ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಹುಲಗಿ ಕಟ್ಟೆಯ ಶಾಸನ ಪತ್ತೆ

14 ಆಡಿ ಉದ್ದ, 3 ಆಡಿ ಆಗಲದ ಆರು ಸಾಲಿನ ಕನ್ನಡ ಶಾಸನ
Published 24 ಮೇ 2024, 3:14 IST
Last Updated 24 ಮೇ 2024, 3:14 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಹೊಳೆ ಮುದ್ಲಾಪುರದ ಹುಲಗಿ ಅಣೆಕಟ್ಟೆಯ ಹತ್ತಿರ ನಡೆಯುತ್ತಿರುವ ನೀರಾವರಿ ಸಂಬಂಧಿತ ಕಾಮಗಾರಿಯ ವೇಳೆ ಹುಲಗಿ ಕಟ್ಟೆಯ ಶಾಸನ ಪತ್ತೆಯಾಗಿದೆ.

ಶಾಸನವು ತುಂಗಾಭದ್ರ ನದಿಗೆ ಅಡ್ಡಲಾಗಿ ಕಟ್ಟಿರುವ ಹುಲಿಗೆಯ ಅಣೆಕಟ್ಟೆಯ ಹೊಳೆ ಮುದ್ಲಾಪುರದ ಹತ್ತಿರದ ಅಣೆಕಟ್ಟಿನ ಪಕ್ಕದಲ್ಲಿ ಹುಟ್ಟುಬಂಡೆಯಲ್ಲಿದೆ. ಇದು 14 ಆಡಿ ಉದ್ದ, ಮೂರು ಆಡಿ ಅಗಲವಾಗಿದ್ದು ಆರು ಸಾಲಿನ ಕನ್ನಡ ಶಾಸನವಾಗಿದೆ. ಈ ಶಾಸನವು ತುಂಗಾಭದ್ರ ನೀರಿನಿಂದ ಮುಳುಗಿರುತ್ತಿತ್ತು ಈ ವರ್ಷ ಮಳೆ ಕಡಿಮೆ ಆದ್ದರಿಂದ ಶಾಸನವು ಕಂಡು ಬಂದಿದೆ.

ವಿಜಯನಗರ ಕಾಲುವೆ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮ, ವಿಜಯನಗರ ಕಾಲುವೆಗಳ ಆಧುನಿಕರಣ ಯೋಜನೆ, ಮುನಿರಾಬಾದ್‌ನ ನಂ-1 ತುಂಗಾಭದ್ರ ಜಲಾಶಯ ವಿಭಾಗ ಜಂಟಿಯಾಗಿ ಕಾಮಗಾರಿ ನಡೆಸುತ್ತಿದೆ. ಈ ವೇಳೆ ವಿಜಯನಗರ ಕಾಲುವೆ ಯೋಜನೆಯ ಸಂವಹನ ಮತ್ತು ದಾಖಲಾತಿ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ಅವರು ಶಾಸನ ಇರುವ ಬಗ್ಗೆ ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಇದನ್ನು ನೋಡಿದ್ದರು.

ಬಳಿಕ ಕಮಲಾಪುರ-ಹಂಪಿಯ ರಾಜ್ಯ ಪುರಾತತ್ವ ಸಂಗ್ರಹಾಲಯ ಪರಂಪರೆ ಇಲಾಖೆಯ ಉಪ ನಿರ್ದೇಶಕ ಆರ್. ಶೇಜೇಶ್ವರ ಹಾಗೂ ಪುರಾತತ್ವ ಸಹಾಯಕರಾದ ಆರ್. ಮಂಜನಾಯ್ಕ  ಕ್ಷೇತ್ರಕಾರ್ಯ ಕೈಗೊಂಡಾಗ ಅಲ್ಲಿ ಆರು ಸಾಲಿನ ವಿಜಯನಗರ ಅರಸರ ಕಾಲದ ಶಾಸನ ಪತ್ತೆಯಾಗಿದೆ.

ಶಾಸನದ ಸಾರಾಂಶ: ಶಾಸನವು ನೀರಿನಲ್ಲಿ ಮುಳುಗಿದ್ದರಿಂದ ತೃಟಿತವಾಗಿದೆ. ಆದರೆ ಶಾಸನವನ್ನು ಓದಿ ಅರ್ಥಯಿಸಲು ಸಾಧ್ಯವಾಗಿದ್ದು, ವಿಜಯನಗರದ ಅರಸರ ಮಹಾಪ್ರಧಾನ ನಾಗಂಣ ದಂಡನಾಯಕನು ಮಲಿನಾಥದೇವರ ವಾಯವ್ಯಕ್ಕೆ ಕಲಊರ ಎಂಬ ಸ್ಥಳದಲ್ಲಿ ತುಂಗಾಭದ್ರ ನದಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿಸುತ್ತಾರೆ. ಈ ಕಟ್ಟೆಗೆ ಹುಲಿಗಿಯಕಟ್ಟಿ ಎಂಬ ಉಲ್ಲೇಖವಿದೆ. ಇಲ್ಲಿಂದ ಒಂದು ಕಾಲುವೆಯನ್ನು ನಿರ್ಮಿಸಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಗೆ ನೀರನ್ನು ಕಾಲುವೆಯ ಮುಖಾಂತರ ನೀರನ್ನು ಹರಿಸಿರುವುದು ಈ ಶಾಸನದಿಂದ ತಿಳಿದುಬರುತ್ತದೆ. ಇದರಲ್ಲಿ ಕಾಲುವೆಯ ಉಲ್ಲೇಖವು ಸಹ ಇದೆ. ಶಾಸನದ ಕುರಿತು ಇಲಾಖೆಯಿಂದ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.

ಶಾಸನ ಓದಿಕೊಟ್ಟ ಜಗದೀಶ ಅಗಸಿಬಾಗಿಲ ಹಾಗೂ ವೆಂಕಟೇಶ ಅವರಿಗೆ ರಾಜ್ಯ ಪುರಾತತ್ತ್ವ ಸಂಗ್ರಹಾಲಯ ಅಭಿನಂದಿಸಿದೆ.

Highlights - ಕೊಪ್ಪಳ ತಾಲ್ಲೂಕಿನ ಹೊಳೆ ಮುದ್ಲಾಪುರದ ಹುಲಗಿ ಅಣೆಕಟ್ಟೆ ಶಾಸನದ ಸಾರಾಂಶ ಹೇಳಿದ ಜಗದೀಶ ಅಗಸಿಬಾಗಿಲ ಪುರಾತತ್ವ ಇಲಾಖೆಯಿಂದ ಕ್ಷೇತ್ರಕಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT