ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಬಣ್ಣ ಕುಟುಂಬಕ್ಕೆ ಪ್ರಶಸ್ತಿ ಪ್ರದಾನ ಮಾಡಿ’

ರಂಗಾಸಕ್ತರ, ಸಾರ್ವಜನಿಕರ ಆಗ್ರಹ
Published 12 ಡಿಸೆಂಬರ್ 2023, 6:50 IST
Last Updated 12 ಡಿಸೆಂಬರ್ 2023, 6:50 IST
ಅಕ್ಷರ ಗಾತ್ರ

ಕೊಪ್ಪಳ: ಗುಬ್ಬಿವೀರಣ್ಣ ಪ್ರಶಸ್ತಿ ಘೋಷಣೆಯಾದರೂ ಅದನ್ನು ಪಡೆಯುವ ಮೊದಲೇ ಮೃತಪಟ್ಟ ಹೆಸರಾಂತ ರಂಗಭೂಮಿ ಕಲಾವಿದ ಕುಕನೂರಿನ ಬಾಬಣ್ಣ ಕಲ್ಮನಿ ಅವರ ಕುಟುಂಬದವರಿಗೆ ಈಗಲಾದರೂ ಸರ್ಕಾರ ತ್ವರಿತವಾಗಿ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ರಂಗಾಸಕ್ತರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಯಾನ ಶುರುವಾಗಿದ್ದು, ‘ಬದುಕಿದ್ದಾಗಲೇ ಮೇರು ಕಲಾವಿದನಿಗೆ ಪ್ರಶಸ್ತಿ ಕೊಟ್ಟಿದ್ದರೆ, ಪ್ರಶಸ್ತಿಯ ಗೌರವ ಹೆಚ್ಚಾಗುತ್ತಿತ್ತು’ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ‘ಇಳಿವಯಸ್ಸಿನಲ್ಲಿ ಸಿಕ್ಕ ಪ್ರಶಸ್ತಿಯ ಖುಷಿಯನ್ನು ಆನಂದಿಸದೇ ಬಾಬಣ್ಣ ನಿಧನರಾದರು. ಪ್ರಶಸ್ತಿ ಮೊತ್ತ ₹5 ಲಕ್ಷ ಬೇಗನೆ ಲಭಿಸಿದ್ದರೆ ಅವರ ಔಷಧೋಪಚಾರಕ್ಕೆ ಅನುಕೂಲವಾಗುತ್ತಿತ್ತು. ರಂಗಕರ್ಮಿಗೆ ಮೀಸಲಾದ ವಿಶೇಷ ಪ್ರಶಸ್ತಿ ಆರಂಭಿಸಿ ಬಾಬಣ್ಣರ ಕುಟುಂಬಕ್ಕಾದರೂ ಶೀಘ್ರ ಗೌರವ ನೀಡುವ ಕೆಲಸವಾಗಲಿ’ ಎಂದು ಆಗ್ರಹಿಸಿದ್ದಾರೆ.

‘ನಮ್ಮ ಜಿಲ್ಲೆಯವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವರಾಗಿರುವ ಕಾರಣ ಅವರೇ ಮುತುವರ್ಜಿ ವಹಿಸಬೇಕು. ಮರಣೋತ್ತರವಾದರೂ ಪ್ರಶಸ್ತಿ ಪ್ರದಾನ ಮಾಡಬೇಕು’ ಎಂದಿದ್ದಾರೆ.

ರಂಗಭೂಮಿ ಕಲಾವಿದ ಬಸವರಾಜ ಬಿನ್ನಾಳ ಅವರು, ‘ಕಳೆದ ವರ್ಷ ಮಾರ್ಚ್‌ ಅಂತ್ಯದಲ್ಲಿ ರಾಜ್ಯ ಸರ್ಕಾರ ಬಾಬಣ್ಣ ಅವರಿಗೆ ಪ್ರಶಸ್ತಿ ಪ್ರಕಟಿಸಿತ್ತು. ಬದುಕಿನುದ್ದಕ್ಕೂ ಕಡು ಕಷ್ಟದಲ್ಲಿಯೇ ಕಳೆದ ಅವರಿಗೆ ಸರ್ಕಾರ ಸಕಾಲದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದರೆ ಆ ಹಣ ಅವರಿಗೆ ದೊಡ್ಡಮಟ್ಟದಲ್ಲಿ ಅನುಕೂಲವಾಗುತ್ತಿತ್ತು’ ಎಂದು ಹೇಳಿದ್ದಾರೆ. 

‘ಹುಟ್ಟುತ್ತಲೆ ಬಡತನವನ್ನು ಬೆನ್ನಿಗೆ ಕಟ್ಟಿಕೊಂಡು ತಾಯಿ ರೆಹೆಮಾನಮ್ಮ ಮಡಿಲಲ್ಲಿ ಬೆಳೆದು ರಂಗಭೂಮಿಯಲ್ಲಿಯೇ ಅರಳಿದ ಬಾಬಣ್ಣ ಅವರ ಕುಟುಂಬಕ್ಕೆ ಸರ್ಕಾರ ತ್ವರಿತವಾಗಿ ನೆರವಾಗಬೇಕು’ ಎಂದು ಒತ್ತಾಯಿಸಿದ್ದಾರೆ.

- ಪ್ರದಾನ ಎದುರು ನೋಡುತ್ತಿರುವ ಮಾರೆಪ್ಪ

ಯಲಬುರ್ಗಾ ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದ ಮಾರೆಪ್ಪ ಚನ್ನದಾಸರ ಅವರಿಗೆ 2020–21ನೇ ಸಾಲಿನ ‘ಜಾನಪದ ಶ್ರೀ’ ಪ್ರಶಸ್ತಿ ಲಭಿಸಿದೆಯಾದರೂ ಸರ್ಕಾರದಿಂದ ಪ್ರದಾನವಾಗಿಲ್ಲ. ಬದುಕಿನ ಇಳಿಸಂಜೆಯಲ್ಲಿರುವ ಅವರು ಪ್ರಶಸ್ತಿ ಪ್ರದಾನವನ್ನೇ ಎದುರು ನೋಡುತ್ತಿದ್ದಾರೆ. ‘ಪ್ರಶಸ್ತಿ ನನಗೆ ಘೋಷಣೆಯಾಗಿದ್ದಕ್ಕೆ ಸಂತೋಷವಾಗಿದೆ. ಆದಷ್ಟು ಬೇಗನೆಯಾದರೆ ಬದುಕಿದ್ದ ಕಾಲದಲ್ಲಿ ಸಂತೋಷ ಪಡುತ್ತೇನೆ. ಬಾಬಣ್ಣನಿಗೆ ಪ್ರಶಸ್ತಿ ಸಿಕ್ಕರೂ ಪಡೆದುಕೊಳ್ಳಲು ಅವಕಾಶವೇ ಸಿಗಲಿಲ್ಲ. ನನ್ನ ಬದುಕಿನಲ್ಲಿಯೂ ಅಂಥದ್ದೇ ನೋವು ಬಾರದಿರಲಿ’ ಎಂದು ಮಾರೆಪ್ಪ ಚನ್ನದಾಸರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT