ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ | ಐತಿಹಾಸಿಕ ಪಟ್ಟಣದಲ್ಲಿ ರಥೋತ್ಸವ ಇಂದು

ಸರ್ವಾಲಂಕೃತಗೊಂಡ ತೇರು, ಕನಕಾಚಲಪತಿ ದೇಗುಲ
Published 1 ಏಪ್ರಿಲ್ 2024, 6:40 IST
Last Updated 1 ಏಪ್ರಿಲ್ 2024, 6:40 IST
ಅಕ್ಷರ ಗಾತ್ರ

ಕನಕಗಿರಿ: 500 ವರ್ಷಗಳ ಕಾಲ ಒಂದೇ ರಾಜಮನೆತನದಿಂದ ಆಳ್ವಿಕೆಗೊಳಪಟ್ಟ ಮೊದಲ ಪ್ರಾಂತ್ಯ, ಮೌರ್ಯರ ದೊರೆ ಅಶೋಕನ ಕಾಲದಿಂದಲ್ಲೂ ಪ್ರಸಿದ್ಧಿ ಪಡೆದಿದ್ದ ಸ್ಥಳ, ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲಮಿ ತನ್ನ ಕೃತಿಯಲ್ಲಿ ಉಲ್ಲೇಖಿಸಿರುವ ಕನಕಗಿರಿ (ಕಲ್ಲಿಗೇರಿಸ್)ನಲ್ಲಿಇಂದು ಕನಕಾಚಲಪತಿಯ ಮಹಾರಥೋತ್ಸವ ನಡೆಯಲಿದೆ.

ವಿಜಯನಗರದ ಅರಸರ ಪಾಳೆಯಗಾರ ಗುಜ್ಜಲ ವಂಶಸ್ಥರಿಂದ ಆಳಲ್ಪಟ್ಟ ಕನಕಗಿರಿಯ ಬಗ್ಗೆ ಸ್ಕಂದ ಪುರಾಣದ ತುಂಗಾಮಹಾತ್ಮೆಯಲ್ಲಿ ಸ್ಥಳವರ್ಣನೆ, ಕನಕಾಚಲಪತಿಯ ಅಷ್ಟೋತ್ತರವೂ ಇದೆ. ಪುರಂದರದಾಸರು, ವಿಜಯದಾಸರು, ಜಗನ್ನಾಥದಾಸರು ಕೀರ್ತನೆಗಳನ್ನು ರಚಿಸಿದ್ದಾರೆ.

ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿ ಕನಕಗಿರಿಯ ನಾಯಕರಿಗೆ ಆಸ್ಥಾನದಲ್ಲಿ ತಮ್ಮ ಬಲಭಾಗದಲ್ಲಿ ಕನಕಗಿರಿ ನಾಯಕರು ಆಸೀನರಾಗಲು ಅವಕಾಶ ನೀಡಿದ್ದರು. ಬೇಹುಗಾರಿಕೆ ದಳದ ಮುಖ್ಯಸ್ಥರಾಗಿಯೂ ಕನಕಗಿರಿ ನಾಯಕರು ಕೆಲಸ ಮಾಡಿದ್ದಾರೆ.‌

ಶ್ರೀಕೃಷ್ಣದೇವರಾಯ ತಮ್ಮ ಅಮುಕ್ತಮೌಲ್ಯ ಎಂಬ ಗ್ರಂಥದಲ್ಲಿ ಕನಕಾಚಲಪತಿ ದೇವರ ಮಹಿಮೆಯನ್ನು ಬಣ್ಣಿಸಿದ್ದಾರೆ.

ಕಲೆಯ ತವರೂರು: ಕನಕಗಿರಿ ಬೌದ್ಧ ಧರ್ಮದ ಪ್ರಸಾರ ಕೇಂದ್ರವಾಗಿತ್ತು ಎಂಬುದಕ್ಕೆ ಕೊಪ್ಪಳ, ಮಸ್ಕಿ ಪ್ರದೇಶದಲ್ಲಿ ದೊರೆತ ಆಶೋಕನ ಶಿಲಾಶಾಸನಗಳು ಆಧಾರ ಒದಗಿಸುತ್ತದೆ.

ಇಲ್ಲಿನ ದೊರೆಗಳು ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಕೃಷಿ ಕ್ಷೇತ್ರಕ್ಕೆ ನಾಯಕರು ತಮ್ಮದೆಯಾದ ಕಾಣಿಕೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಪಡೆದ ಜಯ ವೆಂಕಟಚಾರ್ಯ, ಶ್ರೀಕೃಷ್ಣ ಪಾರಿಜಾತ ಕೃತಿ ಬರೆದ ಚಿದಾನಂದ ಅವಧೂತರು, ಹಾಗೂ ಕವಿ ಅಪರಾಳ ತಮ್ಮಣ್ಣ ಅವರಿಗೆ ರಾಜಾಶ್ರಯ ನೀಡಲಾಗಿತ್ತು.

ಅದ್ದೂರಿಯಾಗಿ ರಥೋತ್ಸವ ನಡೆಯಲು ರಾಣಿ ಗೌರಮ್ಮ ನೀಡಿದ ಕೊಡುಗೆ ಅಪಾರವಾಗಿದೆ. ತೇರು ನಿಲ್ಲುವ ಸ್ಥಳ ಗೌರಮ್ಮಳ ಅವಧಿಯಲ್ಲಿ ಆಗಿದೆ.

ಪ್ರತಿ ವರ್ಷ ಪಾಲ್ಗುಣ ಮಾಸದಿಂದ ಕನಕರಾಯನ ಜಾತ್ರೆ ಆರಂಭವಾಗುತ್ತದೆ, 1905ರಲ್ಲಿ ಈ ತೇರಿನ ಗಡ್ಡಿಯನ್ನು ನಿರ್ಮಿಸಲಾಗಿದೆ. ಆರು ಗಾಲಿಯ ತೇರು ದಕ್ಷಿಣ ಭಾರತದಲ್ಲಿಯೆ ಅತಿ ಎತ್ತರದ ತೇರು ಎಂದು ಪ್ರಸಿದ್ದಿಯಾಗಿದೆ. 72 ಅಡಿ ಎತ್ತರ, ಗಾಲಿಗಳ ಅಗಲ ಮತ್ತು ಎತ್ತರ 12 ಅಡಿ ಅಗಲ ಇದೆ.

ರಥೋತ್ಸವದ ಸಮುಯದಲ್ಲಿ ತೇರಿನ ಗಡ್ಡಿಯ ಮೇಲೆ ಐದು ಪ್ರಕಾರದ ಬಿದಿರು, ಕಟ್ಟಿಗೆಗಳನ್ನು ಕಟ್ಟಲಾಗುತ್ತಿದೆ. ತಳಿರು, ತೋರಳ, ವಿವಿಧ ನಮೂನೆಯ ಗೊಂಬೆಗಳಾದ ದ್ವಾರಪಾಲಕರು, ಗರುಡ, ಹನುಮಂತ, ಇತರೆ ಸುಂದರ ಗೊಂಬೆ, ಭಾವುಟಗಳನ್ನು ಕಟ್ಟಿ ರಥವನ್ನು ಸಿಂಗರಿಸಲಾಗುತ್ತಿದೆ.
ಇಂದು (ಏ 1ರಂದು) ಮಹಾರಥೋತ್ಸವ ನಡೆಯಲಿದೆ.

ಮೂರು ನದಿ ಮೂರು ನಾಮ ಮೂರು ಬಾಗಿಲು...

ಮೂರು ನದಿಗಳ( ಪುಷ್ಪ ಗೋಪಿಕಾ ಹಾಗೂ ಜಯಂತಿ) ಸಂಗಮ ಮೂರು ನಾಮದ ದೇವರು ಮೂರು ಅಗಸಿ ಬಾಗಿಲು ಹೊಂದಿದ ಐತಿಹಾಸಿಕ ಪಟ್ಟಣ ಎಂದರೆ ಅದು ಕನಕಗಿರಿ. ಇಲ್ಲಿನ ಲಕ್ಷ್ಮೀ ನರಸಿಂಹ ದೇವಾಲಯವನ್ನು ಕನಕಾಚಲಪತಿ ಕನಕರಾಯ ಎಂತಲೂ ಕರೆಯಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದ ವಾಸ್ತು ಶೈಲಿಯಲ್ಲಿ ನಿರ್ಮಾಣವಾದ ಈ ದೇಗುಲ ಗರ್ಭಗೃಹ ಸುಖನಾಸಿಯನ್ನು ಪರಸಪ್ಪ ನಾಯಕ ನಿರ್ಮಿಸಿದರು. ಈ ದೇವಾಲಯವು ಯಾವುದೇ ಅಧಿಷ್ಠಾನದ ಮೇಲೆ ನಿಂತಿಲ್ಲ ‘ಪ್ರದಕ್ಷಿಣೆ ಪಥ’ ದೇವಾಲಯದ ಹೊರಭಾಗದಲ್ಲಿದೆ. ಮೂರು ಪ್ರವೇಶ ದ್ವಾರಗಳು: ಮೂರು ಪ್ರವೇಶ ದ್ವಾರದ ಮೇಲೆ ಬೃಹತ್ತಾದ ಒಂದೇ ಎತ್ತರದ ಮೂರು ಮುಖ್ಯ ಗೋಪುರಗಳಿವೆ ಇವು ಹಂಪಿಯ ವಿರೂಪಾಕ್ಷ ದೇವಾಲಯದ ಗೋಪುರಗಳನ್ನು ನೆನಪಿಸುತ್ತವೆ. ಯಾವುದೇ ಗೋಡೆಯ ಆಸರೆ ಇಲ್ಲದೆ ಕನಕಾಚಲಪತಿ ದೇಗುಲದ ರಂಗಮಂಟಪ ನಿರ್ಮಿಸಿರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT