ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಹುಲಗಿ ಕಟ್ಟೆಯ ಶಾಸನ ಪತ್ತೆ, ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ಆತಂಕ

ಹೊಳೆ ಮುದ್ಲಾಪುರದ ಹುಲಗಿ ಅಣೆಕಟ್ಟೆಯ ಹತ್ತಿರ ನಡೆಯುತ್ತಿರುವ ಆಧುನೀಕರಣ ಕಾಮಗಾರಿ
Published 7 ಜೂನ್ 2024, 6:06 IST
Last Updated 7 ಜೂನ್ 2024, 6:06 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದ ನೀರು ಸರಾಗವಾಗಿ ಕಾಲುವೆಗಳ ಮೂಲಕ ಹರಿದು ರೈತರಿಗೆ ಅನುಕೂಲ ಒದಗಿಸಲು ಕೊಪ್ಪಳ ತಾಲ್ಲೂಕಿನ ಹೊಳೆ ಮುದ್ಲಾಪುರದ ಹುಲಗಿ ಅಣೆಕಟ್ಟೆಯ ಹತ್ತಿರ ನಡೆಯುತ್ತಿರುವ ವಿಜಯನಗರ ಕಾಲುವೆಗಳ ಆಧುನೀಕರಣ ಕಾಮಗಾರಿಯಿಂದಾಗಿ ಅಲ್ಲಿನ ಶಾಸನಕ್ಕೆ ಮತ್ತು ಅಣೆಕಟ್ಟೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ.

ವಿಜಯನಗರ ಕಾಲುವೆ ಯೋಜನೆ ಕಾಮಗಾರಿಯನ್ನು ಕರ್ನಾಟಕ ನೀರಾವರಿ ನಿಗಮ, ವಿಜಯನಗರ ಕಾಲುವೆಗಳ ಆಧುನಿಕರಣ ಯೋಜನೆ, ಮುನಿರಾಬಾದ್‌ನ ನಂ-1 ತುಂಗಾಭದ್ರ ಜಲಾಶಯ ವಿಭಾಗ ಜಂಟಿಯಾಗಿ ನಡೆಸುತ್ತಿದೆ. ಹುಲಿಗಿ ಅಣೆಕಟ್ಟು ಮೂಲವಾಗಿ ಕಲ್ಯಾಣ ಚಾಲಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದು ಎಂದು ಹೇಳಲಾಗುತ್ತಿದ್ದು, ಇದೇ ಜಾಗದಲ್ಲಿ ಹಲವು ದಿನಗಳ ಹಿಂದೆ ಲಭಿಸಿದ ಶಾಸನದಿಂದಾಗಿ ಈ ಅಣೆಕಟ್ಟು ವಿಜಯನಗರ ಅರಸರ ಕಾಲದಲ್ಲಿಯೂ ದುರಸ್ತಿಯಾಗಿತ್ತು ಎನ್ನುವ ಮಾಹಿತಿ ಗೊತ್ತಾಗಿದೆ.

ಈ ಭಾಗದಲ್ಲಿರುವ ಬಹುತೇಕ ಅಣೆಕಟ್ಟುಗಳು ವಿಜಯನಗರ ಕಾಲದಲ್ಲಿ ನಿರ್ಮಾಣವಾಗಿದ್ದರೂ ಶಾಸನದ ಪ್ರಕಾರ 1888ರಲ್ಲಿ ಹುಲಿಗಿ ಅಣೆಕಟ್ಟು ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ. ಅಣೆಕಟ್ಟಿನ ಅಲ್ಲಲ್ಲಿ ಸೋರಿಕೆಯಿದ್ದು, ಇದನ್ನು ಸರಿಪಡಿಸಲು ಏಷ್ಯನ್‌ ಬ್ಯಾಂಕ್‌ ಸಹಯೋಗದಲ್ಲಿ ರಾಜ್ಯ ಸರ್ಕಾರ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಕಾಮಗಾರಿಯಿಂದಾಗಿ ಸ್ಮಾರಕ ಮತ್ತು ಅಣೆಕಟ್ಟಿನ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ.

ವಿಜಯನಗರ ಕಾಲದಲ್ಲಿ ಅಣೆಕಟ್ಟುಗಳನ್ನು ಹೇಗೆ ಕಟ್ಟಲಾಗಿದೆ. ಅವುಗಳ ಗಟ್ಟಿತನ ಎಂಥದ್ದು? ಎಂದು ನೋಡಲು ಇರುವ ಕೆಲವೇ ದಾಖಲೆಗಳಲ್ಲಿ ಇದು ಕೂಡ ಒಂದು. ಬೃಹತ್‌ ಗಾತ್ರದ ಕಲ್ಲುಬಂಡೆಗಳು, ಅಣೆಕಟ್ಟಿನ ಸ್ಮಾರಕಗಳು ಉಳಿದಿದ್ದು ಅವುಗಳನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕಾಗಿದೆ. ಹೂಳು ತುಂಬದಂತೆ ಹಾಗೂ ಸರಾಗವಾಗಿ ನೀರು ಹರಿದು ಹೋಗುವಂತೆ ಕಾಮಗಾರಿ ಮಾಡಬೇಕಾಗಿದೆ. ಆದರೆ ಇಲ್ಲಿ ಐತಿಹಾಸಿಕ ಪುರಾವೆಗಳ ಉಳಿವಿಗೆ ಕಾಮಗಾರಿ ವೇಳೆ ಕ್ರಮ ಕೈಗೊಳ್ಳುತ್ತಿಲ್ಲ. ಅಣೆಕಟ್ಟಿಗೆ ಕೆಲವು ಭಾಗಗಳಿಗೆ ಕಾಂಕ್ರೀಟ್‌ ಹಾಕಿ ಮುಚ್ಚಲಾಗುತ್ತಿದೆ ಎಂದು ಇತಿಹಾಸ ತಜ್ಞರು ಹಾಗೂ ಹೋರಾಟಗಾರರು ಆತಂಕ ಆರೋಪಿಸಿದ್ದಾರೆ.

ಶಾಸನದ ಮಹತ್ವವೇನು?: ಶಾಸನ ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಪಕ್ಕದ ಹುಟ್ಟುಬಂಡೆಯಲ್ಲಿದೆ. ಇದು 14 ಆಡಿ ಉದ್ದ, ಮೂರು ಅಡಿ ಅಗಲವಾಗಿದ್ದು, ಆರು ಸಾಲಿನ ಕನ್ನಡ ಶಾಸನವಾಗಿದೆ. 

ವಿಜಯನಗರದ ಅರಸರ ಮಹಾಪ್ರಧಾನ ನಾಗಂಣದಂಣನಾಯಕನು ಮಲಿನಾಥದೇವರ ವಾಯುವ್ಯಕ್ಕೆ ಕಲಊರ ಎಂಬ ಸ್ಥಳದಲ್ಲಿ ತುಂಗಾಭದ್ರ ನದಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿಸುತ್ತಾರೆ. ಈ ಕಟ್ಟೆಗೆ ಹುಲಿಗಿಯಕಟ್ಟಿ ಎಂಬ ಉಲ್ಲೇಖವಿದೆ. ಇದು ಪತ್ತೆಯಾದ ಬಳಿಕ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಿಬ್ಬನ್‌ ಕಟ್ಟಿ ಗುರುತು ಮಾಡಿ  ಶಾಸನ ಪತ್ತೆಯಾಗಿದೆ ಎಂದು ಹೇಳಿದ್ದರು. ಆದರ ಮರುದಿನವೇ ಕಣ್ಣೆದುರೇ ಶಾಸನವಿದ್ದರೂ ಗುರುತು ಸಿಗದಂತಾಗಿದೆ. ಇದರ ಪಕ್ಕದಲ್ಲಿಯೇ ಕಾಂಕ್ರಿಟ್‌ ಹಾಕಿ ಸಿಮೆಂಟ್‌ ಚೀಲಗಳನ್ನು ಬೀಸಾಡಲಾಗಿತ್ತು. ಆದ್ದರಿಂದ ಶಾಸನದ ರಕ್ಷಣೆಗೆ ಕ್ರಮ ವಹಿಸಬೇಕಿದೆ.

’ಅಣೆಕಟ್ಟಿನ ಮೂಲ ಸ್ವರೂಪಕ್ಕೆ ಧಕ್ಕೆಯಾದರೆ ಹಾಗೂ ಕಳಪೆ ಕಾಮಗಾರಿ ನಡೆದರೆ ಹೋರಾಟ ನಡೆಸಲಾಗುವುದು. ಐತಿಹಾಸಿಕವಾದ ಇಂಥ ಸ್ಮಾರಕಗಳನ್ನು ಉಳಿಸಬೇಕು. ಈ ಕಾಮಗಾರಿಯಿಂದಾಗಿ ರೈತರಿಗೂ ಅನುಕೂಲವಾಗಿಲ್ಲ’ ಎಂದು ಹೋರಾಟಗಾರ ಪಂಪಾಪತಿ ರಾಟಿ ಅಸಮಾಧಾನ ವ್ಯಕ್ತಪಡಿಸಿದರು.

ಹುಲಿಗಿ ಅಣೆಕಟ್ಟಿನ ಬಳಿ ನಡೆಯುತ್ತಿರುವ ಆಧುನೀಕರಣ ಕಾಮಗಾರಿ
ಹುಲಿಗಿ ಅಣೆಕಟ್ಟಿನ ಬಳಿ ನಡೆಯುತ್ತಿರುವ ಆಧುನೀಕರಣ ಕಾಮಗಾರಿ
ಕಾಮಗಾರಿ ಸ್ಥಳದಲ್ಲಿ ಎಲ್ಲೆಂದರಲ್ಲಿ ಬೀಸಾಡಿರುವ ಸಿಮೆಂಟ್‌ ಚೀಲಗಳು
ಕಾಮಗಾರಿ ಸ್ಥಳದಲ್ಲಿ ಎಲ್ಲೆಂದರಲ್ಲಿ ಬೀಸಾಡಿರುವ ಸಿಮೆಂಟ್‌ ಚೀಲಗಳು

ನೀರು ನಾಯಿ ಸಂರಕ್ಷಿತ ಪ್ರದೇಶ

ಹೊಳೆ ಮುದ್ಲಾಪುರದ ಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸರ್ಕಾರ 2015ರಲ್ಲಿ ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆ. ಅದರಲ್ಲಿಯೂ ಹುಲಿಗಿ ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶ ನೀರು ನಾಯಿಗಳಿಗೆ ಹಾಟ್‌ ಸ್ಪಾಟ್‌ ಆಗಿದೆ. ಈ ಅಣೆಕಟ್ಟೆನ ಸುತ್ತಲೂ ಮಣ್ಣಿನ ಹಾಗೂ ಕಲ್ಲಿನ ನಡುಗಡ್ಡೆಗಳು ಕಂಡುಬರುತ್ತವೆ. ನೀರು ನಾಯಿಗಳು ಗುಂಪಾಗಿರಲು ಮರಿ ಮಾಡಲು ವಿಶ್ರಾಂತಿ ಪಡೆಯಲು ಈ ಜಾಗಕ್ಕೆ ಬರುವುದು ಸಾಮಾನ್ಯ. ಆದರೆ ಕಾಲುವೆಗಳ ಆಧುನೀಕರಣದ ನೆಪದಲ್ಲಿ ಮಣ್ಣಿನ ನಡುಗಡ್ಡೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಹೆಸರು ಹೇಳಲು ಬಯಸದ ವನ್ಯಜೀವಿ ತಜ್ಞರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ನೀರು ನಾಯಿಗಳು ಹೆಚ್ಚು ಓಡಾಡುವುದರಿಂದ ಬೆಳಿಗ್ಗೆ ಒಂಬತ್ತು ಗಂಟೆ ನಂತರ ಹಾಗೂ ಸಂಜೆ ಆರು ಗಂಟೆ ಬಳಿಕ ಯಂತ್ರಗಳಿಂದ ಕಾಮಗಾರಿ ನಡೆಸಬೇಕು. ಆದರೆ ಆ ನಿಯಮ ಇಲ್ಲಿ ಪಾಲನೆಯಾಗುತ್ತಿಲ್ಲ ಎನ್ನುವ ಆರೋಪ ಅವರದ್ದು.

ಪತ್ರ ಬರೆಯಲು ನಿರ್ಧಾರ

‘ಹುಲಿಗಿ ಅಣೆಕಟ್ಟು ಸಮೀಪ ಲಭಿಸಿದ ಶಾಸನ ಅತ್ಯಂತ ಮಹತ್ವದ್ದಾಗಿದ್ದು ಪುರಾತತ್ವ ಇಲಾಖೆಯ ಎಂಜಿನಿಯರ್‌ ಸಮ್ಮುಖದಲ್ಲಿಯೇ ಸಂರಕ್ಷಣೆ ಮಾಡಬೇಕು ಎಂದು ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಲಾಗಿದೆ. ಡ್ರೋನ್‌ ಮೂಲಕ ಶಾಸನದ ದೃಶ್ಯಾವಳಿ ಸೆರೆ ಹಿಡಿದೂ ದಾಖಲೆ ಮಾಡಲಾಗಿದೆ. ಶಾಸನ ಸಂರಕ್ಷಣೆಗಾಗಿ ನೀರಾವರಿ ಇಲಾಖೆಗೆ ಪತ್ರವನ್ನೂ ಬರೆಯಲಾಗುವುದು’ ಎಂದು ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಕಮಲಾಪುರ ಹಂಪಿಯ ಉಪ ನಿರ್ದೇಶಕ ಆರ್.ಶೇಜೇಶ್ವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಆಧುನೀಕರಣ ಕಾಮಗಾರಿಗೆ ವಿರೋಧವಿಲ್ಲ. ಆದರೆ ವಿಜಯನಗರ ಕಾಲದ ಅಣೆಕಟ್ಟು ಹಾಗೂ ಶಾಸನಕ್ಕೆ ಧಕ್ಕೆಯಾಗದಂತೆ ಕ್ರಮ ವಹಿಸಿ ಅಧಿಕಾರಿಗಳು ರೈತರಿಗೆ ಅನುಕೂಲ ಮಾಡಿಕೊಡಬೇಕು.
–ಜನಾರ್ದನ ಹುಲಿಗಿ, ನೀರು ಬಳಕೆದಾರರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT