ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಅಂಗವಿಕಲರ ಬಾಳಲ್ಲಿ ‘ಕಲ್ಯಾಣ’ದ ಸಂಭ್ರಮ

ದಾಂಪತ್ಯದ ಜೊತೆಗೆ ಸ್ವಾವಲಂಬಿ ಬದುಕಿಗೂ ನೆರವು
Published 22 ಜನವರಿ 2024, 16:03 IST
Last Updated 22 ಜನವರಿ 2024, 16:03 IST
ಅಕ್ಷರ ಗಾತ್ರ

ಕೊಪ್ಪಳ: ಸುತ್ತಮುತ್ತಲೂ ಮರಗಳು ಇರುವ ಇಲ್ಲಿನ ಗವಿಮಠದ ಆವರಣದ ತಂಪಿನಲ್ಲಿ ಭಾನುವಾರ ಸಂಭ್ರಮ ಮನೆಮಾಡಿತ್ತು. ನೋವುಗಳನ್ನೇ ನುಂಗಿ ನಿತ್ಯ ಸವಾಲುಗಳನ್ನು ಎದುರಿಸಿದ್ದ ಅಂಗವಿಕಲರ ಬದುಕಿನಲ್ಲಿ ‘ಕಲ್ಯಾಣ’ದ ಸಡಗರ ಕಂಡುಬಂತು.

ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಠದ ವತಿಯಿಂದ ಮೊದಲ ಬಾರಿಗೆ ಅಂಗವಿಕಲರ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊಪ್ಪಳ, ಧಾರವಾಡ, ಹಾವೇರಿ, ವಿಜಯನಗರ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ಬಂದಿದ್ದ ವಧು–ವರರು ಇಲ್ಲಿ ಸತಿ ಪತಿಗಳಾದರು.

‘ಜೀವನ ಸಂಗಾತಿ ಜೊತೆಗೆ ಜೀವನೋಪಾಯ’ ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ ವಿವಾಹ ಕಾರ್ಯಕ್ರಮದಲ್ಲಿ ನವದಂಪತಿಗೆ ಬೆಂಗಳೂರಿನ ಸೆಲ್ಕೊ ಫೌಂಡೇಷನ್‌ ನೆರವಿನೊಂದಿಗೆ ಎಲ್ಲರಿಗೂ 64 ಚದರ ಅಡಿ ಅಳತೆ ಹೊಂದಿರುವ ಸೋಲಾರ್‌ ವ್ಯವಸ್ಥೆಯುಳ್ಳ ಅಂಗಡಿಗಳನ್ನು ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳಲು  ಉಡುಗೊರೆಯಾಗಿ ನೀಡಲಾಯಿತು.

ಇಲ್ಲಿ ಮದುವೆಯಾದವರು ವಾಸಿಸುವ ಊರುಗಳಿಗೆ ತೆರಳಿ ಅಲ್ಲಿನ ಜಿಲ್ಲಾಡಳಿತದಿಂದ ಅವರಿಗೆ ಅಂಗಡಿಗಳನ್ನು ತೆರೆಯಲು ಜಾಗದ ವ್ಯವಸ್ಥೆ ಕಲ್ಪಿಸಿಕೊಡುವ ಕೆಲಸವನ್ನು ಸೆಲ್ಕೊ ಮಾಡಲಿದೆ. ಈ ಮೂಲಕ ಅಂಗವಿಕಲರ ಸ್ವಾವಲಂಬಿ ಬದುಕಿಗೆ ಗವಿಮಠ ಮತ್ತು ಸೆಲ್ಕೊ ಫೌಂಡೇಷನ್‌ ನೆರವಾಗುತ್ತಿವೆ. 

ಈ ವೇಳೆ ಮಾತನಾಡಿದ ಗವಿಸಿದ್ಧೇಶ್ವರ ಸ್ವಾಮೀಜಿ, ‘ಪ್ರತಿ ವರ್ಷ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಜಾತ್ರೆಯ ಕಾರ್ಯಕ್ರಮ ಆರಂಭಿಸಲಾಗುತ್ತಿತ್ತು. ಈ ಬಾರಿ ಮಹಿಳೆಗೆ ಮುತ್ತೈದೆ ಭಾಗ್ಯದ ಜೊತೆಗೆ ಸ್ವಾವಲಂಬಿ ಬದುಕು ಕಲ್ಪಿಸುವ ಕಾರ್ಯದ ಮೂಲಕ ಜಾತ್ರೆ ಆರಂಭಿಸುತ್ತಿದ್ದೇವೆ. ಇದು ಭಗವಂತನ ಮಕ್ಕಳ ಮದುವೆ’ ಎಂದು ಹೇಳಿದರು.

ಕೊಪ್ಪಳದ ಗವಿಮಠದಲ್ಲಿ ಭಾನುವಾರ ನಡೆದ ಅಂಗವಿಕಲರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನವ ದಂಪತಿಗೆ ಆಶೀರ್ವಾದ ಮಾಡಿದರು
–ಪ್ರಜಾವಾಣಿ ಚಿತ್ರ
ಕೊಪ್ಪಳದ ಗವಿಮಠದಲ್ಲಿ ಭಾನುವಾರ ನಡೆದ ಅಂಗವಿಕಲರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನವ ದಂಪತಿಗೆ ಆಶೀರ್ವಾದ ಮಾಡಿದರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT