ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ ಉತ್ಸವ: ತೊಡೆ ತಟ್ಟಿ ಸಿಂಗ್ರಾಣಿ ಕಲ್ಲು ಎತ್ತಿದ ಸಾಹಸಿ

Published 1 ಮಾರ್ಚ್ 2024, 6:00 IST
Last Updated 1 ಮಾರ್ಚ್ 2024, 6:00 IST
ಅಕ್ಷರ ಗಾತ್ರ

ಕನಕಗಿರಿ: ಕನಕಗಿರಿ ಉತ್ಸವದ ಅಂಗವಾಗಿ ಇಲ್ಲಿ ನಡೆಯುತ್ತಿರುವ ಕ್ರೀಡಾಕೂಟಗಳ ಎರಡನೇ ದಿನವಾದ ಗುರುವಾರ ಸಾಹಸ ಪ್ರದರ್ಶನಗಳು ಭರಾಟೆ ಕಂಡು ಬಂದಿತು. ಭಾರವಾದ ಸಂಗ್ರಾಣಿ (ಸಿಂಗ್ರಾಣಿ) ಕಲ್ಲುಗಳನ್ನು ಎತ್ತುವ ಸಾಹಸ ಜನರ ಮನಸೂರೆಗೊಂಡಿತು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಮೈದಾನದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಗದಗ, ಬಾಗಲಕೋಟೆ, ಧಾರವಾಡ, ಕೊಪ್ಪಳ, ರಾಯಚೂರು ಜಿಲ್ಲೆಯ ಕ್ರೀಡಾ ಪಟುಗಳು ಭಾಗವಹಿಸಿದ್ದರು. 10 ಕೆ.ಜಿ. ತೂಕದಿಂದ 125 ಕೆ.ಜಿ. ವರೆಗಿನ ಸಂಗ್ರಾಣಿ ಕಲ್ಲುಗಳನ್ನು ಗದಗದಿಂದ ತರಲಾಗಿತ್ತು. ಕಲ್ಲುಗಳಿಗೆ ಪೂಜೆ ಸಲ್ಲಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಬಡಿಗೆ ಹಾಗೂ ಇತರೆ ಯಾವುದೇ ಸಾಮಾಗ್ರಿಗಳ ಸಹಾಯವಿಲ್ಲದೆ ಸಿಂಗ್ರಾಣಿ ಕಲ್ಲುಗಳನ್ನು ಕೈಯಿಂದ ತಲೆ ಮೇಲಕ್ಕೆ ಎತ್ತಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕಾದಾಟ ನಡೆಸಿದರು. ಎಂಟು ಜನರ ಸ್ಪರ್ಧಾಳುಗಳು ಕಣದಲ್ಲಿದ್ದರೂ ಇಬ್ಬರು ಮಾತ್ರ 81 ಕೆಜಿ ಭಾರದ ಕಲ್ಲುಗಳನ್ನು ಎತ್ತಿ ಪ್ರಥಮ ಸ್ಥಾನಕ್ಕಾಗಿ ಸೆಣಸಾಟ ನಡೆಸಿದರು.

ರಾಯಚೂರಿನ ವೆಂಕೋಬ ವೀರಾಪುರ ಹಾಗೂ ನರಗುಂದದ ಮುತ್ತು ಗಡ್ಡಿ 81 ಕೆ.ಜಿ. ಭಾರದ ಕಲ್ಲುಗಳನ್ನು ಸಲೀಸಾಗಿ ಎತ್ತಿ 88 ಕೆಜಿ ತೂಕ ಎತ್ತುವಲ್ಲಿ ಕಸರತ್ತು ನಡೆಸಿ ಮೂರನೆ ಯತ್ನದಲ್ಲಿ ವಿಫಲರಾದರು. ಕಲ್ಲು ಎತ್ತರಕ್ಕೆ ಎತ್ತುವ ಪ್ರಮಾಣದ ಮೇಲೆ ವೆಂಕೋಬ ವೀರಾಪುರ ಅವರಿಗೆ ಪ್ರಥಮ ಸ್ಥಾನ ಒಲಿದು ಬಂತು. ಮುತ್ತು ಗಡ್ಡಿ ಅವರು ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರು.

ಕುಷ್ಟಗಿ ತಾಲ್ಲೂಕಿನ ಪುರ ಗ್ರಾಮದ ಹಾಲಪ್ಪ ಅವರು 78 ಕೆಜಿ ತೂಕದ ವರೆಗಿನ ಕಲ್ಲುಗಳನ್ನು ಎತ್ತಿ 81 ಕೆಜಿ ಭಾರದ ಕಲ್ಲನ್ನು ಎತ್ತುವಲ್ಲಿ ವಿಫಲರಾಗಿ ತೃತೀಯ ಸ್ಥಾನಕ್ಕೆ ಸೀಮಿತಗೊಂಡರು. ಬಾಗಲಕೋಟೆ ಜಿಲ್ಲೆಯ ಕಲಾದಗಿಯ 18 ವರ್ಷದ ಯುವಕ ರುದ್ರೇಶ ಅವರು ಅಂಕಣಕ್ಕೆ ಇಳಿದು ಕಲ್ಲು ಎತ್ತುವಾಗ ಅಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳು ಸೀಳೆ, ಕೇಕೆ ಹಾಕಿ ಬೆಂಬಲಿಸಿದರು.

ವಿವಿಧ ಕೌಶಲಗಳನ್ನು ಪ್ರದರ್ಶಿಸಿದರೂ 78 ಕೆಜಿ ತೂಕದ ಕಲ್ಲುಗಳನ್ನು ಎತ್ತಿ ಕಣದಿಂದ ಹಿಂದಕ್ಕೆ ಸರಿದರು. ಮುತ್ತು ಗಡ್ಡಿ ಅವರು ಪ್ರದರ್ಶನಕ್ಕಾಗಿ ಕೈಗೆ ಬಟ್ಟೆ ಕಟ್ಟಿಕೊಂಡು 101 ಕೆಜಿ ತೂಕದ ವರೆಗಿನ ಸಿಂಗ್ರಾಣಿ ಕಲ್ಲುಗಳನ್ನು ಎತ್ತಿ ಸೈ ಎನ್ನಿಸಿಕೊಂಡರು. ಪ್ರತಿಯೊಬ್ಬ ಸ್ಪರ್ಧಾಳು ಸಹ ತೊಡೆ ತಟ್ಟಿ, ಮಣ್ಣು ಹಾಗೂ ಪೌಡರ್ ನಿಂದ ಕಲ್ಲು ಸವರಿ ಕಲ್ಲು ಎತ್ತಿದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಕಾಂತ ತಳವಾರ, ನಾಗರಾಜ, ಹುಸೇನಸಾಬ ಮಕಾನದಾರ ಅವರು ನಿರ್ಣಾಯಕರಾಗಿದ್ದರು. ತಂಗಡಗಿ ಟ್ರಸ್ಟ್ ಕಾರ್ಯದರ್ಶಿ ವೆಂಕಟೇಶ ತಂಗಡಗಿ ಅವರು ವಿಜೇತರಿಗೆ ಕ್ರಮವಾಗಿ ₹10 ಸಾವಿರ ಹಾಗೂ ಪಾರಿತೋಷಕ (ಪ್ರಥಮ), ₹8 ಸಾವಿರ, ಪಾರಿತೋಷಕ (ದ್ವಿತೀಯ) ಹಾಗೂ ₹7 ಸಾವಿರ ಹಾಗೂ ಪಾರಿತೋಷಕ (ತೃತೀಯ) ನೀಡಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಸಹಾಯಕ ಅಧಿಕಾರಿ ತಿಪ್ಪಣ್ಣ ಇದ್ದರು.

ಮಲ್ಲಕಂಬ ಪ್ರದರ್ಶನ: ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬುಧವಾರ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಳೆ ಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ವಸತಿ ಶಾಲೆಯ ಅಂಗವಿಕಲರ ಮಕ್ಕಳು ಆಕರ್ಷಕ ಮಲ್ಲಕಂಬ ಪ್ರದರ್ಶನ ಮಾಡಿದರು.

ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್‌.ಪಿ. ಯಶೋಧಾ ವಂಟಗೋಡಿ ಮಕ್ಕಳ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕನಕಗಿರಿ ತಹಶೀಲ್ದಾರ್‌ ವಿಶ್ವನಾಥ ಮುರಡಿ, ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಕಂದಕೂರ ಪಾಲ್ಗೊಂಡಿದ್ದರು.

ಕ್ಯೂಆರ್ ಕೋಡ್ ಬಿಡುಗಡೆ
ಕನಕಗಿರಿ: ಕನಕಗಿರಿ ಉತ್ಸವದ ಕಾರ್ಯಕ್ರಮಗಳು ಕ್ರೀಡಾಕೂಟಗಳು ಸೇರಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲಾ ಎನ್‌ಐಸಿ ವತಿಯಿಂದ ಕ್ಯೂಆರ್ ಕೋಡ್ ರಚಿಸಲಾಗಿದ್ದು ಉತ್ಸವದ ಕುರಿತು ಹೆಚ್ಚಿನ ಮಾಹಿತಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್‌ ಮಾಡಬಹುದು ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.
ಹಗ್ಗಜಗ್ಗಾಟ; ಕನಕಗಿರಿ ಪ್ರಥಮ
ಕೆಪಿಎಸ್ ಶಾಲೆಯ ಮೈದಾನದಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕನಕಗಿರಿಯ ಪವರ್ ಸ್ಟಾರ್ ತಂಡ ಪ್ರಥಮ ಹೊಸಕೇರೆಯ ದುರ್ಗಾ ಪರಮೇಶ್ವರಿ ತಂಡ ದ್ವಿತೀಯ ಮತ್ತು ಕನಕಗಿರಿಯ ಕನಕಾಚಲ ತಂಡ ತೃತೀಯ ಸ್ಥಾನ ಗಳಿಸಿತು. ಹೊನಲು ಬೆಳಕಿನ ಕಬಡ್ಡಿಯಲ್ಲಿ ಯರಡೋಣ ( ಪ್ರಥಮ) ಹೊಸ ಜೂರಟಗಿ (ದ್ವಿತೀಯ) ಆರ್ಹಾಳ (ತೃತೀಯ) ಮಹಿಳೆಯರ ಕಬಡ್ಡಿಯಲ್ಲಿ ಗಂಗಾವತಿ (ಪ್ರಥಮ) ಜೈ ಕರ್ನಾಟಕ ಕಬಡ್ಡಿ ತಂಡ ಕರಮುಡಿ (ದ್ವಿತೀಯ) ಹಾಗೂ ತಾವರಗೇರಾ ತಂಡ (ತೃತೀಯ) ುಥಗೇಗೂಹ. ಪುರುಷರ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಹನುಮಸಾಗರ ಪ್ರಥಮ ಮಹಿಳೆಯರ ಸ್ಪರ್ಧೆಯಲ್ಲಿ ಹನುಮಸಾಗರ ಪ್ರಥಮ ಸ್ಥಾನ ಪಡೆದುಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT