಕೆಲ ಪ್ರಮುಖರು ತುದಿಗಾಲ ಮೇಲೆ ನಿಂತಿದ್ದಾರೆ ಎಂಬುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT